Asianet Suvarna News Asianet Suvarna News

ಗಡುವು ಮುಕ್ತಾಯ : ಇಂದಿನಿಂದ ಪಂಚಮಸಾಲಿ ಹೋರಾಟ ತೀವ್ರ

ಪಂಚಮಸಾಲಿಗಳ ಮೀಸಲಾತಿ ಹೋರಾಟ ಇಂದಿನಿಂದ ಇನ್ನಷ್ಟು ತೀವ್ರಗೊಳ್ಳಲಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ವಾಮೀಜಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. 

Reservation issue Panchamasali stir continues in Karnataka snr
Author
Bengaluru, First Published Mar 5, 2021, 7:39 AM IST

 ಬೆಂಗಳೂರು (ಮಾ.05):  ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟಗಾರರು ನೀಡಿದ್ದ ಮಾಚ್‌ರ್‍ 4ರ ಗಡುವು ಗುರುವಾರ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವನ್ನು ಶುಕ್ರವಾರದಿಂದ ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ.

ಗುರುವಾರ ರಾತ್ರಿ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ಅವರು, ‘ಮೀಸಲಾತಿ ಬೇಡಿಕೆ ಈಡೇರಿಕೆಗೆ ಮಾ.4ರ ಗಡುವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು. ಆದರೆ, ಸರ್ಕಾರದಿಂದ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ. ಹೀಗಾಗಿ ಮಾ.5ರಂದು ಧರಣಿ ಸತ್ಯಾಗ್ರಹವನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಘೋಷಿಸಿದಂತೆ ಉಪವಾಸ ಸತ್ಯಾಗ್ರಹ ನಡೆಸುವುದಿಲ್ಲ. ವಿಧಾನಸಭಾ ಕ್ಷೇತ್ರವಾರು ಧರಣಿ ಸತ್ಯಾಗ್ರಹ ನಡೆಸಿ ಹೋರಾಟ ತೀವ್ರಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.

ಮೀಸಲಾತಿ ಹೋರಾಟಕ್ಕೆ ಗೌಡ-ಲಿಂಗಾಯತರ ಎಂಟ್ರಿ ; 2A ಗಾಗಿ ಪಟ್ಟು .

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಬೇಕು. ಅವರು ಸ್ಪಷ್ಟನೆ ನೀಡುವವರೆಗೂ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು. ಅಂತೆಯೇ ಸದನದಲ್ಲಿ ಮೀಸಲಾತಿ ಕುರಿತು ಚರ್ಚಿಸಲು ಸ್ಪೀಕರ್‌ ಅವರು ಅವಕಾಶ ನೀಡಬೇಕು. ಸಮುದಾಯ ಸಚಿವರು, ಶಾಸಕರು ಪಕ್ಷಭೇದ ಮರೆತು ಮೀಸಲಾತಿ ಪರ ದನಿ ಎತ್ತಬೇಕು’ ಎಂದು ಸೂಚಿಸಿದರು.

ಸಮುದಾಯದ ನಾಯಕ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಮಾತನಾಡಿ, ‘ಕಳೆದ 12 ದಿನಗಳಿಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮುಂದುವರೆಸಲು ತೀರ್ಮಾನಿಸಿದ್ದೇವೆ. ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಮೀಸಲಾತಿ ಸಂಬಂಧ ಅಧ್ಯಯನ ನಡೆಸಲು ನಿವೃತ್ತ ನ್ಯಾಯಾಧೀಶರ ಸಮಿತಿ ರಚನೆ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಮುಂದಿನ ನಮ್ಮ ಹೋರಾಟ ಮಾಡು ಇಲ್ಲವೇ ಮಡಿ ಹೋರಾಟವಾಗಿರುತ್ತದೆ. ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಮೃತ್ಯುಂಜಯ ಸ್ವಾಮೀಜಿ ಅವರು ಕೂಡಲಸಂಗಮದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಿದ್ದರು. ಬಳಿಕ ಬೆಂಗಳೂರಿನಲ್ಲಿ ಸಮುದಾಯದ ಬೃಹತ್‌ ಸಮಾವೇಶ ಮಾಡಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದರು. ಆದರೆ, ಮೀಸಲಾತಿ ಬೇಡಿಕೆ ಈಡೇರಿಸುವ ಸಂಬಂಧ ಸರ್ಕಾರ ಯಾವುದೇ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರು ಕಳೆದ 12 ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

Follow Us:
Download App:
  • android
  • ios