ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲು ಆರ್ ಎಸ್ಎಸ್ ಸಹಮತಿ ಇದೆ : ಜಯ ಮೃತ್ಯುಂಜಯ ಶ್ರೀ
ಪಂಚಮಸಾಲಿಗೆ ಮೀಸಲಾತಿ ಕುರಿತು ಸಿಎಂ ಬೊಮ್ಮಾಯಿ ಶೀಘ್ರ ಸಿಹಿ ಸುದ್ದಿ ನೀಡಲಿ.
ಡಿಸೆಂಬರ್ 19ರೊಳಗೆ ಒಬಿಸಿ ಆಯೋಗದಿಂದ ವರದಿ ತರಿಸಿಕೊಂಡರೆ ಸಿಎಂಗೆ ಸನ್ಮಾನ.
ಯಡಿಯೂರಪ್ಪ ಅವರು ಮೀಸಲಾತಿ ಕೊಡದಂತೆ ಮಿಸ್ ಗೈಡ್ ಮಾಡಲಾಗಿತ್ತು.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ನ.27): ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಆರ್‍ಎಸ್‌ಎಸ್ ಸಹಮತ ಕೂಡಾ ಇದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶೀಘ್ರ ಆಯೋಗದ ವರದಿ ಪಡೆದು ಸಿಹಿ ಸುದ್ದಿ ನೀಡುವಂತಾಗಲಿ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಪಂಚಮಸಾಲಿ ಮೀಸಲಾತಿ ನೀಡಿಕೆ ವಿಚಾರದಲ್ಲಿ ಯಡಿಯೂರಪ್ಪ ಬೆಂಬಲ ಇಲ್ಲವೆನ್ನುವ ಕಾಶಪ್ಪನವರ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದು ಯಡಿಯೂರಪ್ಪನವರ ಅವಧಿಯಲ್ಲೇ ಆಗಬೇಕಿತ್ತು. ಅವರನ್ನ ನಂಬಿಕೊಂಡೇ ಹೋರಾಟ ಮಾಡಿದ್ದೆ, ಯಾರಾರದೋ ಮಾತು ಕೇಳಿಕೊಂಡು ಮೀಸಲಾತಿ ಕೊಡಲು ಯಡಿಯೂರಪ್ಪ ಹಿಂದೇಟು ಹಾಕಿದರು. ಆದರೆ ಈಗ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಆರ್.ಎಸ್.ಎಸ್. ಸಹ ಸಹಮತ ವ್ಯಕ್ತಪಡಿಸಿದೆ ಹೀಗಾಗಿ ಸಿಎಂ ಬೊಮ್ಮಾಯಿ ಶೀಘ್ರ ಆಯೋಗದ ವರದಿ ಪಡೆದುಕೊಂಡು ಚುನಾವಣೆ ನೀತಿ ಸಂಹಿತೆ ಮೊದಲೆ ಸಿಹಿ ಸುದ್ದಿ ಕೊಡಲಿ ಎಂದು ಹೇಳಿದರು.
ಪಂಚಮಸಾಲಿಗಳಿಗೆ 2A ಮೀಸಲು: ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕೂಡಲ ಶ್ರೀ
ಯಡಿಯೂರಪ್ಪನವರಿಗೆ ಮಿಸ್ ಗೈಡ್: ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ಕೊಡಲು ಸಿದ್ಧರಿದ್ದರು. ಆದರೆ, ಎಲ್ಲಿ ಅವರ ಹೆಸರು ಮುಂಚೂಣಿಗೆ ಬಂದುಬಿಡುತ್ತದೆ ಎಂದು ಅವರನ್ನು ಮಿಸ್‌ಗೈಡ್ ಮಾಡಲಾಗಿತ್ತು. ಇಲ್ಲದಿದ್ದರೆ ಯಡಿಯೂರಪ್ಪನವರ ಅವಧಿಯಲ್ಲೇ ಮೀಸಲಾತಿ ಸಿಗುತ್ತಿತ್ತು. ಬಳಿಕ ನಮ್ಮ ಜನ ಅವರ ಮೇಲೆ ಅಸಮಾಧಾನಗೊಂಡಿದ್ದರು. ಮುಂದೆ ಶಿಗ್ಗಾವಿ ಹೋರಾಟದಲ್ಲಿ ನೇರವಾಗಿ ಯಡಿಯೂರಪ ಅವರು ಪಂಚಮಸಾಲಿ 2ಎ ಮೀಸಲಾತಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಮೊದಲು ಅವರಿವರ ಬಗ್ಗೆ ಅನುಮಾನಗಳಿತ್ತು, ಈಗ ಹಾಗಿಲ್ಲ. ಇನ್ನೂ ಮೂವರು ಸಚಿವರ ವಿರೋಧ ಇತ್ತು ಅಂತ ಕೇಳಿದ್ದೆವು. ಅದು ಕೂಡ ಈಗ ಕ್ಲೀಯರ್ ಆಗಿದೆ. ಕೇಂದ್ರ ಸರ್ಕಾರ ಸಹ ಒಪ್ಪಿಗೆ ಕೊಟ್ಟಿದೆ. ರಾಜ್ಯ ಸರ್ಕಾರ ಆಯೋಗದ ವರದಿ ಪಡೆದು ಮೀಸಲಾತಿ ನೀಡಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ಡಿಸೆಂಬರ್ 19ರ ಗಡುವು: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಡಿಸೆಂಬರ್ ೧೨ಕ್ಕೆ ೨೫ ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ವಿರಾಟಶಕ್ತಿ ಸಮಾವೇಶ ಮಾಡಬೇಕು ಅಂತಾ ತೀರ್ಮಾನ ಮಾಡಿದ್ದೆವು. ಆದರೆ, ಸಿಎಂ ಬೊಮ್ಮಾಯಿ ಅವರು ಮೊನ್ನೆ ಮಾತುಕತೆಗೆ ಕರೆದು ಹಾಗೆಲ್ಲ ಮಾಡಬೇಡಿ ಎಂದು ಹೇಳಿದ್ದಾರೆ. ಆಯೋಗದ ವರದಿ ಬರಲಿ ಎಂದು ಹೇಳುತ್ತಾ ಒಂದು ವರ್ಷ ಮುಂದೂಡಿದ್ದಾರೆ. ಅವರು ಮನಸ್ಸು ಮಾಡಿದರೆ ಕೇವಲ 24 ಗಂಟೆಯಲ್ಲಿ ಆಯೋಗದ ವರದಿ ತರಿಸಿಕೊಳ್ಳುವ ಅಧಿಕಾರವಿದೆ. 1 ವರ್ಷ 8 ತಿಂಗಳಾದ್ರೂ ಇನ್ನೂ ಆಯೋಗದ ವರದಿ ಬಂದಿಲ್ಲ. ಚುನಾವಣೆ ಇನ್ನು ಕೇವಲ ನಾಲ್ಕೇ ತಿಂಗಳು ಇದೆ. ನಿಮ್ಮನ್ನೆ ನಂಬಿದ್ದೇವೆ, ನೀವೇ ಮೀಸಲಾತಿ ಕೊಡಬೇಕು. ಈಗ ನಮ್ಮ ಡಿಸೆಂಬರ್ 12ರ ಹೋರಾಟ ಕಾರ್ಯಕ್ರಮವನ್ನು ಮುಂದೆ ಹಾಕಿದ್ದೇವೆ. ಡಿಸೆಂಬರ್ 19ರ ಸುವರ್ಣ ಸೌಧದ ಬೆಳಗಾವಿ ಅಧಿವೇಶನದ ಒಳಗಾಗಿ ಆಯೋಗದ ವರದಿ ಪಡೆದುಕೊಳ್ಳಲು ಗಡುವು ನೀಡಿದ್ದೇವೆ. ಆಯೋಗದ ವರದಿ ಪಡೆದುಕೊಂಡರೆ ಡಿ.22 ರಂದು 25 ಲಕ್ಷ ಜನ ಕೂಡಿಸಿ ಮುಖ್ಯಮಂತ್ರಿಗೆ ಬೆಳಗಾವಿಯಲ್ಲಿ ಸನ್ಮಾನ ಮಾಡುತ್ತೇವೆ. ಇಲ್ಲಿದ್ದರೆ ವಿರಾಟ್ ಶಕ್ತಿ ಸಮಾವೇಶ ಮಾಡುವುದಾಗಿ ಸರ್ಕಾರಕ್ಕೆ ಕಿವಿ ಮಾತು ಹೇಳಿದ್ದೇವೆ ಎಂದರು.
ಡಿ.12ರ ವಿಧಾನಸೌಧ ಮುತ್ತಿಗೆ ನಿರ್ಧಾರ ವಾಪಸ್ : ಜಯಮೃತ್ಯುಂಜಯ ಶ್ರೀ
ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌರರಾಗಿ ಪರಿಗಣಿಸಿ: ಕೆಎಸ್ಆರ್ಟಿಸಿ ನೌಕರರಿಗೆ ಭದ್ರತೆ ಇಲ್ಲದಂತಾಗಿದೆ. ಕನಿಷ್ಟ ಪಕ್ಷ ಸಮಾನ ವೇತನವನ್ನಾದರೂ ಸಹ ಸರ್ಕಾರ ನೀಡಬೇಕು. ಕೆಎಸ್ಆರ್ಟಿಸಿ ನೌಕರರಿಗಾಗಿ ಪಾಟೀಲ ಪುಟ್ಟಪ್ಪನವರ ಕರೆ ಮೇರೆಗೆ ನಾವು ಸಹ ಇವರ ಪರವಾಗಿ ಹೋರಾಟಕ್ಕೆ ಇಳಿದಿದ್ದೆವು, ಆದರೆ ಕೊರೋನಾ ಬಂದಿದ್ದರಿಂದ ಮುಂದುವರೆಯಲಿಲ್ಲ. ಈಗಲೂ ಸಹ ಮುಖ್ಯಮಂತ್ರಿಗಳು ಇವರ ಪರವಾಗಿ ನಿಂತು ಸರ್ಕಾರಿ ನೌಕರರೆಂದು ಘೋಷಿಸುವಂತಾಗಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮಿಜಿ ಆಗ್ರಹಿಸಿದರು. ಈ ವೇಳೆ ಕೆಎಸ್ಆರ್ ಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ, ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಅಶ್ವಿನ ಕುಮಾರ ಗದ್ದನಕೇರಿ ಉಪಸ್ಥಿತರಿದ್ದರು.