ರಾಜ್ಯದ ಕ್ಲಬ್‌ಗಳಲ್ಲಿ ಇನ್ಮುಂದೆ ಇದಕ್ಕೆಲ್ಲಾ ಬ್ರೇಕ್ ಬೀಳಲಿದೆ. ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ
ವಿಧಾನಸಭೆ (ಡಿ.09): ರಾಜ್ಯದಲ್ಲಿನ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಲು ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಗ್ಯಾಂಬ್ಲಿಂಗ್ ಕ್ಲಬ್‌ಗಳ ನಿಯಂತ್ರಣಕ್ಕಾಗಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದಿಪಡಿ ತರಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್ ಸದಸ್ಯ ಈಶ್ವರ ಬಿ.ಖಂಡ್ರೆ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಾದಕ ವಸ್ತು ಜಾಲದ ವಿರುದ್ಧ ಸಮರ ಸಾರಲಾಗಿದೆ. ಗ್ಯಾಂಬ್ಲಿಂಗ್ ಕ್ಲಬ್‌ಗಳಲ್ಲಿಯೂ ಮಾದಕ ವಸ್ತುಗಳ ಸೇವನೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲು ಕ್ರಮ ಜರುಗಿಸಲಾಗುವುದು. ಇದನ್ನು ಶಿಕ್ಷಾರ್ಹ ಅಪರಾಧ ಎಂದು ತಿದ್ದುಪಡಿಯಲ್ಲಿ ಸೇರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಾದಕ ವಸ್ತುಗಳ ಜಾಲ ನಿಯಂತ್ರಿಸಲು ‘ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸೆಸ್ಟೆನ್ಸಸ್ ಆಕ್ಟ್’ಗೆ (ಎನ್‌ಡಿಪಿಎಸ್) ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತರಬೇಕು. ಈ ಹಿನ್ನೆಲೆಯಲ್ಲಿ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಎಫ್‌ಎಸ್‌ಎಲ್‌ಗೆ ಆಧುನಿಕ ತಂತ್ರಜ್ಞಾನ:
ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ದ ವರದಿ ವಿಳಂಬ ತಪ್ಪಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 50ಕ್ಕೂ ಹೆಚ್ಚು ಮಾದರಿಗಳನ್ನು ಏಕಕಾಲಕ್ಕೆ ಪ್ರಯೋಗಾಲಯದಲ್ಲಿ ವರದಿ ನೀಡಲು ಸಾಧ್ಯವಿದೆ. ಮುಂಬರುವ ದಿನದಲ್ಲಿ ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡದಲ್ಲಿಯೂ ವಿಭಾಗೀಯ ಮಟ್ಟದ ಪ್ರಯೋಗಾಲಯ ಸ್ಥಾಪನೆ ಮಾಡಲು ಅಗತ್ಯ ಕ್ರಮ ಜರುಗಿಸಲಾಗುವುದು. ಇದರಿಂದ ವರದಿ ವಿಳಂಬಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ ಎಂದರು.
ಜೂಜಾಟ ಅಡ್ಡೆಗಳ ಬೆನ್ನಿಗೆ ನಿಂತ ಕಾಂಗ್ರೆಸ್ ನಾಯಕ..! ..
ರಾಜ್ಯದ ಗಡಿ ಜಿಲ್ಲೆ ಸೇರಿದಂತೆ ಇತರೆಡೆಗಳಲ್ಲಿ ರಿಕ್ರಿಯೇಷನ್ ಕ್ಲಬ್ ಹೆಸರಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಅಲ್ಲದೆ, ಶಾಲಾ-ಕಾಲೇಜುಗಳ ಬಳಿ ವೈಟ್ನರ್, ಸಿಂಥಟಿಕ್ ಡ್ರಗ್ಸ್ ಮತ್ತು ಬೆಂಗಳೂರಿನಂತಹ ನಗರ ಪ್ರದೇಶದಲ್ಲಿನ ಹುಕ್ಕಾಬಾರ್‌ಗಳ ನಿಯಂತ್ರಣಕ್ಕೂ ಸರ್ಕಾರ ಕ್ರಮ ಕೈಗೊಳ್ಳಲಿದೆ. ಡಾರ್ಕ್ ವೆಬ್ ಜಾಲದ ಮೂಲಕ ನಡೆಯುತ್ತಿದ್ದ ಮಾದಕ ದ್ರವ್ಯಗಳ ವ್ಯವಹಾರಕ್ಕೂ ಕಡಿವಾಣ ಹಾಕಲಾಗಿದೆ. ಜೂಜಾಟದಿಂದ ಡ್ರಗ್ಸ್, ಅನಧಿಕೃತ ಶಸ್ತ್ರಾಸ್ತ್ರಗಳ ಸಾಗಣೆ ಜಾಲದವರೆಗೆ ಒಂದಕ್ಕೊಂದು ಸಂಬಂಧ ಇದೆ. ಈ ಎಲ್ಲಾ ಜಾಲಗಳಿಗೂ ಅಂಕುಶ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಡ್ರಗ್ಸ್ ಜಾಲದಲ್ಲಿದ್ದ 15 ಮಂದಿ ನೈಜೀರಿಯಾ ಮತ್ತು 65ಕ್ಕೂ ಹೆಚ್ಚು ಮಂದಿ ಬಾಂಗ್ಲಾ ಮೂಲದ ಪ್ರಜೆಗಳನ್ನು ಕೇಂದ್ರಕ್ಕೆ ಶಿಫಾರಸು ಮಾಡಿ ರಾಜ್ಯ ಮತ್ತು ದೇಶದಿಂದಲೇ ಹೊರಹಾಕಲು ಕ್ರಮ ವಹಿಸಿದ್ದೇವೆ. ಮಾದಕ ವಸ್ತುಗಳ ಜಾಲ ನಿಯಂತ್ರಣಕ್ಕೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದು ಹೇಳಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 9, 2020, 8:42 AM IST