Asianet Suvarna News Asianet Suvarna News

ಸಾಹಿತ್ಯ ಸಂಭ್ರಮದಲ್ಲಿ ‘ರಾಷ್ಟ್ರೀಯತೆ’ ಜಟಾಪಟಿ!

ಸಾಹಿತ್ಯ ಸಂಭ್ರಮದಲ್ಲಿ ‘ರಾಷ್ಟ್ರೀಯತೆ’ ಜಟಾಪಟಿ| ರಾಷ್ಟ್ರೀಯತೆಯಿಂದ ಸಾವು-ನೋವು: ಚಿಂತಕ ಶಿವ| ಸಭಿಕರ ಆಕ್ಷೇಪ, ವಾಗ್ವಾದ

Row Over Nationalism in Dharwad Literary Fest
Author
Dharwad, First Published Jan 20, 2019, 12:32 PM IST

ಧಾರವಾಡ[ಜ.20]: - ರಾಷ್ಟ್ರೀಯತೆಯ ಪರಿಕಲ್ಪನೆ ತುಂಬಾ ಹಳೆಯದು. 19ನೇ ಶತಮಾನದ ಪರಿಕಲ್ಪನೆ ಈಗಲೂ ನಮ್ಮನ್ನು ಆಳುತ್ತಿದೆ. ರಾಷ್ಟ್ರೀಯತೆ ರಾಷ್ಟ್ರ, ಗಡಿ, ರಕ್ಷಣೆ ಕುರಿತಾದ ವಿಚಾರಗಳನ್ನೇ ಪ್ರತಿಪಾದಿಸುತ್ತದೆ. ಅದರಿಂದಾಗಿಯೇ ಲಕ್ಷಾಂತರ ಜನರ ಮಾರಣ ಹೋಮ ನಡೆದಿದೆ. ಅಸ್ಸಾಂ, ಕಾಶ್ಮೀರದಲ್ಲಿ ಈಗಲೂ ಜನ ಒದ್ದಾಡುತ್ತಿದ್ದಾರೆ. ಭದ್ರತೆ ಹೆಸರಿನಲ್ಲಿ ಸಾವು, ನೋವು, ಅತ್ಯಾಚಾರಗಳಾಗುತ್ತಿವೆ.

- ರಾಷ್ಟ್ರೀಯತೆ ಬಗ್ಗೆ ಸರಿಯಾದ ಪ್ರಶ್ನೆ ಕೇಳುವ ಮನೋಧರ್ಮ ಇಲ್ಲವಾಗಿದೆ. ನಾಗರಿಕತೆಯ ನೆಲೆಯಲ್ಲಿ ನಾವು ರಾಷ್ಟ್ರೀಯತೆ ಪ್ರಶ್ನೆಗಳನ್ನು ಕೇಳಬೇಕಿದೆ. ಹೊಸ ಪರಿಕಲ್ಪನೆ, ಸಾಧ್ಯತೆಗಳ ಕುರಿತು ಯೋಚಿಸಬೇಕಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಏನು ಮಾಡಬೇಕು ಅನ್ನುವ ಕುರಿತು ಚಿಂತಿಸಬೇಕಾಗಿದೆ.

ಧಾರವಾಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಶನಿವಾರ ಹೈವೋಲ್ಟೇಜ್‌ ಗೋಷ್ಠಿ ಎಂದೇ ಹೇಳಬಹುದಾದ ‘ರಾಷ್ಟ್ರೀಯತೆ- ಸಮಕಾಲೀನ ಸಂದರ್ಭದಲ್ಲಿನ ವಾಗ್ವಾದಗಳು’ ಗೋಷ್ಠಿಯಲ್ಲಿ ಚಿಂತಕ ಡಾ. ಶಿವ ವಿಶ್ವನಾಥನ್‌ ಪ್ರಸ್ತುತ ಪಡಿಸಿದ ವಿಚಾರಗಳು ಇವು. ಸಾಹಿತ್ಯ ಸಂಭ್ರಮದ ಬಹು ನಿರೀಕ್ಷಿತ ಗೋಷ್ಠಿ ಗಂಭೀರ ವಿಷಯ ಮಂಡನೆ, ಸಭಿಕರಿಂದ ಆಕ್ಷೇಪ, ಪರಸ್ಪರ ವಾಗ್ವಾದ, ಬಿಸಿ ಬಿಸಿ ಚರ್ಚೆ ಇವೆಲ್ಲದರ ಜತೆಗೆ ಸಂವಾದ ಸಾಧ್ಯವಾಗುವ ಮೂಲಕ ಯಶಸ್ವಿ ಗೋಷ್ಠಿ ಎಂದು ಕರೆಸಿಕೊಂಡು ಸಂಪನ್ನಗೊಂಡಿತು.

