ನವದೆಹಲಿ[ನ.27]: ದೇಶದ ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ಎಷ್ಟು ಲಂಚ ನೀಡುತ್ತಾರೆ ಎಂಬುದರ ಕುರಿತು ದೇಶಾದ್ಯಂತ ನಡೆಸಿದ ಸಮೀಕ್ಷೆ ಅನ್ವಯ, 2019ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರ ಪ್ರಮಾಣದಲ್ಲಿ ಶೇ.20ರಷ್ಟುಭಾರೀ ಏರಿಕೆಯಾಗಿದೆ ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ. ದೇಶಾದ್ಯಂತ ಭ್ರಷ್ಟಾಚಾರ ಪ್ರಮಾಣದಲ್ಲಿ ಶೇ.10ರಷ್ಟುಇಳಿಕೆಯಾಗಿದ್ದರೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನ ಸರ್ಕಾರಿ ಸೇವೆ ಪಡೆಯಲು ಲಂಚ ನೀಡಿದ ಪ್ರಮಾಣದಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರ ಅಧಿಕಾರದಲ್ಲಿದ್ದಾಗಿನ ವರದಿ ಇದು.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಮತ್ತು ಲೋಕಲ್‌ ಸರ್ಕಲ್ಸ್‌ ದೇಶದ 20 ರಾಜ್ಯಗಳ 248 ಜಿಲ್ಲೆಗಳ 1.90 ಲಕ್ಷ ಜನರನ್ನು ಸಮೀಕ್ಷೆ ಮಾಡಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದರನ್ವಯ ಈ ಹಿಂದಿನ ವರ್ಷದ ಭ್ರಷ್ಟಾಚಾರಕ್ಕೆ ಹೋಲಿಸಿದರೆ ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರದ ಪ್ರಮಾಣದಲ್ಲಿ ಶೇ.10ರಷ್ಟುಇಳಿಕೆಯಾಗಿದೆ. ಹಿಂದಿನ ವರ್ಷ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶೇ.61ರಷ್ಟುಜನ ತಾವು ಲಂಚ ನೀಡಿದ್ದಾಗಿ ಹೇಳಿದ್ದರೆ ಈ ವರ್ಷ ಆ ಪ್ರಮಾಣ ಶೇ.51ಕ್ಕೆ ಇಳಿದಿದೆ.

ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಈಗಲೂ ಬಹುತೇಕ ಜನ ನಗದು ಸ್ವರೂಪದಲ್ಲೇ ಲಂಚ ನೀಡಿದ್ದಾಗಿ ಹೇಳಿದ್ದಾರೆ. ಶೇ.35ರಷ್ಟುಜನ ನಗದು ರೂಪದಲ್ಲಿ ಲಂಚ ನೀಡಿದ್ದಾಗಿ ಹೇಳಿದ್ದರೆ, ಶೇ.16ರಷ್ಟುಜನ ಲಂಚ ನೀಡದೆಯೇ ಕೆಲಸ ಮಾಡಿಸಿಕೊಂಡಿದ್ದಾಗಿ ಹೇಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಲಂಚ ನೀಡಲ್ಪಟ್ಟಇಲಾಖೆಗಳ ಪೈಕಿ ಆಸ್ತಿ ನೋಂದಣಿ ಮತ್ತು ಭೂಮಿ ವಿಷಯ, ಪೊಲೀಸ್‌ ಮತ್ತು ಮುನ್ಸಿಪಲ್‌ ಕಾರ್ಪೊರೇಷನ್‌ಗಳು ಟಾಪ್‌ 3 ಸ್ಥಾನದಲ್ಲಿವೆ.

ದೆಹಲಿ, ಹರ್ಯಾಣ, ಗುಜರಾತ್‌, ಪಶ್ಚಿಮ ಬಂಗಾಳ, ಕೇರಳ, ಗೋವಾ ಮತ್ತು ಒಡಿಶಾ ರಾಜ್ಯಗಳಲ್ಲಿ ಭ್ರಷ್ಟಾಚಾರ ಪ್ರಮಾಣ ಕಡಿಮೆ ಆಗಿದೆ. ಆದರೆ ಕರ್ನಾಟಕ, ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ತೆಲಂಗಾಣ, ತಮಿಳುನಾಡು, ಜಾರ್ಖಂಡ್‌ ಮತ್ತು ಪಂಜಾಬ್‌ನಲ್ಲಿ ಭ್ರಷ್ಟಾಚಾರದ ಪ್ರಮಾಣದಲ್ಲಿ ಹೆಚ್ಚಳವಾಗಿದೆ.