ಬೆಂಗಳೂರು [ಅ.18] :  ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಐಎಂಎ ಮಾಲೀಕ ಮಹಮ್ಮದ್‌ ಮನ್ಸೂರ್‌ ಖಾನ್‌ನಿಂದ ಉಪಮುಖ್ಯಮಂತ್ರಿ ಪರವಾಗಿ 5 ಕೋಟಿ ರು.ಗಳನ್ನು ರಮೇಶ್‌ ಸ್ವೀಕರಿಸಿದ್ದರು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಈ ಹಣ ವರ್ಗಾವಣೆಯನ್ನು ಡೈರಿಯೊಂದರಲ್ಲಿ ರಮೇಶ್‌ ಬರೆದಿಟ್ಟಿದ್ದರು. ಕಳೆದ ವಾರ ಪರಮೇಶ್ವರ್‌ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ (ಐಟಿ) ಅಧಿಕಾರಿಗಳು, ಅವರ ಆಪ್ತ ಸಹಾಯಕನ ಮನೆಯಲ್ಲಿದ್ದ ಆ ಲೆಕ್ಕದ ಡೈರಿಯನ್ನು ವಶಪಡಿಸಿಕೊಂಡಿದ್ದರು. ಇದರಿಂದ ಭಯಗೊಂಡು ರಮೇಶ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಪರಮೇಶ್ವರ್‌ ಆಪ್ತ ರಮೇಶ್ ನೇಣಿಗೆ ಕೊರಳೊಡಿದ್ದೇಕೆ? ಆತ್ಮಹತ್ಯೆಗೆ ಕಾರಣ ಬಹಿರಂಗ...

ಲೋಕಸಭಾ ಚುನಾವಣೆ ವೇಳೆ ಅಂದಿನ ಉಪಮುಖ್ಯಮಂತ್ರಿ ಪರಮೇಶ್ವರ್‌ ಸೂಚನೆ ಮೇರೆಗೆ ರಮೇಶ್‌, ಉದ್ಯಮಿಗಳು ಸೇರಿದಂತೆ ಕೆಲವರಿಂದ ಚುನಾವಣಾ ದೇಣಿಗೆ ಸಂಗ್ರಹಿಸಿದ್ದರು. ಅದರಂತೆ ಬಹುಕೋಟಿ ವಂಚನೆ ಹಗರಣದಲ್ಲಿ ಸಿಲುಕಿದ್ದ ಐಎಂಎ ಮಾಲೀಕ ಮನ್ಸೂರ್‌ನಿಂದ ಕೂಡ ರಮೇಶ್‌ ಸುಮಾರು 5 ಕೋಟಿ ರು. ಪಡೆದಿದ್ದರು. ಹಣ ನೀಡಿರುವ ಬಗ್ಗೆ ವಂಚನೆ ಪ್ರಕರಣದ ಕುರಿತು ಪ್ರತ್ಯೇಕ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ), ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಸಿಬಿಐ ವಿಚಾರಣೆಯಲ್ಲಿ ಮನ್ಸೂರ್‌ ಬಹಿರಂಗಪಡಿಸಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಣ ಸಂಗ್ರಹಿಸಿದ ಬಳಿಕ ರಮೇಶ್‌, ಸಾಕ್ಷ್ಯಕ್ಕಾಗಿ ಚುನಾವಣಾ ದೇಣಿಗೆ ನೀಡಿದವರ ಹೆಸರು ಮತ್ತು ಅವರಿಂದ ಪಡೆದ ಹಣದ ಬಗ್ಗೆ ಡೈರಿಯಲ್ಲಿ ಬರೆದಿಟ್ಟಿದ್ದರು. ಅಲ್ಲದೆ, ಕೆಲವರ ಮೊಬೈಲ್‌ ಸಂಭಾಷಣೆಯನ್ನು ಸಹ ರಮೇಶ್‌ ರೆಕಾರ್ಡ್‌ ಮಾಡಿಟ್ಟಿದ್ದರು. ಈ ಎಲ್ಲ ಸಾಕ್ಷ್ಯಗಳು ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದವು. ಇದರಿಂದ ಆತಂಕಕ್ಕೊಳಗಾಗಿದ್ದ ರಮೇಶ್‌, ಮುಂದೆ ಐಟಿ ತನಿಖೆಯ ಬಲೆಗೆ ಬೀಳುತ್ತೇನೆ ಎಂದು ಹೆದರಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರಬಹುದು ಎಂಬ ಪೊಲೀಸರು ಶಂಕಿಸಿದ್ದಾರೆ.

‘ವಂಚನೆ ಕೃತ್ಯದಲ್ಲಿ ಮನ್ಸೂರ್‌ ವಿದೇಶಕ್ಕೆ ತಪ್ಪಿಸಿಕೊಳ್ಳುವ ಮುನ್ನ ಪರಮೇಶ್ವರ್‌ ಜತೆ ಹಣಕಾಸು ವ್ಯವಹಾರ ನಡೆಸಿದ್ದ. ನಮ್ಮ ವಿಚಾರಣೆ ವೇಳೆ ಮನ್ಸೂರ್‌ ನೀಡಿದ್ದ ಹೇಳಿಕೆಯಲ್ಲಿ ಉಲ್ಲೇಖವಾಗಿತ್ತು. ಆದರೆ ನಮ್ಮದು ಪ್ರಾಥಮಿಕ ತನಿಖೆಯಾಗಿದ್ದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ ಹಣ ನೀಡಿರುವ ಸಂಬಂಧ ಕೆಲವು ಸಾಕ್ಷ್ಯಗಳು ಸಿಕ್ಕಿದ್ದವು’ ಎಂದು ಎಸ್‌ಐಟಿಯಲ್ಲಿ ಕೆಲಸ ಮಾಡಿದ್ದ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಗೊತ್ತಾದದ್ದು ಹೇಗೆ?

1. ಕಳೆದ ವಾರದ ಐಟಿ ದಾಳಿ ವೇಳೆ ಪರಂ ಆಪ್ತ ಸಹಾಯಕ ರಮೇಶ್‌ ಡೈರಿ ಪತ್ತೆ

2. ಈ ಡೈರಿಯಲ್ಲಿ ಹಣಕಾಸು ವ್ಯವಹಾರಗಳ ಕುರಿತು ಉಲ್ಲೇಖಿಸಿದ್ದ ರಮೇಶ್‌

3. ಲೋಕಸಭಾ ಚುನಾವಣೆ ಸಂದರ್ಭ ವಿವಿಧ ಉದ್ಯಮಿಗಳಿಂದ ದೇಣಿಗೆ ಸಂಗ್ರಹ

4. ಐಎಂಎ ಜ್ಯುವೆಲ್ಸ್‌ ಮಾಲಿಕ ಮನ್ಸೂರ್‌ ಖಾನ್‌ನಿಂದ .5 ಕೋಟಿ ಹಣ ಸ್ವೀಕಾರ

5. ಹಣದ ಬಗ್ಗೆ ಡೈರಿಯಲ್ಲಿ ಬರೆದು, ಫೋನ್‌ ಕರೆಗಳನ್ನು ರೆಕಾರ್ಡ್‌ ಮಾಡಿದ್ದ ಪಿಎ

6. ಐಟಿ ತನಿಖೆಯಲ್ಲಿ ಇದೆಲ್ಲ ಬಹಿರಂಗವಾಗುವ ಭೀತಿ. ಇದೇ ಕಾರಣಕ್ಕೆ ಆತ್ಮಹತ್ಯೆ?