ಕುಡುಕ ಪದ ಬ್ಯಾನ್, ಡಿ.31 ಮದ್ಯಪ್ರೇಮಿಗಳ ದಿನ, ಮದ್ಯಪ್ರಿಯ ಭವನ.. 'ಎಣ್ಣೆ' ಪ್ರಿಯರ ಬೇಡಿಕೆ ಕೇಳಿ ಶಾಕ್ ಆದ ಸಂತೋಷ್ ಲಾಡ್!
ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ನಡುವೆ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪ್ರತಿಭಟನೆ ಕೂಡ ನಡೆದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಬೇಡಿಕೆ ಕೇಳಿ ದಂಗಾಗಿದ್ದಾರೆ.
ಬೆಳಗಾವಿ (ಡಿ.14): ಕಾರ್ಮಿಕ ಸಚಿವ ಸಂತೋಷ್ ಲಾಡ್ ಶಾಕ್ ಆಗಿದ್ದಾರೆ. ಅದಕ್ಕೆ ಕಾರಣ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪ್ರತಿಭಟನೆ ಹಾಗೂ ಅವರ ಬೇಡಿಕೆಗಳನ್ನು ಕೇಳಿ ಸ್ವತಃ ಅಚ್ಚರಿ ಪಟ್ಟಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ವೇಳೆ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸುತ್ತಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪ್ರತಿಭಟನೆ ಗಮನಸೆಳೆದಿತ್ತು. ಇನ್ನು ಅವರಿಟ್ಟ ಬೇಡಿಕೆಗಳನ್ನು ಕೇಳಿ ಸ್ವತಃ ಸಂತೋಷ್ ಲಾಡ್ ಕೂಡ ದಿಗಿಲಾದರು. ಸುವರ್ಣ ಗಾರ್ಡನ್ ಟೆಂಟ್‌ನಲ್ಲಿ ಮದ್ಯಪಾನ ಪ್ರಿಯರ ಹೋರಾಟ ಸಂಘ, 'ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ..' ಎನ್ನುವ ಘೋಷವಾಕ್ಯದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಗುರುವಾರ ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸಚಿವ ಸಂತೋಷ್ ಲಾಡ್ ಅವರ ಬೇಡಿಕೆಗಳನ್ನು ಶಾಂತ ಚಿತ್ತದಿಂದ ಆಲಿಸಿದ್ದಾರೆ.
ಈ ವೇಳೆ ಅವರು ಸಾಕಷ್ಟು ಬೇಡಿಕೆಗಳನ್ನು ಸಂತೋಷ್ ಲಾಡ್ ಅವರ ಮುಂದೆ ಇಟ್ಟಿದ್ದಾರೆ. ಈ ಬೇಡಿಕೆಗಳನ್ನು ಆಲಿಸಿದ ಸಂತೋಷ್ ಲಾಡ್ ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಅವರ ಪ್ರಮುಖ 11 ಬೇಡಿಕೆಗಳು ಇಲ್ಲಿವೆ.
* ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು
* ಮದ್ಯ ಮಾರಾಟದಿಂದ ಬರುವ ಆದಾಯದ ಶೇಕಡ 10 ರಷ್ಟು ಮೀಸಲಿಡಬೇಕು
* ಲೀವರ್ ಸಮಸ್ಯೆಯಿಂದ ಬಳಲುವವರಿಗೆ ಚಿಕಿತ್ಸೆ ಕೊಡಿಸಬೇಕು
* ‘ಕುಡುಕ’ ಎಂಬ ಪದ ನಿಷೇಧಿಸಿ ಮದ್ಯ ಪ್ರಿಯರು ಎಂದು ಮಾಡಬೇಕು
* ಒಬ್ಬರಿಗೆ ಒಂದು ಕ್ವಾರ್ಟರ್ ನಿಗದಿ ಮಾಡಬೇಕು
* ಬಾರ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು
* ಬಾರ್‌ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು
* ಮದ್ಯಪ್ರಿಯರ ಭವನ ಸ್ಥಾಪಿಸಬೇಕು
* ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು
* ಮದ್ಯ ಸೇವಿಸಿ ಮೃತಪಟ್ಟರೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು
* ಮದ್ಯಪಾನ ಪ್ರಿಯರ ಕುಟುಂಬದಲ್ಲಿ ವಿವಾಹವಾದರೆ ಎರಡು ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು
80ನೇ ವರ್ಷದಲ್ಲಿ ಬಿಲಿಯನೇರ್ ಪಟ್ಟಿಗೆ ಸೇರಿದ 8ಪಿಎಂ ವಿಸ್ಕಿಯ ಮಾಲೀಕ!
