ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಭಾವುಕರಾಗಿ ಮಾತನಾಡಿದ್ದಾರೆ. ಕೋರ್ಟ್ ಆದೇಶಕ್ಕೆ ತಲೆಬಾಗುವುದಾಗಿ ಹೇಳಿದ ಅವರು, ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. 

ಕಿತ್ತೂರು, ಬೆಳಗಾವಿ (ಜೂ.11) : ಇವತ್ತಿನ ಪರಿಸ್ಥಿತಿಯಲ್ಲಿ ನಾನು ಕೋರ್ಟ್ ಆದೇಶಕ್ಕೆ ತಲೆ ಬಾಗುತ್ತೇನೆ. ನಾನು ಕೋರ್ಟ್ ಆದೇಶದ ಪ್ರಕಾರ ನಡೆದುಕೊಳ್ಳಬೇಕಾಗುತ್ತೆ. ನನಗೆ ಇವತ್ತು ಕಷ್ಟ ಬಂದಿರಹುದು. ಸುಳ್ಳಿಗೆ ಜಯ ಬೇಗ ಸಿಗುತ್ತೆ, ಆದ್ರೆ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ ಆದರೆ ಸ್ವಲ್ಪ ತಡವಾಗುತ್ತೆ ಎಂದು ಮಾಜಿ ಸಚಿವ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಭಾವನಾತ್ಮಕವಾಗಿ ನುಡಿದರು.

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,. ಇವತ್ತಿನ ಪರಿಸ್ಥಿತಿಯಲ್ಲಿ ನಾನು ಕೋರ್ಟ್ ಆದೇಶಕ್ಕೆ ತಲೆಬಾಗಲೇಬೇಕು. ನಾಳೆ ನಾನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರಾಗುತ್ತೇನೆ. ನನಗೆ ಕಷ್ಟವಿರಬಹುದು, ಆದರೆ ಕೋರ್ಟ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ," ಎಂದು ಕುಲಕರ್ಣಿ ಹೇಳಿದರು. ಯಾವುದೇ ಸಾಕ್ಷಿಗಳಿಗೆ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ ಅವರು, 'ನಾನು ಯಾರಿಗಾದರೂ ಕರೆ ಮಾಡಿ ಒತ್ತಡ ಹಾಕಿದ್ದರೆ, ಅದನ್ನು ತೋರಿಸಲಿ' ಎಂದು ಸವಾಲು ಹಾಕಿದರು.

ಇನ್ನು ಕುಲಕರ್ಣಿ ತಮ್ಮ ಅನುಪಸ್ಥಿತಿಯಲ್ಲಿ ಪತ್ನಿ ಶಿವಲೀಲಾ ಕುಲಕರ್ಣಿ ಕ್ಷೇತ್ರದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ ಕುಲಕರ್ಣಿ, "ನಿನ್ನೆ ನಾನು ಸರಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆ. ಇವತ್ತು ಕಾರ್ಯಕರ್ತರನ್ನು ಭೇಟಿಯಾದೆ. ನನ್ನ ಪತ್ನಿಯನ್ನು ಕರೆದುಕೊಂಡು ಸಭೆಗಳನ್ನು ಮಾಡಿದ್ದೇನೆ. ಆದರೆ, ಮಾಧ್ಯಮಗಳು ಇದನ್ನು ತಪ್ಪಾಗಿ ಚಿತ್ರಿಸಿವೆ ಎಂದು ವಿಷಾದಿಸಿದರು.

ಮಾಧ್ಯಮಗಳ ವಿರುದ್ಧ ಬೇಸರ:

ಮಾಧ್ಯಮಗಳ ನಡೆಗೆ ಕಳವಳ ವ್ಯಕ್ತಪಡಿಸಿದ ಕುಲಕರ್ಣಿ, ನಾವು ಕಷ್ಟದಲ್ಲಿದ್ದಾಗ, ತುಪ್ಪ ಸುರಿಯುವ ಕೆಲಸ ಮಾಡುವುದು ಸರಿಯಲ್ಲ. ಜನ ನಮ್ಮ ಮನೆಗೆ ಕೆಲಸಕ್ಕಾಗಿ ಬರುತ್ತಾರೆ, ನಮ್ಮ ಮನೆಗೆ ಬರದೇ ನಿಮ್ಮ ಮನೆಗೆ ಬರುತ್ತಾರಾ? ಸತ್ಯದ ಪರವಾಗಿ ಮಾತನಾಡಿ, ಯಾರ ಒತ್ತಡಕ್ಕೂ ಮಣಿಯಬೇಡಿ ಎಂದು ಕೇಳಿಕೊಂಡರು. ಯಾರದ್ದೋ ಚೇಲಾಗಳಾಗಿ ಕೆಲಸ ಮಾಡಬೇಡಿ. ಇಡೀ ರಾಜ್ಯಕ್ಕೆ ನನ್ನ ವಿಚಾರದಲ್ಲಿ ಏನಾಗಿದೆ ಎಂದು ಗೊತ್ತಿದೆ ಎಂದರು.

