ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಹೈಕೋರ್ಟ್ ವಿಚಾರಣೆಯಿಂದ ನಟ ದರ್ಶನ್ ಪರ ವಕೀಲರು ನಿವೃತ್ತಿ ಬಯಸಿದ್ದಾರೆ. ಇದೇ ವೇಳೆ, ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ಅನ್ನು ಸಾಕ್ಷ್ಯವಾಗಿ ಪರಿಗಣಿಸಲು ಒಪ್ಪಿಗೆ ಸೂಚಿಸಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ‌‌‌‌‌ ಕೊಲೆ‌‌ ಪ್ರಕರಣಕ್ಕೆ ಸಂಬಂಧಿಸಿ ಟ್ರಯಲ್ ಕೋರ್ಟ್‌ ನಲ್ಲಿ ವಿಚಾರಣೆ ಆರಂಭವಾಗಿದೆ. ಈ ನಡುವೆ ಇದೀಗ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಮುಖ ವಿಚಾರಣೆಯೊಂದರಲ್ಲಿ ನಟ ದರ್ಶನ್ ಪರ ವಕೀಲರು ದಿಢೀರ್‌ ನಿವೃತ್ತಿ ಬಯಸಿ ಕಾಲಾವಕಾಶ ಕೋರಿರುವ ಘಟನೆ ನಡೆದಿದ್ದು, ಕಾನೂನು ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಲೆಯಾದ ರೇಣುಕಾಸ್ವಾಮಿ ಅವರ ತಾಯಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಪಾಟೀಸವಾಲಿಗೆ (Cross-Examination) ಒಳಪಡಿಸಲು ಅವಕಾಶ ನೀಡಬೇಕು ಎಂದು ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ಕೈಗೆತ್ತಿಕೊಂಡಿದೆ.

ಪ್ರಾಸಿಕ್ಯೂಷನ್ ಸಲ್ಲಿಸಿರುವ ಈ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ, ನಟ ದರ್ಶನ್ ಪರವಾಗಿ ಈವರೆಗೆ ವಕಾಲತ್ತು ವಹಿಸಿದ್ದ ವಕೀಲ ಸುನೀಲ್ ಅವರು ನ್ಯಾಯಪೀಠದ ಮುಂದೆ ಅತ್ಯಂತ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೈಕೋರ್ಟ್ ನಲ್ಲಿರುವ ಈ ಕೇಸ್ ನಿಂದ ನಿವೃತ್ತಿ ಬಯಸಿದ್ದೇನೆ

ನಾನು ಕೆಳಹಂತದ ವಿಚಾರಣಾ ನ್ಯಾಯಾಲಯದಲ್ಲಿ (Trial Court) ನಟ ದರ್ಶನ್ ಪರವಾಗಿ ಹಾಜರಾಗುತ್ತಿರುವುದು ನಿಜ. ಆದರೆ, ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಈ ನಿರ್ದಿಷ್ಟ ಪ್ರಕರಣದ ವಾದ ಮಂಡನೆಯಿಂದ ನಾನು ನಿವೃತ್ತಿ ಬಯಸುತ್ತಿದ್ದೇನೆ. ಈ ಕೇಸ್‌ನಲ್ಲಿ ಹೈಕೋರ್ಟ್ ಮುಂಭಾಗ ವಾದ ಮಂಡಿಸಲು ನನಗೆ ದರ್ಶನ್ ಅವರಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದರ್ಶನ್ ಕಡೆಯಿಂದ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ, ಹೊಸದಾಗಿ ವಕೀಲರನ್ನು ನೇಮಿಸಿಕೊಳ್ಳಲು ಅಥವಾ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕಾಲಾವಕಾಶ ನೀಡಬೇಕೆಂದು ವಕೀಲ ಸುನೀಲ್ ಹೈಕೋರ್ಟ್‌ಗೆ ಮನವಿ ಮಾಡಿಕೊಂಡರು.

ದರ್ಶನ್ ಪರ ವಕೀಲರ ಈ ದಿಢೀರ್ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಜೂನ್ 23ರಂದು ದರ್ಶನ್ ಪರವಾಗಿ ಹೊಸ ವಕೀಲರು ಹಾಜರಾಗಲಿದ್ದಾರೆಯೇ ಅಥವಾ ಹಾಲಿ ವಕೀಲರೇ ಸೂಚನೆ ಪಡೆದು ವಾದ ಮುಂದುವರಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಪೆನ್‌ಡ್ರೈವ್‌ ಸಾಕ್ಷ್ಯಕ್ಕೆ ಸಿವಿಲ್‌ ಕೋರ್ಟ್‌ ಒಪ್ಪಿಗೆ

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ (ತನಿಖಾಧಿಕಾರಿಗಳು) ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈ ಅನ್ನು ಸಾಕ್ಷ್ಯವಾಗಿ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ಪರಿಗಣಿಸಿದೆ. ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ‌‌ ಪಿ.ಪ್ರಸನ್ನ ಕುಮಾರ್ ಅವರು, ಪೆನ್‌ಡ್ರೈವ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅದನ್ನು ನೀಡಿದ ಸುಮನಹಳ್ಳಿಯ ಬಳಿಯ ಅಪಾರ್ಟ್‌ಮೆಂಟ್‌ವೊಂದರ ಮಹಿಳಾ ನಿವಾಸಿ ದೃಢೀಕರಿಸಿದ ಪ್ರಮಾಣ ಪತ್ರ ಸಲ್ಲಿಸಿದರು. ಇದರಿಂದ‌ ಪೆನ್‌ಡ್ರೈವ್‌ ಅನ್ನು ಸಾಕ್ಷ್ಯಾಧಾರವಾಗಿ ನ್ಯಾಯಾಲಯ ಪರಿಗಣಿಸಿ, ಪ್ರಕರಣದ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿತು.

ದರ್ಶನ್ ಹಾಗೂ ಇತರೆ ಆರೋಪಿಗಳು‌ ಆಕ್ಷೇಪ

ಮಂಗಳವಾರ ನಡೆದಿದ್ದ ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಲ್ಲಿಸಿರುವ‌ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ (ಡಿಜಿಟಲ್‌‌ ಸಾಕ್ಷ್ಯ) ಅನ್ನು ಮುಚ್ಚಿದ ಲಕೋಟೆಯಿಂದ ಹೊರಗೆ ತೆಗೆದಿದ್ದ ನ್ಯಾಯಾಲಯವು ಪೆನ್ ಡ್ರೈವ್ ಅನ್ನು ಪ್ಲೇ ಮಾಡಲು ( ವೀಕ್ಷಿಸಲು) ಬಯಸಿತ್ತು. ಆಗ ದರ್ಶನ್ ಹಾಗೂ ಇತರೆ ಆರೋಪಿಗಳು‌ ಆಕ್ಷೇಪಿಸಿ, ಪೆನ್ ಡ್ರೈವ್ ಡಿಜಿಟಲ್ ಸಾಕ್ಷ್ಯವಾಗಿದೆ. ಅದನ್ನು‌ ಪರಿಗಣಿಸಬೇಕಾದರೆ ಸಾಕ್ಷ್ಯ ಕಾಯ್ದೆ ಸೆಕ್ಷನ್ 65 ಬಿ ಅನುಸಾರ ಡಿಜಿಟಲ್ ಸಾಕ್ಷ್ಯ ನೀಡಿದವರಿಂದ ದೃಢೀಕೃತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ. ಆದರೆ, ತನಿಖಾಧಿಕಾರಿಗಳು ಆ ‌ಪ್ರಮಾಣ ಪತ್ರವನ್ನು ಸಲ್ಲಿಸದ‌ ಕಾರಣ ಪೆನ್ ಡ್ರೈವ್ ಅನ್ನು ಸಾಕ್ಷ್ಯಧಾರವಾಗಿ ಗುರುತಿಸುವಂತಿಲ್ಲ ಎಂದು ಕೋರಿದ್ದರು. ಇದರಿಂದ‌ ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ಗುರತಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಬುಧವಾರ ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಬುಧವಾರ ಪರಿಗಣಿಸಿ ವಿಚಾರಣೆ ನಡೆಸಿತು.