ಅಂತಿಮವಾಗಿ ಶಿವ ವಿಶ್ವನಾಥನ್‌, ಎಲ್ಲರಿಗೂ ಶಾಂತಿ ಬೇಕು. ಭಾರತದ ಶಾಂತಿ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ಇಡೀ ಜಗತ್ತಿನ ಶಾಂತಿ ಕುರಿತಾಗಿ ಮಾತನಾಡುತ್ತಿದ್ದೇನೆ. ನೋವಲ್ಲಿರುವ ಹೆಂಗಸರು, ಮಕ್ಕಳ ನೆಮ್ಮದಿಯ ಬದುಕಿನ ಕುರಿತು ಹೇಳುತ್ತಿದ್ದೇನೆ. ಈಗ ಅಲ್ಲೆಲ್ಲಾ ಭಯ ಇದೆ. ಒದ್ದಾಟ ಇದೆ. ಅದನ್ನು ಹೋಗಲಾಡಿಸಲು ಹೊಸ ಯೋಚನೆಗಳು ಬೇಕು. ಹೊಸ ರೀತಿಯ ಯೋಚನಾ ಕ್ರಮಬೇಕು. ಹೊಸ ರೀತಿಯ ಕಥೆ ಹೇಳುವ ರೀತಿ ರೂಪುಗೊಳ್ಳಬೇಕು. ಇದನ್ನು ನೀವು ಒಪ್ಪದೇ ನನ್ನನ್ನು ಆ್ಯಂಟಿ ನ್ಯಾಷನಲ್‌ ಅಂತ ಬೇಕಾದರೆ ಕರೆಯಿರಿ ಎಂದರು. ಅತ್ಯಂತ ಸುಸ್ಪಷ್ಟಭಾಷೆಯಲ್ಲಿ, ಓತಪ್ರೋತವಾಗಿ ಅವರು ಮಂಡಿಸಿದ ವಿಚಾರಗಳು ಇಲ್ಲಿವೆ.

ಭಾರತ ಸೃಷ್ಟಿಯಾಗಿದ್ದೇ ಹಿಂಸೆಯಿಂದ:

ರಾಷ್ಟ್ರೀಯತೆಯ ಇತಿಹಾಸ ನೋಡಿದರೆ ಮಾರಣಹೋಮಗಳು ಕಣ್ಣೆದುರು ಬರುತ್ತವೆ. ವಿಭಜನೆ ಕಾಲದಲ್ಲಿ ಸುಮಾರು 5 ದಶಲಕ್ಷ ಮಂದಿಯ ಸಾವಾಯಿತು. ಆಗ ನಡೆದ ಅತ್ಯಾಚಾರಕ್ಕೆ ಲೆಕ್ಕವೇ ಇಲ್ಲ. ವಿಭಜನೆಯ ಇತಿಹಾಸ ಅನ್ನುವುದೇ ಅತ್ಯಾಚಾರದ ಇತಿಹಾಸ. ಭಾರತ ಸೃಷ್ಟಿಯಾಗಿದ್ದೇ ಹಿಂಸೆಯಿಂದ, ಮಾರಣ ಹೋಮಗಳಿಂದ. ತಮ್ಮವರನ್ನೇ ಜನ ಸಾಯಿಸುವ ಹಾಗಾಯಿತು. ಈಗಲೂ ಇದು ಮುಂದುವರಿದಿದೆ. ಅಸ್ಸಾಂಗೆ ಹೋಗಿದ್ದಾಗ ತಿಳಿಯಿತು, ಸೇನೆಯಿಂದ ನಡೆದ 1500 ಅತ್ಯಾಚಾರ ಕೇಸುಗಳು ಅಲ್ಲಿ ದಾಖಲಾಗಿವೆ ಎಂದು. ಕಾಶ್ಮೀರದಲ್ಲೂ ರಾಜಕೀಯದವರು ಭದ್ರತೆ ಹೆಸರಲ್ಲಿ ಸಾವನ್ನು ಪ್ರೋತ್ಸಾಹಿಸುತ್ತಾರೆ. ಟೆರರಿಸ್ಟುಗಳೂ ಹಿಂಸಿಸುತ್ತಿದ್ದಾರೆ. ಇನ್ನೆಷ್ಟುಅತ್ಯಾಚಾರಗಳು ಬೇಕು? ಇವೆಲ್ಲವೂ ನಿಲ್ಲಬೇಕು. ಅದಕ್ಕಾಗಿ ಕತೆ ಹೇಳುವವರು ಬೇಕು. ಹೊಸ ರೀತಿ ಪ್ರಶ್ನೆ ಕೇಳುವವರು ಬೇಕು.

