ಇನ್ಮುಂದೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನು 1ನೇ ತಾರೀಖಿನಂದೇ ಸಂಬಳ, ಅ.1ರಿಂದಲೇ ಜಾರಿ: ನಿಗಮದ ಎಂ.ಡಿ. ಅನ್ಬುಕುಮಾರ್‌

ಬೆಂಗಳೂರು(ಸೆ.11): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಚಾಲಕ, ನಿರ್ವಾಹಕ ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೆ ಇನ್ನು ಮುಂದೆ ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ ನೀಡಲು ತೀರ್ಮಾನಿಸಿದ್ದು, ಬರುವ ಅಕ್ಟೋಬರ್‌ 1ರಿಂದಲೇ ಈ ವ್ಯವಸ್ಥೆ ಜಾರಿಯಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ನಿಗಮದ ವ್ಯವಸ್ಥಾಪಕ ವಿ.ಅನ್ಬುಕುಮಾರ್‌, ನಿಗಮದ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ, ಹಿತಾಸಕ್ತಿ ಕಾಪಾಡಲು ಪ್ರಪ್ರಥಮ ಬಾರಿಗೆ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 1ನೇ ತಾರೀಖಿನಂದು ಸಂಬಳ ನೀಡಲು ನಿರ್ಧರಿಸಲಾಗಿದೆ. ಸಿಬ್ಬಂದಿಗಳು ಹಾಜರಾತಿ, ರಜೆ ಮಂಜೂರು ಆದೇಶ, ಹೆಚ್ಚುವರಿ ಭತ್ಯೆ ಮುಂತಾದ ದಾಖಲೆಗಳನ್ನು ಕಾಲಮಿತಿಯೊಳಗೆ ನೀಡಬೇಕು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ಅವಧಿ ವಿಸ್ತರಣೆ

ತಿಂಗಳ ಮೊದಲ ದಿನವೇ ವೇತನ ನೀಡುವ ನಿಟ್ಟಿನಲ್ಲಿ ಪ್ರತಿ ತಿಂಗಳ 20ರಿಂದ 30ನೇ ತಾರೀಖು ಸಿಬ್ಬಂದಿಗೆ ಊಹಾತ್ಮಕ ಹಾಜರಾತಿಯನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ಸಿಬ್ಬಂದಿ ಈ ಅವಧಿಯಲ್ಲಿ ಅನಧಿಕೃತ ಗೈರಾಗದೆ, ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ರಜೆ ಪಡೆಯದೆ ಕಾರ್ಯನಿರ್ವಹಿಸುವ ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಕೊರೋನಾದಿಂದ ನಿಗಮ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಿಬ್ಬಂದಿ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದು, ಯಶಸ್ವಿ ಅನುಷ್ಠಾನಕ್ಕೆ ಸಂಬಂಧಪಟ್ಟಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.