ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಅಧ್ಯಕ್ಷರನ್ನಾಗಿ ಕೆ.ಸದಾಶಿವ ಶೆಣೈ ನೇಮಕ ‘ಕನ್ನಡಪ್ರಭ’ ಪತ್ರಿಕೆಯ ಶಿವಮೊಗ್ಗ ಪ್ರಧಾನ ವರದಿಗಾರ ಗೋಪಾಲ ಸಿಂಗಪ್ಪಯ್ಯ ಯಡಗೆರೆ ಸೇರಿದಂತೆ ಒಂಬತ್ತು ಮಂದಿ ಅಕಾಡೆಮಿ ಸದಸ್ಯರಾಗಿ ನೇಮಕ

 ಬೆಂಗಳೂರು (ಜು.27):  ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಅಧ್ಯಕ್ಷರನ್ನಾಗಿ ಕೆ.ಸದಾಶಿವ ಶೆಣೈ ನೇಮಕಗೊಂಡಿದ್ದಾರೆ. ‘ಕನ್ನಡಪ್ರಭ’ ಪತ್ರಿಕೆಯ ಶಿವಮೊಗ್ಗ ಪ್ರಧಾನ ವರದಿಗಾರ ಗೋಪಾಲ ಸಿಂಗಪ್ಪಯ್ಯ ಯಡಗೆರೆ ಸೇರಿದಂತೆ ಒಂಬತ್ತು ಮಂದಿ ಅಕಾಡೆಮಿ ಸದಸ್ಯರಾಗಿ ನೇಮಕವಾಗಿದ್ದಾರೆ. ಸೋಮವಾರ ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ.

ಸರ್ಕಾರದಿಂದ ನಾಮನಿರ್ದೇಶನ ಸದಸ್ಯರಾಗಿ ಹಿರಿಯ ಪತ್ರಕರ್ತರಾದ ಕೂಡ್ಲಿ ಗುರುರಾಜ್‌, ಗೋಪಾಲ ಸಿಂಗಪ್ಪಯ್ಯ ಯಡಗೆರೆ, ಶಿವಕುಮಾರ್‌ ಬೆಳ್ಳಿತಟ್ಟೆ, ಕೆ.ಕೆ. ಮೂರ್ತಿ ನೇಮಕಗೊಂಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಳಿದಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ನಿಯಮಾವಳಿ (5)ರ ನಿಯಮ 5.1ರ ಅನ್ವಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಾತಿನಿಧಿಕ ಸದಸ್ಯರಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಹಿರಿಯ ಪತ್ರಕರ್ತರಾದ ಜಗನ್ನಾಥ ಬಾಳ, ದೇವೇಂದ್ರಪ್ಪ ಕಪನೂರು, ಕೆ.ವಿ.ಶಿವಕುಮಾರ್‌ ಅವರನ್ನು ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಸೋಮವಾರ ಆದೇಶ ಹೊರಡಿಸಿದ್ದಾರೆ.

ಅಧಿಕಾರ ಸ್ವೀಕಾರ: ನೇಮಕಾತಿ ಅಧಿಸೂಚನೆ ಹೊರಬಿದ್ದ ಹಿನ್ನೆಲೆಯಲ್ಲಿ ಕೆ.ಸದಾಶಿವ ಶೆಣೈ ಅವರು ಸೋಮವಾರವೇ ಮಾಧ್ಯಮ ಅಕಾಡೆಮಿಯ 14ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಶಿವಾನಂದ ತಗಡೂರು, ಕೆ.ಕೆ.ಮೂರ್ತಿ, ಶಿವಕುಮಾರ್‌ ಬೆಳ್ಳಿತಟ್ಟೆ, ಕಾರ್ಯದರ್ಶಿ ರೂಪಾ ಹಾಜರಿದ್ದರು.