Asianet Suvarna News Asianet Suvarna News

ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಕರಾವಳಿ ಸ್ವಾಮೀಜಿಗಳ ತೀವ್ರ ವಿರೋಧ

ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಬಾರದು ಎಂದು ಕರಾವಳಿಯ ಸ್ವಾಮೀಜಿಗಳ ಸಮಾವೇಶ ಒಕ್ಕೊರಲ ಆಗ್ರಹ ಮಾಡಿದೆ.

Repeal of Prohibition of Conversion Cow Slaughter Act Swamijis strongly oppose mangaluru rav
Author
First Published Jul 1, 2023, 4:30 AM IST

ಮಂಗಳೂರು (ಜು.1):  ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಬಾರದು ಎಂದು ಕರಾವಳಿಯ ಸ್ವಾಮೀಜಿಗಳ ಸಮಾವೇಶ ಒಕ್ಕೊರಲ ಆಗ್ರಹ ಮಾಡಿದೆ.

ಈ ಕುರಿತು ಠರಾವು ಮಂಡಿಸಿದ್ದು, ಒಂದು ವೇಳೆ ಇವುಗಳನ್ನು ಸರ್ಕಾರ ರದ್ದುಗೊಳಿಸಿದರೆ ಸಾಮಾಜದಲ್ಲಿ ಸಾಮರಸ್ಯಕ್ಕೆ ತೊಂದರೆ ಉಂಟಾಗಲಿದೆ. ಆಗ ಸರ್ಕಾರದ ವಿರುದ್ಧ ಸ್ವಾಮೀಜಿಗಳು, ಸಾಧುಸಂತರು ರಾಜ್ಯವ್ಯಾಪಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕರಾವಳಿಯ ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಬಾಲಂಭಟ್‌ ಹಾಲ್‌ನಲ್ಲಿ ಶುಕ್ರವಾರ ಸಮಾವೇಶ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ, ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಣಯ ಕೈಗೊಂಡಿದೆ. ಅಲ್ಲದೆ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ನ್ನು ರದ್ದುಗೊಳಿಸುವ ಪ್ರಸ್ತಾಪವನ್ನೂ ಮಾಡಿದ್ದು, ಇದನ್ನು ಸ್ವಾಮೀಜಿಗಳು ಸಾಮೂಹಿಕವಾಗಿ ವಿರೋಧಿಸುವುದಾಗಿ ಹೇಳಿದರು.

ವಿರೋಧಕ್ಕೆ ಡೋಂಟ್ ಕ್ಯಾರ್, ಮಂಗಳೂರು ವಿವಿ ಕಾಲೇಜಿಗೆ ಹಿಂದೂ ಮುಖಂಡ ಅತಿಥಿ!

ಮತಾಂತರ ನಿಷೇಧ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಅಧಿವೇಶನದಲ್ಲಿ ವಾಪಸ್‌ ಪಡೆಯಬಾರದು. ಎಷ್ಟೇ ವಯಸ್ಸಾಗಿದ್ದರೂ ಗೋವಂಶ ಹತ್ಯೆಗೆ ಅವಕಾಶ ನೀಡಬಾರದು. ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಮತ್ತು ಅದರ ನಿಯಮಾವಳಿಯನ್ನು ವಾಪಸ್‌ ಪಡೆಯಬಾರದು. ಅದನ್ನು ಕಟ್ಟುನಿಟ್ಟು ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಹಾಲಿ ಇರುವ ಗೋಶಾಲೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಅಲ್ಲದೆ ಖಾಸಗಿ ಗೋಶಾಲೆಗಳಿಗೂ ಅನುದಾನ ನೀಡಬೇಕು. ಗೋಮಾಳಗಳನ್ನು ದೇವಸ್ಥಾನ, ಮಠ, ಮಂದಿರಗಳಿಗೆ, ಖಾಸಗಿ ಗೋಶಾಲೆಗಳಿಗೆ ನೀಡಿ ಸಂರಕ್ಷಣೆ ಕೆಲಸ ಮಾಡಬೇಕು ಎಂದು ಆಗ್ರಹಿಸಲಾಗಿದೆ ಎಂದರು.

ಮತಾಂತರ ನಿಷೇಧ ಕಾಯ್ದೆಯನ್ನು ಕೂಡ ತೆಗೆದುಹಾಕುವ ನಿರ್ಣಯ ಹಿಂದೂ ವಿರೋಧಿ ನೀತಿಯಾಗಿದೆ. ಇದರಿಂದ ಎಲ್ಲ ಹಿಂದುಗಳ ಮನಸ್ಸಿಗೆ ನೋವಾಗಿದ್ದು, ಸರ್ಕಾರ ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಆಡಳಿತ ನಡೆಸಬೇಕು. ಇದಕ್ಕೆ ತೊಂದರೆಯಾದರೆ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಮೂಲಕ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

ಮತ್ತೆ ಕೋರ್ಟ್ ಮೊರೆ:

ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಸುಪ್ರೀಂ ಕೋರ್ಚ್‌ ತೀರ್ಪು ಕೂಡ ಹಿಂದು ಸಮಾಜದ ಪರವಾಗಿಯೇ ಇದೆ. ಹಾಗಿರುವಾಗ ಮತಾಂತರ ಹಾಗೂ ಗೋಹತ್ಯೆ ಕಾಯ್ದೆಯನ್ನು ಸರ್ಕಾರ ವಾಪಸ್‌ ಪಡೆಯಲು ಮುಂದಾದರೆ ಮತ್ತೆ ಕೋರ್ಚ್‌ ಮೆಟ್ಟಿಲೇರಬೇಕಾಗುತ್ತದೆ. ಅಲ್ಲದೆ ಈಗ ಚಾತುರ್ಮಾಸ್ಯ ಆರಂಭವಾಗುತ್ತಿರುವುದರಿಂದ ಸೆಪ್ಟೆಂಬರ್‌ನಲ್ಲಿ ಸ್ವಾಮೀಜಿಗಳ ನಿಯೋಗ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಿದೆ. ಪ್ರಸಕ್ತ ಹಿಂದೂ ಸಂಘಟನೆಗಳು ಇಲ್ಲಿನ ನಿರ್ಣಯವನ್ನು ಸರ್ಕಾರದ ಗಮನಕ್ಕೆ ತರಲಿದ್ದಾರೆ ಎಂದರು.

ಕಾನೂನು ಬಿಟ್ಟು ಕೆಲಸ ಬೇಡ:

ಮಂಗಳೂರಿನಲ್ಲಿ ಜಾರಿಗೆ ತಂದಿರುವ ಆ್ಯಂಟಿ ಕಮ್ಯೂನಲ್‌ ವಿಂಗ್‌ನ್ನು ಕಾನೂನಾತ್ಮಕವಾಗಿಯೇ ಬಳಸಿಕೊಳ್ಳಬೇಕು. ಅದು ಬಿಟ್ಟು ಹಿಂದಿನ ಕೇಸುಗಳಿಗೆ ಅನ್ವಯಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಯುವಕರನ್ನು ಠಾಣೆಗೆ ಕರೆಸಿ ಅವರನ್ನು ಬೆದರಿಸುವ ಕೆಲಸ ನಡೆಸಲಾಗುತ್ತಿದೆ ಎಂಬ ದೂರು ಬಂದಿದೆ. ಕೆಲವರನ್ನು ಗಡಿಪಾರು ಮಾಡುವ ಪ್ರಕ್ರಿಯೆಗೆ ಒಳಪಡಿಸುತ್ತಿರುವ ಮಾಹಿತಿಯೂ ಲಭ್ಯವಾಗಿದೆ. ಇದರಿಂದ ಸಮಾಜಕ್ಕೆ ಕೆಟ್ಟಸಂದೇಶ ರವಾನೆಯಾಗುತ್ತದೆÜ. ಈ ಬಗ್ಗೆ ಪೊಲೀಸ್‌ ಇಲಾಖೆ ನಿಗಾ ವಹಿಸಬೇಕು ಎಂದರು.

ಸಮಾನ ನಾಗರಿಕ ಸಂಹಿತೆ ನೀತಿ ಜಾರಿ ಕುರಿತಂತೆ ಎಲ್ಲ ಸ್ವಾಮೀಜಿಗಳು ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದೇವೆ. ಈ ಬಗ್ಗೆ ಎಲ್ಲ ಸ್ವಾಮೀಜಿಗಳು ಪ್ರತಿ ಮನೆಗೆ ತೆರಳಿ ಮನವರಿಕೆ ಮಾಡುವ ಪ್ರಯತ್ನ ನಡೆಸಲಿದ್ದಾರೆ ಎಂದರು. ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಸಾವಿಗೆ ಸಂಬಂಧಿಸಿ ಸಿಬಿಐ ಆರೋಪಿಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ಇದು ತೀವ್ರ ಖೇದಕರ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಸ್ವಾಮೀಜಿಗಳು ಈ ವಿಚಾರದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಗೋವಧೆಗೆ ಕಾನೂನಿನಲ್ಲಿ ಅವಕಾಶ ಬೇಡ: ಕರಾವಳಿ ಯತಿಗಳ ಆಗ್ರಹ

ಮಾಣಿಲ ಶ್ರೀಮಹಾಲಕ್ಷ್ಮಿ ಕ್ಷೇತ್ರದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರಿನ ಶ್ರೀಈಶ ವಿಠಲದಾಸ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು, ಚಿಲಿಂಬಿ ಓಂಶ್ರೀ ಮಠದ ಶ್ರೀವಿದ್ಯಾನಂದ ಸರಸ್ವತಿ ಸ್ವಾಮೀಜಿ, ಚಿಲಿಂಬಿ ಮಠದ ಮಾತಾಶ್ರೀ ಶಿವಜ್ಞಾನಮಯಿ ಸರಸ್ವತಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ನೇಹ ಮಾತಾಜಿ, ಕನ್ಯಾನ ಶ್ರೀಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀಮಹಾಬಲೇಶ್ವರ ಸ್ವಾಮೀಜಿ, ವಿಶ್ವಹಿಂದು ಪರಿಷತ್‌ ಮುಖಂಡ ಪ್ರೊ.ಎಂ.ಬಿ.ಪುರಾಣಿಕ್‌, ಆರ್‌ಎಸ್‌ಎಸ್‌ ಸಹಕಾರ್ಯವಾಹ ಪ್ರಕಾಶ್‌ ಪಿ.ಎಸ್‌. ಇದ್ದರು.

Follow Us:
Download App:
  • android
  • ios