ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.‘ಪರಿಶಿಷ್ಟಜಾತಿಗಳ ಸಂಕಲ್ಪ ಸಮಾವೇಶ’ ನಡೆಸುವ ಮೂಲಕ ಹೋರಾಟಗಾರರು ಶಕ್ತಿ ಪ್ರದರ್ಶಿಸಿ ಹಕ್ಕೊತ್ತಾಯ ಮಾಡಿದರು.

ಬೆಂಗಳೂರು (ಜ.11) : ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.‘ಪರಿಶಿಷ್ಟಜಾತಿಗಳ ಸಂಕಲ್ಪ ಸಮಾವೇಶ’ ನಡೆಸುವ ಮೂಲಕ ಹೋರಾಟಗಾರರು ಶಕ್ತಿ ಪ್ರದರ್ಶಿಸಿ ಹಕ್ಕೊತ್ತಾಯ ಮಾಡಿದರು.

Add Asianetnews Kannada as a Preferred SourcegooglePreferred

ಭೋವಿ, ಲಂಬಾಣಿ (ಬಂಜಾರ) ಛಲವಾದಿ ಹಾಗೂ ಅಲೆಮಾರಿ ಜಾತಿಗಳಾದ ಕೊರಚ, ಕೊರಮ, ಚನ್ನದಾಸ, ಕುಳುವ, ಬುಡ್ಗಜಂಗಮ, ಸಿಳ್ಳೆಕ್ಯಾತರು, ದೊಂಬರು ಸೇರಿದಂತೆ 99 ಪರಿಶಿಷ್ಟಜಾತಿಗಳ ಸಮುದಾಯದ 3 ಲಕ್ಷಕ್ಕೂ ಅಧಿಕ ಜನ ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯಾ. ಸದಾಶಿವ ಆಯೋಗ ವರದಿ ಗೌಪ್ಯ ಜಾರಿ ಆರೋಪ, ಸಿಡಿದೆದ್ದ ಬಂಜಾರ ಸಮುದಾಯ

2005ರಲ್ಲಿ ಸ್ಥಾಪಿತವಾದ ಏಕ ಸದಸ್ಯ ಸದಾಶಿವ ಆಯೋಗ ಅವಸರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯಲ್ಲಿನ ಕೆಲ ಅಂಶಗಳು ಮೀಸಲಾತಿಯ ಮೂಲ ಆಶಯಗಳಿಗೆ ವಿರುದ್ಧವಾಗಿವೆ ಎಂದು ಪ್ರತಿಭಟನಕಾರರು ದೂರಿದರು.

ಸಾಮಾಜಿಕ ತಾರತಮ್ಯ ಕಡೆಗಣಿಸಿದಂತೆ ಪರಿಶಿಷ್ಟರ ಮೀಸಲಾತಿಗೆ ಕೆನೆಪದರ, ನೌಕರರು ಮತ್ತು ಅಧಿಕಾರಿಗಳ ಮಕ್ಕಳನ್ನು ಮೀಸಲಾತಿಯಿಂದ ಹೊರಗೆ ಇಡುವಂತೆ ಪ್ರಸ್ತಾಪಿಸಿದೆ. ಪರಿಶಿಷ್ಟಜಾತಿಗಳ ಪಟ್ಟಿಯಿಂದ ಜಾತಿಗಳನ್ನು ಕೈಬಿಡಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ. ಪರಿಶಿಷ್ಟಸಹೋದರ ಸಮುದಾಯಗಳ ಮಧ್ಯೆ ವೈಮನಸ್ಸು ಹೆಚ್ಚಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಸಮುದಾಯಗಳ ಒತ್ತಡಕ್ಕೆ ಸಿಎಂ ಬೊಮ್ಮಾಯಿ ಮಣಿಯುವುದಿಲ್ಲ: ಮಾದಾರ ಚನ್ನಯ್ಯ ಶ್ರೀ

ಅನ್ಯಾಯ ಮಾಡಲ್ಲ- ಭರವಸೆ:

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕಂದಾಯ ಸಚಿವ ಆರ್‌.ಅಶೋಕ್‌, ಪರಿಶಿಷ್ಟಜಾತಿಗಳಿಗೆ ಅನ್ಯಾಯ ಆಗಲು ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿಗಳ ಜತೆಗೆ ಈ ಬಗ್ಗೆ ಮಾತನಾಡಿ ಸಮುದಾಯ, ಸಂಘಟನೆ ಪ್ರಮುಖರ ಸಭೆಯನ್ನು ನಿಗದಿಸಲಾಗುವುದು. ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲ್ಲ. ಎಲ್ಲರ ಜತೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದರು.