ಪಠ್ಯ ಸಮಿತಿ ಸೇರಿದಾಗ ಉಬ್ಬಿಲ್ಲ, ಈಗ ಕುಗ್ಗಿಯೂ ಇಲ್ಲ: ಚಕ್ರತೀರ್ಥ
* ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ
* ಪಠ್ಯ ಸಮಿತಿ ಸೇರಿದಾಗ ಉಬ್ಬಿಲ್ಲ, ಈಗ ಕುಗ್ಗಿಯೂ ಇಲ್ಲ: ಚಕ್ರತೀರ್ಥ
* ಸಮಿತಿ ವಿಸರ್ಜಿಸಿದ್ದಕ್ಕೆ ತೀಕ್ಷ್ಣ ಪ್ರತಿಕ್ರಿಯೆ
ಬೆಂಗಳೂರು(ಜೂ,08) ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡುವುದರ ಜೊತೆಗೆ ಪಿಯುಸಿ ಪಠ್ಯದ ಹೊಣೆಗಾರಿಕೆಯಿಂದಲೂ ಕೈಬಿಟ್ಟಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರೋಹಿತ್ ಚಕ್ರತೀರ್ಥ ಅವರು, ಸಂಶೋಧಕನ ದಾರಿಯು ರಾಜಕೀಯ ಪಕ್ಷ ಅಥವಾ ಸರ್ಕಾರದ ದಾರಿಯೂ ಆಗಿರಬೇಕಿಲ್ಲ ಎಂದು ಹೇಳಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ನೇಮಿಸಿದ್ದೇವೆ ಎಂದು ಹೇಳಿದಾಗ ನಾನು ಉಬ್ಬಿಲ್ಲ. ತೆಗೆದು ಹಾಕಿದ್ದೇವೆ ಎಂದಾಗ ಕುಗ್ಗಿಯೂ ಇಲ್ಲ. ಚಕ್ರತೀರ್ಥನಿಗೆ ‘ಗೇಟ್ ಪಾಸ್’ ಎಂಬ ಮಾತನ್ನು ಮಾಧ್ಯಮದಲ್ಲಿ ಓದಿದಾಗ ನಗು ಬರುತ್ತದೆ. ಗೇಟ್ ಪಾಸ್ ಕೊಡಲು ನಾನು ಯಾವ ಕಾಂಪೌಂಡಿನೊಳಗೂ ನಿಂತಿಲ್ಲ ಎಂದು ಹೇಳಿದ್ದಾರೆ.
ತನಗೆ ಬೇಕಾದಂತೆ ಇತಿಹಾಸ ಬರೆಯುವುದು ಎಷ್ಟುಅರ್ಥಹೀನವೋ, ಬೇರೆಯವರಿಗೆ ಬೇಕಾದಂತೆ ಇತಿಹಾಸ ಬರೆಯುತ್ತೇನೆ ಎಂಬುದು ಕೂಡ ಅಷ್ಟೇ ಅರ್ಥಹೀನವಾದದ್ದು. ಇತಿಹಾಸಕ್ಕೆ ನಿಷ್ಠವಾಗಿ ಇತಿಹಾಸವನ್ನು ಬರೆಯಬೇಕೆಂಬ ನನ್ನ ಅಪೇಕ್ಷೆ ಎರಡು ಕಡೆಗೂ ಒಪ್ಪಿಗೆಯಾಗದ ಪಂಥವಿರಬಹುದು. ವಿಸರ್ಜನೆ ಆದ ಮೇಲೂ ಉಳಿಯುವುದು ನನ್ನ ಜಾಯಮಾನಕ್ಕೆ ಒಗ್ಗುವಂತಹದ್ದಲ್ಲ. ಹೀಗಾಗಿ, ನನ್ನ ಕೆಲಸಗಳಿಗೆ ಮರಳಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿತಿಯನ್ನು ವಿಸರ್ಜಿಸಲಾಗಿತ್ತು. ಬಳಿಕೆ ಪಿಯುಸಿ ಪಠ್ಯದ ಹೊಣೆಗಾರಿಕೆಯಿಂದಲೂ ಕೈಬಿಡಲಾಗಿತ್ತು. ಇದಕ್ಕೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಚಕ್ರತೀರ್ಥ, ಓರ್ವ ಸಂಶೋಧಕನ ದಾರಿ, ಒಂದು ರಾಜಕೀಯ ಪಕ್ಷ ಅಥವಾ ಸರ್ಕಾರದ ದಾರಿಯೂ ಆಗಿರಬೇಕಿಲ್ಲ. ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.