ಗಣರಾಜ್ಯೋತ್ಸವದಂದು ಉಡುಪಿಯ ಸಾಸ್ತಾನ ಟೋಲ್‌ನಲ್ಲಿ ವೀಲ್ ಚೇರ್ ಅವಲಂಬಿತ ನಿವೃತ್ತ ಯೋಧನಿಗೆ ಸಿಬ್ಬಂದಿ ಅವಮಾನಿಸಿದ್ದಾರೆ. ಟೋಲ್ ವಿನಾಯಿತಿ ದಾಖಲೆಗಳಿದ್ದರೂ ಕಿರಿಕ್ ಮಾಡಿದ ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಟೋಲ್ ಸಿಬ್ಬಂದಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಉಡುಪಿ (ಜ.26): ಗಣರಾಜ್ಯೋತ್ಸವದಂದೇ ದೇಶ ಕಾಯುವ ಯೋಧನಿಗೆ ಟೋಲ್ ಸಿಬ್ಬಂದಿ ಅವಮಾನ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕೋಟ ಸಮೀಪದ ಸಾಸ್ತಾನದಲ್ಲಿ ನಡೆದಿದೆ. ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ತಪ್ಪು ಮಾಡಿದ ಟೋಲ್ ಸಿಬ್ಬಂದಿ ಇದೀಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ವೀಲ್ ಚೇರ್‌ನಲ್ಲಿರುವ ಯೋಧನಿಗೆ ಟೋಲ್ ಸಿಬ್ಬಂದಿ ಉದ್ಧಟತನ

ಕಾಸರಗೋಡು ಮೂಲದ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಅವರು ವೀಲ್ ಚೇರ್ ಅವಲಂಬಿತರಾಗಿದ್ದಾರೆ. ಈ ಹಿಂದೆ ಸೇನಾ ವಾಹನವೊಂದು 400 ಅಡಿ ಪ್ರಪಾತಕ್ಕೆ ಬಿದ್ದಾಗ ಪವಾಡ ಸದೃಶ್ಯವಾಗಿ ಬದುಕುಳಿದಿದ್ದ ಇವರು, ಗಣರಾಜ್ಯೋತ್ಸವದಂದೇ ಸಾಸ್ತಾನ ಟೋಲ್ ದಾಟುವಾಗ ಸಂಕಷ್ಟ ಎದುರಿಸಿದ್ದಾರೆ. ಸೇನಾ ಸಿಬ್ಬಂದಿಗೆ ಟೋಲ್ ವಿನಾಯಿತಿ ಇದ್ದರೂ, ಎಲ್ಲಾ ದಾಖಲೆಗಳನ್ನು ತೋರಿಸಿದರೂ ಸಿಬ್ಬಂದಿ ಕಿರಿಕ್ ಮಾಡಿ ಅವಮಾನಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದ ಕಮಾಂಡರ್

ಸಿಬ್ಬಂದಿಯ ಉದ್ಧಟತನದಿಂದ ತೀವ್ರ ಮನನೊಂದ ಶ್ಯಾಮರಾಜ್ ಅವರು ಸ್ಥಳದಲ್ಲೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 'ಗಣರಾಜ್ಯೋತ್ಸವ ದಿನದಂದೇ ಯೋಧನಿಗೆ ಇಂತಹ ಅವಮಾನವೇ?' ಎಂದು ಕಮಾಂಡರ್ ಪ್ರಶ್ನಿಸಿದ್ದರು. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ದೇಶಪ್ರೇಮಿಗಳು ಟೋಲ್ ಸಿಬ್ಬಂದಿ ವಿರುದ್ಧ ಕೆಂಡಾಮಂಡಲವಾಗಿದ್ದರು.

ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ

ವಿಡಿಯೋ ವೈರಲ್ ಆಗಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಟೋಲ್ ಸಿಬ್ಬಂದಿ, ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾರೆ. "ಈ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರಲಿಲ್ಲ. ದಾಖಲೆಗಳ ಬಗ್ಗೆ ಮೇಲಧಿಕಾರಿಗಳಿಗೆ ವಿವರ ಕಳುಹಿಸಿದ್ದೆವು. ಅವರು ಖಚಿತಪಡಿಸುವುದು ತಡವಾದ ಕಾರಣ ಗೊಂದಲ ಉಂಟಾಯಿತು. ಸ್ಥಳದಲ್ಲೂ ಕ್ಷಮೆ ಕೇಳಿದ್ದೆ, ಈಗ ಮತ್ತೊಮ್ಮೆ ಯೋಧರಲ್ಲಿ ಕ್ಷಮೆ ಯಾಚಿಸುತ್ತೇನೆ" ಎಂದು ಸಿಬ್ಬಂದಿ ತಿಳಿಸಿದ್ದಾರೆ.