ಮದ್ಯದ ದರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಪತ್ರ: ಇನ್ನೊಂದೆಡೆ ಮದ್ಯದ ದರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ರಾಜ್ಯ ಮದ್ಯ ಪ್ರೇಮಿಗಳ ಯಾನೆ ಕುಡುಕರ ಸಂಘದಿಂದ ಪತ್ರ ಬರೆಯಲಾಗಿದೆ. ಬಡವರ ಬ್ರಾಂಡಿನ ಮದ್ಯದ ಸುಂಕ ಕಡಿಮೆ ಮಾಡಿ ಎಂದು ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲಾ ವರ್ಗದವರು ಅಹಾರ ಸಂಸ್ಕೃತಿಯ ಭಾಗವಾಗಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಮದುವೆ, ಹಬ್ಬ ಹರಿದಿನಗಳಲ್ಲಿ ಅರಾಧನೆ ಪದ್ದತಿಯಲ್ಲಿ, ಸಂತೋಷ ಕೂಟದಲ್ಲಿ ಮದ್ಯ ಪ್ರಿಯರು ಮದ್ಯ ಸೇವನೆ ಮಾಡುತ್ತಿದ್ದಾರೆ. ಸುರಪಾನ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದರಿಂದ ಸರಕಾರಕ್ಕೆ ಸಾವಿರಾರು ಕೋಟಿ ಸರಕಾರಕ್ಕೆ ಅದಾಯ ಬರುತ್ತಿದೆ. ಇಷ್ಟೆಲ್ಲಾ ಅದಾಯ ಬರುತ್ತಿದ್ದರೂ ಮದ್ಯ ಪ್ರೇಮಿಗಳ ಬಗ್ಗೆ ಕಾಳಜಿ ವಹಿಸದಿರುವುದು ತುಂಬಾ ದುಃಖಕರ ವಿಷಯ. ಒಬ್ಬ ಬಿಪಿಎಲ್ ಕಾರ್ಡ್ ಹೊಂದಿದವನ ಅದಾಯ ಅಲ್ಪ ಪ್ರಮಾಣದಲ್ಲಿ ಇರುತ್ತದೆ. ಮದ್ಯ ಪ್ರೇಮಿ ದಿನಕೂಲಿ ನೌಕರ ನಿತ್ಯ ಸರಾಸರಿ ಕ್ವಾರ್ಟರ್ ಕುಡಿದರೂ, ಅವನಿಗೆ ದಿನಕ್ಕೆ 200 ರಿಂದ 250 ರೂಪಾಯಿ ಖರ್ಚಾಗುತ್ತದೆ. ತಿಂಗಳಿಗೆ 7500, ವಾರ್ಷಿಕ 90,000 ರೂಪಾಯಿ ಬೇಕಾಗುತ್ತದೆ. ಇದರಿಂದ ಮದ್ಯಮ ವರ್ಗ ಮತ್ತು ಬಡವರಿಗೆ ಅರ್ಥಿಕವಾಗಿ ಹೊರೆಯಾಗಲಿದೆ. ಅದ್ದರಿಂದ ಮದ್ಯದ ಮೇಲಿನ ಸುಂಕ ದರ ಹೆಚ್ಚಳ ಬಗ್ಗೆ ಪುನರ್ ಪರಿಶೀಲನೆ ಮಾಡಿ ಎಂದು ಮುಖ್ಯಮಂತ್ರಿಗಳು, ಅಬಕಾರಿ ಇಲಾಖೆ ಸಚಿವರು, ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
ಇಸ್ಲಾಂನಲ್ಲಿ ಮದ್ಯ ನಿಷೇಧ, ಆದರೂ ದೇಶದಲ್ಲಿ ಮದ್ಯ ತಯಾರಿಕೆಗೆ ಒಪ್ಪಿಗೆ ನೀಡಿದ ಗಲ್ಫ್ ದೇಶ!