ಬೆಂಗಳೂರು(ಸೆ.20): ಡ್ರಗ್ಸ್‌ ಪ್ರಕರಣದಲ್ಲಿ ಬಂಧಿ​ತ​ರಾಗಿ, 2018ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ​ರುವ ಆರೋಪ ಹೊತ್ತಿ​ರು​ವ ನಟಿ ಸಂಜನಾ ಗಲ್ರಾನಿ, 2014ರಲ್ಲೇ ತಾನು ಮುಸ್ಲಿಂ ಧರ್ಮದ ಬಗ್ಗೆ ಒಲವು ಹೊಂದಿರುವ ಕುರಿತು ಸುಳಿವು ನೀಡಿದ್ದರು ಎಂಬ ಮಾಹಿತಿ ಬಹಿರಂಗಗೊಂಡಿದೆ.

ಸಂಜನಾ 2014ರ ಜುಲೈ 7ರಂದು ​‘ಇ​ನ್‌​ಸ್ಟಾ​ಗ್ರಾಂ’​ನ​ಲ್ಲಿ ಒಂದು ಪೋಸ್ಟ್‌ ಮಾಡಿದ್ದರು. ಅದರಲ್ಲಿ, ‘ಪ್ರೇಮಕಥೆ ಆಧರಿಸಿದ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುತ್ತಿದ್ದೇನೆ. ಈ ವೇಳೆ ಮುಸ್ಲಿಂ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ತೀವ್ರ ಪ್ರಭಾವಕ್ಕೊಳಗಾಗಿದ್ದೇನೆ’ ಎಂದಿದ್ದರು. ‘ನಾನು ಸಹ...??’ ಎಂದು ಪೋಸ್ಟ್‌ ಮಾಡಿದ್ದರು.

ಹೀಗೆ ‘ನಾನು ಸಹ’ ಎನ್ನುವ ಮೂಲಕ ಅವರು ಮತಾಂತ​ರದ ಸುಳಿವು ನೀಡಿದ್ದರು ಎನ್ನಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಸಂಜನಾ, ‘ಇಸ್ಲಾಂ ಧರ್ಮಕ್ಕೆ ಮತಾಂತರಗೊಳುತ್ತಿದ್ದೇನೆ’ ಎಂದು ನ್ಯಾಯಾಲಯಕ್ಕೆ 2018ರಲ್ಲಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ಈ ಬಗ್ಗೆ ಮಸೀದಿಯೊಂದಕ್ಕೂ ಮಾಹಿತಿ ನೀಡಿ ಅನುಮೋದನೆ ಪಡೆದಿದ್ದಾರೆ ಎಂಬ ದಾಖಲೆಗಳು ಮಾಧ್ಯಮ ಹಾಗೂ ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ಹರಿ​ದಾ​ಡಿ​ವೆ.

ದಾರುಲ್‌ ಉಲೂಂ ಶಾಹ್‌ ವಲಿಉಲ್ಲಾ ಎಂಬ ಹೆಸರಿನಿಂದ ಬರೆಯಲಾಗಿರುವ ಪತ್ರದಲ್ಲಿ ಅರ್ಚನಾ ಮನೋಹರ್‌ ಗಲ್ರಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ಇನ್ನು ಮುಂದೆ ಅವರನ್ನು ಮಹಿರಾ ಎಂದು ಕರೆಯಬೇಕು ಎಂದು ಬರೆಯಲಾಗಿದೆ.

ಸಂಜನಾ ಗಲ್ರಾನಿ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ. ನಮ್ಮ ಕರ್ನಾಟಕದಲ್ಲಿ ಲವ್‌ ಜಿಹಾದ್‌ ತಾಂಡವವಾಡುತ್ತಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿವೆ.