ಬೆಂಗಳೂರು[ಜ.31]: ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ನನ್ನ ಸಹೋದರನಾದರೂ ಇಬ್ಬರ ವ್ಯವಹಾರ ಹಾಗೂ ವಸತಿ ಪ್ರತ್ಯೇಕವಾಗಿಯೇ ಇದೆ. ಅವರನ್ನು ಯಾರೂ ಬಲವಂತವಾಗಿ ಹಿಡಿದಿಟ್ಟುಕೊಂಡಿಲ್ಲ. ಅವರೇ ಸ್ವ ಇಚ್ಛೆಯಿಂದ ಪಕ್ಷದಿಂದ ಹೋಗಿದ್ದಾರೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್‌ ಜಾರಕಿಹೊಳಿ ಅವರು ಕಳೆದ ಒಂದು ತಿಂಗಳಿನಿಂದ ನನ್ನ ಸಂಪರ್ಕಕ್ಕೆ ಲಭ್ಯವಾಗಿಲ್ಲ. ರಮೇಶ್‌ ಜಾರಕಿಹೊಳಿ ಎಲ್ಲಿದ್ದಾರೆಂಬುದು ನನಗೆ ಗೊತ್ತಿಲ್ಲ. ರಮೇಶ್‌ ಜಾರಕಿಹೊಳಿ ಅವರನ್ನು ಯಾರೂ ಸಹ ಬಲವಂತವಾಗಿ ಹಿಡಿದಿಟ್ಟುಕೊಂಡಿಲ್ಲ. ಅವರೇ ಸ್ವ ಇಚ್ಛೆಯಿಂದ ಪಕ್ಷದಿಂದ ಹೋಗಿದ್ದಾರೆ. ಈಗಾಗಲೇ ಕೆಪಿಸಿಸಿ ಶೋಕಾಸ್‌ ನೋಟಿಸ್‌ ನೀಡಿರುವುದರಿಂದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ರಮೇಶ್‌ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ಅವರನ್ನು ನಾನು ಭೇಟಿಯಾಗಿ ಒಂದು ತಿಂಗಳಾಗಿದೆ. ಗೋಕಾಕ್‌ನಲ್ಲೂ ಇಲ್ಲ. ಎಲ್ಲಿಯೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಯಾರಿಗೂ ಅವರ ಬಗೆಗಿನ ವಿಚಾರ ತಿಳಿದಿಲ್ಲ. ಬಂದ ಮೇಲೆ ಅವರೊಂದಿಗೆ ಮಾತನಾಡುತ್ತೇನೆ. ರಾಜಕೀಯ, ವ್ಯಾವಹಾರಿಕವಾಗಿ ಅವರ ಜತೆ ಸಂಪರ್ಕ ಕಡಿಮೆ. ಕಾದು ನೋಡುತ್ತಿದ್ದೇವೆ. ಸದ್ಯದಲ್ಲೇ ಸಿದ್ದರಾಮಯ್ಯ ಅವರ ಮುಂದೆ ಹಾಜರಾಗಬಹುದು ಎಂದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.