ಕಳೆದ ಐದು ವರ್ಷಗಳಿಂದ ಕ್ಷೇತ್ರಕ್ಕೆ ತಾವು ನೀಡಿದ ಸೇವೆಯನ್ನು ಜನರು ಮರೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ವಿನಯ್ ಕುಲಕರ್ಣಿಯವರು, ನನಗಾದ ಅನ್ಯಾಯಕ್ಕೆ ಜನರು ಇವತ್ತು ಕಣ್ಣೀರು ಹಾಕುತ್ತಿದ್ದಾರೆ. ನಾನು ಎಲ್ಲಿದ್ದರೂ, ಕ್ಷೇತ್ರದ ಜನರು ನನ್ನ ಕೈ ಹಿಡಿಯುತ್ತಾರೆ. ನಾನು ಸ್ಟ್ರೈಟ್‌ಫಾರ್ವರ್ಡ್ ಆಗಿ, ಸ್ವಲ್ಪ ರ‍್ಯಾಶ್ ಆಗಿ ಮಾತನಾಡಬಹುದು. ಆದರೆ, ನನ್ನ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಇಡೀ ಕ್ಷೇತ್ರಕ್ಕಾಗಿ ನ್ಯಾಯಕ್ಕೆ ಹೋರಾಟ ಮಾಡಿದ್ದೇನೆ' ಎಂದು ಭಾವುಕರಾದರು.

ರಾಜಕೀಯ ಷಡ್ಯಂತ್ರದ ಆರೋಪ:

ತಮ್ಮ ವಿರುದ್ಧದ ಕ್ರಮಗಳ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದ ಕುಲಕರ್ಣಿ, 'ನಾನು ತುಂಬಾ ವೇಗವಾಗಿ ಬೆಳೆಯುತ್ತಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ತುಳಿಯಲು ಹುನ್ನಾರ ನಡೆದಿದೆ. ಇದು ಮಾಧ್ಯಮಗಳಿಗೂ ಗೊತ್ತಿದೆ. ಆದರೆ, ದೇವರು ಇದ್ದಾನೆ, ಸತ್ಯಕ್ಕೆ ಜಯ ಸಿಗುತ್ತದೆ. ಸುಳ್ಳಿಗೆ ಬೇಗ ಜಯ ಸಿಗಬಹುದು, ಆದರೆ ಸತ್ಯಕ್ಕೆ ತಡವಾದರೂ ಜಯ ಖಚಿತ ಎಂದು ದೃಢವಾಗಿ ಹೇಳಿದರು.

ಬಸವಣ್ಣರ ಉಲ್ಲೇಖಿಸಿದ ವಿನಯ್ ಕುಲಕರ್ಣಿ:

ಬಸವಣ್ಣನವರ ಕಾಲದಲ್ಲಿ ಕೊಂಡಿ ಮಂಚಾನ್‌ಗಳಿದ್ದರು. ಇಂದಿಗೂ ಕೆಲವರು ಅಂತಹವರೇ ಇದ್ದಾರೆ. ಆದರೆ, ಬಸವಣ್ಣನವರ ಹೆದರಿಕೆ ಇಂದಿಗೂ ಜೀವಂತವಾಗಿದೆ ಎಂದು ಕುಲಕರ್ಣಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.

ನಾಳೆ ಕೋರ್ಟ್‌ಗೆ ಹಾಜರಾಗುವುದಾಗಿ ತಿಳಿಸಿದ ಕುಲಕರ್ಣಿ, 'ನಾನು ಇಲ್ಲದಿದ್ದರೂ, ನನ್ನ ಪತ್ನಿಗೆ ಸಹಕಾರ ನೀಡಿ ಎಂದು ಸಚಿವರಿಗೆ ಮನವಿ ಮಾಡಿದ್ದೇನೆ. ಕ್ಷೇತ್ರದ ಜನರು ನನ್ನ ಬೆಂಬಲಕ್ಕಿದ್ದಾರೆ. ನ್ಯಾಯಾಲಯದ ತೀರ್ಮಾನವೇ ಅಂತಿಮವಾಗಿರಲಿ ಎಂದು ಹೇಳಿದರು.