ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ ಗಂಭೀರ ಪರಿಶೀಲನೆ: ಗೃಹ ಸಚಿವ ಪರಮೇಶ್ವರ
ಯಾವ ಉಗ್ರ ಸಂಘಟನೆ ಮಾಡಿದೆ, ಯಾರು ಇದನ್ನೆಲ್ಲಾ ಮಾಡಿದ್ದಾರೆ ಅನ್ನೋ ಪರಿಶೀಲಿಸುತ್ತಿದ್ದೇವೆ. ಅವರು ಭಾರತದವರೇ ಆಗಿದ್ದರೆ ಅಂಥವರಿಗೆ ವಿರುದ್ಧ ಕ್ರಮದ ಕುರಿತು ಭಾರತ ಸರ್ಕಾರ ಜೊತೆ ಮಾತನಾಡುತ್ತೇನೆ ಎಂದ ಗೃಹ ಸಚಿವ ಡಾ. ಜಿ. ಪರಮೇಶ್ವರ
ತುಮಕೂರು(ಡಿ.02): ‘ಕೈಜೈಟ್ಸ್ @ ಬೀಬಲ್ ಡಾಟ್ ಕಾಂ’ ಅನ್ನೋ ಮೇಲ್ ಐಡಿಯಿಂದ ಬೆಂಗಳೂರಿನ ಸುಮಾರು 15 ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಸಂದೇಶ ಬಂದಿದ್ದು, ಇದನ್ನು ನಾವು ಬಹಳ ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇಲ್‌ನ ಮೂಲದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಕಮಿಷನರ್‌ಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಎಲ್ಲಾ ಶಾಲೆಗಳನ್ನು ಪರಿಶೀಲನೆ ಮಾಡುವಂತೆ ತಾಕೀತು ಮಾಡಿದ್ದಾಗಿ ತಿಳಿಸಿದರು.
ಬಾಂಬ್ ಬೆದರಿಕೆ ಪ್ರಕರಣವನ್ನು ಹಗುರವಾಗಿ ನೋಡುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ
ಯಾವ ಉಗ್ರ ಸಂಘಟನೆ ಮಾಡಿದೆ, ಯಾರು ಇದನ್ನೆಲ್ಲಾ ಮಾಡಿದ್ದಾರೆ ಅನ್ನೋ ಪರಿಶೀಲಿಸುತ್ತಿದ್ದೇವೆ. ಅವರು ಭಾರತದವರೇ ಆಗಿದ್ದರೆ ಅಂಥವರಿಗೆ ವಿರುದ್ಧ ಕ್ರಮದ ಕುರಿತು ಭಾರತ ಸರ್ಕಾರ ಜೊತೆ ಮಾತನಾಡುತ್ತೇನೆ ಎಂದರು.
ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯೇ ಕಳುಹಿಸಿದೆ ಅನ್ನೋದನ್ನು ಇನ್ನೂ ಹೇಳುವುದಕ್ಕಾಗುವುದಿಲ್ಲ ಎಂದ ಅವರು, ಮತಾಂತರ ಆಗಬೇಕು, ಇಲ್ಲಾಂದ್ರೆ ನಿಮ್ಮನ್ನು ನಾವು ಬಿಡುವುದಿಲ್ಲ ಎನ್ನುವ ಸಂದೇಶ ಕಳುಹಿಸಿದ್ದಾರೆ.
ಮತಾಂತರದ ವಿಚಾರದಲ್ಲೇ ಕೆಲವು ಮಾತನಾಡಿದ್ದಾರೆ. ಕಳೆದ ವರ್ಷವೂ ಇದೇ ರೀತಿ ಮೆಸೇಜ್ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದು, ಆ ಮೇಲ್ ಸುಳ್ಳಾದಂತೆ, ಇದು ಕೂಡ ಸುಳ್ಳು ಆಗಿರಲಿ ಎಂದು ಹಾರೈಸುವೆ ಎಂದರು.
ಆದರೆ, ಯಾವುದನ್ನೂ ಅಷ್ಟು ಸುಲಭವಾಗಿ ಪರಿಗಣಿಸುವುದಕ್ಕೆ ಆಗುವುದಿಲ್ಲ. ಶೇ.1 ಇದ್ದರೂ ಕೂಡ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಗೂ ತಿಳಿಸುತ್ತೇವೆ ಎಂದರು.