ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅವರ ನಿಧನದಿಂದ ತೀವ್ರ ದುಃಖ ಉಂಟಾಗಿದೆ. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ನ.15): ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅವರ ನಿಧನದಿಂದ ತೀವ್ರ ದುಃಖ ಉಂಟಾಗಿದೆ. ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಅಂತಿಮ ದರ್ಶನ ಪಡೆದು ಮಾತನಾಡಿದರು.

ತಿಮ್ಮಕ್ಕ ಅವರ ಕೊನೇ ಆಸೆಯ ಪತ್ರ ಕೊಟ್ಟಿದ್ದಾರೆ. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯ ಮಾಡಬೇಕು ಎಂದು ಆ ಪತ್ರದಲ್ಲಿದೆ. ಈ ಕುರಿತು ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪರಿಸರ ಸಂರಕ್ಷಣೆ ವಿಚಾರದಲ್ಲಿ ತಿಮ್ಮಕ್ಕ ಅವರ ಸಾಧನೆ ಅಪಾರ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಸಾವಿನಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ರಜೆ ಘೋಷಣೆ ನಕಲಿ ಆದೇಶ ವೈರಲ್

ಸಾಲು ಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ನಕಲಿ ಆದೇಶ ವೈರಲ್‌ ಆಗಿತ್ತು. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದ್ದು, ‘ರಜೆ ಘೋಷಿಸಲಾಗಿದೆ ಎನ್ನುವುದು ಸುಳ್ಳು. ಸಾಮಾಜಿಕ‌ ಜಾಲತಾಣದಲ್ಲಿ ಈ ಬಗ್ಗೆ ಹರಿದಾಡುತ್ತಿರುವ ಪತ್ರ ನಕಲಿ’ ಎಂದು ಹೇಳಿದೆ.