ಮಂಗಳೂರು(29): ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಹೆಸರಲ್ಲಿ ಸ್ಮಾರಕ ನಿರ್ಮಿಸಲು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಮಧುಕರ ಶೆಟ್ಟಿಯವರಂಥ ದಕ್ಷರ ಜೀವನಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿ ಎಂದು ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ ಮಧುಕರ ಶೆಟ್ಟಿ ನೆನಪಲ್ಲಿ ಯಾವುದಾದರೊಂದು ಸ್ಮಾರಕವನ್ನು ನಿರ್ಮಿಸಬೇಕು ಎಂದು ಹೇಳಿರುವ ಹೆಗ್ಡೆ, ಅದಕ್ಕಾಗಿ ತಾವು ಆರ್ಥಿಕ ಸಹಾಯ ನೀಡಲು ಸಿದ್ಧ ಎಂದು ಘೋಷಿಸಿದರು. 

ಮಧುಕರ ಶೆಟ್ಟಿಯವರ ಸಾವಿನಿಂದ ವ್ಯಯಕ್ತಿಕವಾಗಿ ತಮಗೆ ತುಂಬಾ ನೋವಾಗಿದ್ದು, ಒಬ್ಬ ಪ್ರಾಮಾಣಿಕ ಯುವಕ ಇನ್ನಷ್ಟು ಸೇವೆ ಮಾಡಲಿದ್ದಾರೆ ಎಂದೇ ನಾವೆಲ್ಲರೂ ಭಾವಿಸಿದ್ದೇವು ಎಂದು ಹೆಗ್ಡೆ ಕಂಬಿ ಮಿಡಿದರು.

"
ಯಾವುದೇ ಆಮಿಷಕ್ಕೆ ಒಳಗಾಗದೇ ಕರ್ತವ್ಯ ನಿರ್ವಹಿಸುತ್ತಿದ್ದ ಶೆಟ್ಟಿ, ಅವರ ತಂದೆಯಂತೆಯೇ ದಕ್ಷ ಅಧಿಕಾರಿ ಎಂದು ಹೆಗ್ಡೆ ನುಡಿದರು.  ಚಿಕ್ಕಮಗಳೂರಿನಲ್ಲಿ ದಕ್ಷ ಆಡಳಿತ ಮಾಡಿದ್ದಕ್ಕೆ ಅವರನ್ನು ನಾನ್ ಎಕ್ಸಿಕ್ಯೂಟಿವ್ ಪೋಸ್ಟ್ ಗೆ ವರ್ಗಾವಣೆ ಮಾಡಲಾಗಿತ್ತು ಎಂಬುದನ್ನೂ ಈ ಹಿಂದೆ ತಾವು ಕೇಳಿದ್ದಾಗಿ ಹೆಗ್ಡೆ ಹೇಳಿದರು.

ಕೂಡಲೇ ತಾವು ಮಧುಕರ ಶೆಟ್ಟಿ ಅವರನ್ನು ಸಂಪರ್ಕಿಸಿ ಲೋಕಾಯುಕ್ತಕ್ಕೆ ಬರಲು ಆಹ್ವಾನ ನೀಡಿದ್ದೆ. ಅದರಂತೆ ಸರ್ಕಾರದ ಆದೇಶದ ಪ್ರಕಾರ ಅವರು ಲೋಕಾಯುಕ್ತಕ್ಕೆ ಬಂದರು ಎಂದು ಹಳೆಯ ದಿನಗಳನ್ನು ಹೆಗ್ಡೆ ನೆನೆದರು. 

ವೀರಪ್ಪನ್ ಕೇಸಲ್ಲಿ ಎಸ್ ಐಟಿಯಲ್ಲಿದ್ದಾಗ ಸರ್ಕಾರ ಅವರಿಗೆ ಸೈಟ್ ಕೊಡಲು ನಿರ್ಧರಿಸಿತ್ತು. ಆದರೆ ಮಧುಕರ ಶೆಟ್ಟಿ ಮಾತ್ರ ಸೈಟ್ ನಿರಾಕರಿಸಿ ನನ್ನ ಕೆಲಸಕ್ಕೆ ಸಂಬಳ ಕೊಟ್ಟಿದ್ದೀರಿ ಅಂದಿದ್ದನ್ನು ನಾವೆಲ್ಲರೂ ನೆನೆಯಬೇಕು ಎಂದು ಹೆಗ್ಡೆ ಹೇಳಿದರು. 

ಕೇವಲ ಗಣಿ ಅಕ್ರಮ ಮಾತ್ರವಲ್ಲದೇ ಹೊಸ ಏರ್ ಪೋರ್ಟ್ ಬಂದಾಗ ಅಕ್ರಮದ ವಿರುದ್ದ ಧ್ವನಿಯೆತ್ತಿದ್ದರು.  ಆಗಿನ ಹಾಲಿ ಸಚಿವರೊಬ್ಬರ ಪುತ್ರನ ವಿರುದ್ಧ ಚಾರ್ಜ್ ಶೀಟ್ ಮಾಡಿ ಜೈಲಿಗೆ ಕೂಡ ಅಟ್ಟಿದ್ದರು.  ಇವತ್ತು ಅವರಿಲ್ಲ ಅನ್ನೋದು ಭ್ರಷ್ಟರಿಗೆ ಸಂತಸದ ವಿಚಾರ ಆಗಿರಬಹುದು ಎಂದು ಹೆಗ್ಡೆ ಮಾರ್ಮಿಕವಾಗಿ ನುಡಿದರು.