ಧಾರವಾಡ(ನ.18): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೋರಂಜನೆಗೋಸ್ಕರ ಜೂಜಾಟ ಆಡುವುದು ಸಾಮಾನ್ಯ. ಆದರೆ, ಅದನ್ನೇ ದೊಡ್ಡ ಅಪರಾಧ ಎಂದು ಬಿಂಬಿಸಿರುವ ಪೊಲೀಸ್‌ ಇಲಾಖೆ ಉದ್ದೇಶಪೂರ್ವಕವಾಗಿ ಹು-ಧಾ ಅವಳಿ ನಗರದ ಕ್ಲಬ್‌ಗಳ ಮೇಲೆ ದಾಳಿ ನಡೆಸಿದ್ದು ಖಂಡನೀಯ ಎನ್ನುವ ಮೂಲಕ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಜೂಜಾಟದ ಅಡ್ಡೆಗಳ ಬೆನ್ನಿ ನಿಂತು ಪೊಲೀಸ್‌ ವಿರುದ್ಧ ಗುಡುಗಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ದಿನವೇ ಎರಡು ಕಡೆಗಳಲ್ಲಿ ಪೂಲೀಸರು ದಾಳಿ ಮಾಡಿದ್ದಾರೆ. ಅದೇ ದಿನ ಹಾಗೂ ದೀಪಾವಳಿಯ ಮೂರು ದಿನ ಜಿಮಖಾನಾ ಕ್ಲಬ್‌ ಸೇರಿದಂತೆ ವಿವಿಧೆಡೆ ಬೆಳಿಗ್ಗೆ 6ರ ವರೆಗೂ ಜೂಜಾಟ ನಡೆಸಲಾಗಿದೆ. ದೊಡ್ಡವರ ಜೂಜಾಟ ಕೈ ಬಿಟ್ಟು ಸಣ್ಣವರ ಕ್ಲಬ್‌ಗಳಿಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು: ಶೆಟ್ಟರ್‌

ಬೆಳಗಾವಿ ವಲಯದ ಐಜಿ ರಾಘವೇಂದ್ರ ಸುಹಾಸ ಅವರು ಸ್ವತಃ ಧಾರವಾಡಕ್ಕೆ ಬಂದು ಈ ದಾಳಿ ನಡೆಸಿದ್ದು ಏತಕ್ಕೆ ಎಂಬುದು ತಿಳಿಯುತ್ತಿಲ್ಲ. ಅಲ್ಲದೇ, ಎಪಿಎಂಸಿಯ ಹಿರಿಯರಾದ ಬಿ.ಎಸ್‌. ದೊಡವಾಡ ಹಾಗೂ ತವನಪ್ಪ ಅಷ್ಟಗಿ ಅವರಿಗೆ ತೀವ್ರ ರೀತಿಯ ಕಿರುಕುಳ ನೀಡಿದ್ದಾರೆ. ಜೂಟಾಟದಲ್ಲಿ ತೊಡಗಿದವರು ಭಯೋತ್ಪಾದಕರಲ್ಲ ಆದರೂ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಠಾಣೆಯಲ್ಲಿಯೇ ಜಾಮೀನು ನೀಡಬೇಕಿದ್ದು ಮನೆಗೆ ಹೋದವರನ್ನು ಮರಳಿ ಕರೆಯಿಸಿ ಠಾಣೆಯಲ್ಲಿ ಕೂರಿಸಲಾಗಿದೆ. ಬರೀ ಧಾರವಾಡದಲ್ಲಿ ಮಾತ್ರ ಈ ದಾಳಿ ನಡೆದಿದ್ದು ಬೆಳಗಾವಿ, ವಿಜಯಪೂರ, ಗದಗ, ಹಾವೇರಿ, ಉಕದಲ್ಲಿ ಏತಕ್ಕೆ ಮಾಡಲಿಲ್ಲ ಎಂಬುದನ್ನು ಪೊಲೀಸ್‌ ಇಲಾಖೆ ಸ್ಪಷ್ಟಪಡಿಸಬೇಕು ಎಂದು ಚಿಂಚೋರೆ ಪ್ರಶ್ನಿಸಿದರು.