Asianet Suvarna News Asianet Suvarna News

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ಅವಧಿ ವಿಸ್ತರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 31ವರೆಗೂ, ಇತರೆ ವರ್ಷಗಳ ವಿದ್ಯಾರ್ಥಿಗಳಿಗೆ ಸೆ.30ವರೆಗೂ ಬಸ್‌ ಪಾಸ್‌ ಸೌಲಭ್ಯವನ್ನು ವಿಸ್ತರಿಸಿದೆ. 

Extension of KSRTC bus pass for final semester students gvd
Author
First Published Sep 3, 2022, 3:15 AM IST

ಬೆಂಗಳೂರು (ಸೆ.03): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅಕ್ಟೋಬರ್‌ 31ವರೆಗೂ, ಇತರೆ ವರ್ಷಗಳ ವಿದ್ಯಾರ್ಥಿಗಳಿಗೆ ಸೆ.30ವರೆಗೂ ಬಸ್‌ ಪಾಸ್‌ ಸೌಲಭ್ಯವನ್ನು ವಿಸ್ತರಿಸಿದೆ. ಕೊರೋನಾದಿಂದಾಗಿ 2021-22 ನೇ ಸಾಲಿನ ಕಾಲೇಜು ತರಗತಿಗಳು ತಡವಾಗಿ ಪ್ರಾರಂಭವಾದ ಕಾರಣ ಅಂತಿಮ ಸೆಮಿಸ್ಟರ್‌ನ ಪದವಿ, ವೃತ್ತಿಪರ, ಸ್ನಾತಕೋತ್ತರ ಮತ್ತು ತಾಂತ್ರಿಕ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಗಳು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ನಡೆಯಲಿದೆ. 

ಈ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅ.31ವರೆಗೂ ಪಾಸ್‌ ವಿಸ್ತರಿಸಲಾಗಿದೆ. ಈ ವಿದ್ಯಾರ್ಥಿಗಳು 2021-22ನೇ ಸಾಲಿನ ಬಸ್‌ಪಾಸ್‌ ಮತ್ತು ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿ ತೋರಿಸಿ ಉಚಿತವಾಗಿ ಪ್ರಯಾಣಿಸಹುದು. ಜತೆಗೆ ಇತರೆ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ನೂತನ ಬಸ್‌ಪಾಸ್‌ ಪಡೆದುಕೊಳ್ಳಲು ಅವಕಾಶ ಕೋರಿದ ಹಿನ್ನೆಲೆ ಅವರ ಬಸ್‌ಪಾಸ್‌ ಸೌಲಭ್ಯವನ್ನು ಸೆ.30ವರೆಗೂ ವಿಸ್ತರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Mysuru: ದಸರಾ ಆನೆಗಳಿಗೆ ಚೌತಿ ಅಂಗವಾಗಿ ವಿಶೇಷ ಪೂಜೆ

ಓಣಂಗೆ ಕೇರಳದ ವಿವಿಧ ಭಾಗಗಳಿಗೆ ವಿಶೇಷ ಬಸ್‌: ಓಣಂ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಕೇರಳದ ವಿವಿಧ ಸ್ಥಳಗಳಿಗೆ ಸೆ.6 ಮತ್ತು 7 ರಂದು ವಿಶೇಷ ಬಸ್‌ ವ್ಯವಸ್ಥೆ ಮಾಡಿದೆ. ಕಣ್ಣೂರು, ಕೋಜಿಕೋಡ್‌, ಎರ್ನಾಕುಲಂ, ಪಾಲಕ್ಕಾಡ್‌, ತ್ರಿಶೂರ್‌, ಕೊಟ್ಟಾಯಂ, ತಿರುವನಂತಪುರಂ ಸೇರಿದಂತೆ ಹಲವು ಸ್ಥಳಗಳಿಗೆ ಬೆಂಗಳೂರಿನಿಂದ ವಿಶೇಷ ಬಸ್‌ ಸೌಲಭ್ಯ ನೀಡಲಾಗಿದೆ. ಈ ಬಸ್‌ಗಳು ನಗರದ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ಹಾಗೂ ಶಾಂತಿನಗರ ಬಸ್‌ ನಿಲ್ದಾಣದಿಂದ ಕಾರ್ಯಚರಣೆ ನಡೆಸಲಿವೆ. ಕೆಎಸ್‌ಆರ್‌ಟಿಸಿ ಬುಕ್ಕಿಂಗ್‌ ಕೌಂಟರ್‌ ಅಥವಾ ವೆಬ್‌ಸೈಟ್‌ ಮೂಲಕ ಆಸನ ಕಾಯ್ದಿರಿಸಬಹುದು.