ನಮ್ಮದೂ ಮುಸ್ಲಿಂ ರಾಷ್ಟ್ರ:

ಪಾಕಿಸ್ತಾನಕ್ಕಿಂತ ಜಾಸ್ತಿ ಮುಸ್ಲಿಮರು ನಮ್ಮಲ್ಲಿದ್ದರು. ಆ ರೀತಿಯಲ್ಲಿ ನೋಡಿದರೆ ನಮ್ಮದು ಮುಸ್ಲಿಂ ರಾಷ್ಟ್ರ. ಇಂಡೋನೇಷ್ಯಾ ನಂತರ ಅತಿ ಹೆಚ್ಚು ಸಂಖ್ಯೆಯ ಮುಸ್ಲಿಮರಿದ್ದುದು ನಮ್ಮಲ್ಲೇ. ಈ ಕುರಿತು ಯಾರು ಆಲೋಚಿಸುತ್ತಾರೆ. ದೇಶ ದೇಶಗಳ ಜನರ ಮಧ್ಯದ ಬಾಂಧವ್ಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಭಾರಿ ವಾಗ್ವಾದ, ಸಭೆಯಲ್ಲಿ ಗಲಾಟೆ, ಗೋಷ್ಠಿ ಸಂಪನ್ನ

ಶಿವ ವಿಶ್ವನಾಥನ್‌ ತಮ್ಮ ವಿಚಾರ ಮಂಡಿಸುತ್ತಿದ್ದಾಗಲೇ ಕೆಲ ಸಭಿಕರಿಂದ ವಿರೋಧ ವ್ಯಕ್ತವಾಯಿತು. ಭಯೋತ್ಪಾದಕ ದಾಳಿಗಳ ಬಗ್ಗೆಯೂ ಮಾತನಾಡಿ ಎಂದು ಕೆಲವರು ಆಗ್ರಹಿಸಿದರು. ಅಸ್ಸಾಮಿನಲ್ಲಿ ಯೋಧರಿಂದ ಅತ್ಯಾಚಾರ ನಡೆಯುತ್ತಿದೆ ಎಂಬ ಪ್ರಸ್ತಾಪ ಬಂದಿದ್ದಕ್ಕೆ ನಿವೃತ್ತ ಯೋಧ ಸಿದ್ದಲಿಂಗಯ್ಯ ಹಿರೇಮಠ ವಿರೋಧ ವ್ಯಕ್ತಪಡಿಸಿದರು. ಕೆಲವೇ ಘಟನೆಗಳನ್ನಿಟ್ಟುಕೊಂಡು ಯೋಧರನ್ನು ಅತ್ಯಾಚಾರಿಗಳನ್ನಾಗಿ ಬಿಂಬಿಸುತ್ತಿದ್ದೀರಿ, ಸರಿಯಲ್ಲ ಎಂದರು. ಮತ್ತೆ ಕೆಲವರು ನೀವು ಏಕಪಕ್ಷೀಯವಾಗಿ ಮಾತನಾಡುತ್ತಿದ್ದೀರಿ ಎಂದು ತಕರಾರು ಎತ್ತಿದರು. ತಕರಾರು ಹೆಚ್ಚಿದಾಗ ಬೇರೆಯವರು ಅವರನ್ನೂ ಸುಮ್ಮನಾಗಿಸಿದರು. ವಿಶೇಷವೆಂಬಂತೆ ಸಾಹಿತ್ಯ ಸಂಭ್ರಮದ ಅಧ್ಯಕ್ಷ ರಾಘವೇಂದ್ರ ಪಾಟೀಲರು ನಿಷ್ಠುರವಾಗಿ ದನಿ ಎತ್ತರಿಸಿ ಶಿವ ವಿಶ್ವನಾಥನ್‌ಗೆ ಮಾತನಾಡಲು ಅವಕಾಶ ಮಾಡಿಕೊಡಲು ಸೂಚಿಸಿದರು. ಗೋಷ್ಠಿಯ ನಿರ್ದೇಶಕರಾಗಿದ್ದ ಕೆ.ವಿ.ಅಕ್ಷರ, ಶಿವ ಯಾವ ರೋಗದ ಕುರಿತು ಮಾತನಾಡುತ್ತಿದ್ದಾರೋ ಆ ರೋಗ ಲಕ್ಷಣವನ್ನು ನಾವೆಲ್ಲಾ ಹೊಂದಿದ್ದೇವೆ ಅಂತ ಇಲ್ಲಿ ಸಾಬೀತಾಗಿದೆ ಎಂದರು.

-ರಾಜೇಶ್‌ ಶೆಟ್ಟಿ

Follow Us:
Download App:
  • android
  • ios