ಶೇ.5ರಿಂದ 10ರಷ್ಟು ರಿಯಾಯಿತಿ: ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದರೆ ಶೇ.5ರಷ್ಟುರಿಯಾಯಿತಿ ಕೂಡ ನೀಡಲಾಗುತ್ತಿದೆ. ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಹೋಗುವ ಹಾಗೂ ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ ಶೇ.10ರಷ್ಟುರಿಯಾಯಿತಿ ಕೂಡ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಟ್ಟಡ ಕಾರ್ಮಿಕರಿಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಕ್ರಮ: ರಾಜ್ಯದ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದರು. ಪಟ್ಟಣದಲ್ಲಿ ಕಟ್ಟಡ ಕಾರ್ಮಿಕರಿಗೆ ಬಣ್ಣ ಬಳಿಯುವ ಕಿಟ್‌ ವಿತರಿಸಿ ಅವರು ಮಾತನಾಡಿದರು. ಕೋವಿಡ್‌ ಕಾಲದಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ಪಾಸ್‌ ನೀಡುವುದಾಗಿ ಭರವಸೆ ನೀಡಿದ್ದೆ. ಈಗ ಭರವಸೆ ಈಡೇರುವ ಸಂದರ್ಭ ಬಂದಿದೆ. ಕೆಎಸ್‌ಆರ್‌ಟಿಸಿ ಕಾರ್ಮಿಕರಿಗೆ ಬಸ್‌ ಪಾಸ್‌ ವಿತರಿಸುವುದಿಲ್ಲ. 

ಬೆಳ್ತಂಗಡಿ ಏತ ನೀರಾವರಿ ಮಾರ್ಚ್‌ಗೆ ಲೋಕಾರ್ಪಣೆ: ಸಚಿವ ಗೋವಿಂದ ಕಾರಜೋಳ

ಕಾರ್ಮಿಕ ಇಲಾಖೆಯಿಂದ ಪಾಸ್‌ ಪಡೆದು ಬಂದವರಿಗೆ 50 ಕಿ.ಮೀ.ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ರಾಜ್ಯದಲ್ಲಿ 20 ಲಕ್ಷ ಕಟ್ಟಡ ಕಾರ್ಮಿಕರಿದ್ದು ಈಗಾಗಲೇ ಕಾರ್ಮಿಕರ ಮಾಹಿತಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಒಂದು ತಿಂಗಳ ಒಳಗೆ ಯೋಜನೆ ಜಾರಿಯಾಗಲಿದೆ ಎಂದರು. ತಾಲೂಕಿನಲ್ಲಿ 17,267 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಹೊಸದುರ್ಗ ಸೇರಿ ನಮ್ಮ ವೃತ್ತದಲ್ಲಿ 32,000 ಕಾರ್ಮಿಕರಿದ್ದಾರೆ. ಎಲ್ಲಾ ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಿಸಲಾಗಿದೆ. ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಬಸ್‌ನಲ್ಲಿ ಉಚಿತ ಪ್ರಯಾಣದ ಸೌಲಭ್ಯ ನೀಡಿರುವುದರಿಂದ ಕೆಲಸಕ್ಕೆ ಹೋಗಲು ಕಾರ್ಮಿಕರಿಗೆ ಅನುಕೂಲ ಆಗಲಿದೆ ಎಂದರು.

Follow Us:
Download App:
  • android
  • ios