ರೇಣುకాಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಳಿ ಹೆಚ್ಚಾಗಿದ್ದು, ಸೂಕ್ತ ಹೊದಿಕೆ ಇಲ್ಲದೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯದ ಮುಂದೆ ಅಳಲು. ಉತ್ತಮ ಹೊದಿಕೆ ಒದಗಿಸಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಅವರು ಜಡ್ಜ್‌ಗೆ ಮನವಿ ಮಾಡಿದರು.
ಬೆಂಗಳೂರು (ನ.20): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಳಿ ಹೆಚ್ಚಿದ್ದು, ಸೂಕ್ತ ಹೊದಿಕೆಯಿಲ್ಲದ ಕಾರಣ ರಾತ್ರಿ ವೇಳೆ ನಿದ್ದೆ ಮಾಡಲಾಗುತ್ತಿಲ್ಲ. ಚಿಕ್ಕ ಹೊದಿಕೆ ಸುತ್ತಿಕೊಂಡು ಜೈಲು ಕೋಣೆಯ ಮೂಲೆಯಲ್ಲಿ ಕೂರುತ್ತಿದ್ದೇನೆ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಬುಧವಾರ ಪ್ರಕರಣದ ವಿಚಾರಣೆ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ದರ್ಶನ್, ಪವಿತ್ರಾ ಗೌಡ ಸೇರಿ ಆರು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಯಿತು. ಉಳಿದಂತೆ ಜಾಮೀನು ಮೇಲಿರುವ ಎಲ್ಲ 11 ಮಂದಿ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು.
ಕೊಟ್ಟಿರುವ ಹೊದಿಕೆ ಚಳಿ ತಡೆಯುತ್ತಿಲ್ಲ:
ಆರೋಪಿಗಳ ಹಾಜರಾತಿಯನ್ನು ನ್ಯಾಯಮೂರ್ತಿ ಐ.ಪಿ. ನಾಯ್ಕ್ ಅವರು ದಾಖಲಿಸಿಕೊಂಡರು. ಈ ವೇಳೆ ಆರೋಪಿ ನಾಗರಾಜು ಜೈಲಿನ ಆವರಣದಲ್ಲಿ ತುಂಬಾ ಚಳಿಯಿದೆ. ಜೈಲಿನ ಅಧಿಕಾರಿಗಳು ನೀಡಿರುವ ಹೊದಿಕೆ ಚಳಿ ತಡೆಯುತ್ತಿಲ್ಲ. ಮನೆಯಿಂದ ತಂದ ಹೊದಿಕೆಯನ್ನೂ ಪಡೆಯಲು ಸಹ ಅನುಮತಿ ನೀಡುತ್ತಿಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ನಟ ದರ್ಶನ್ ಸಹ ಜೈಲಿನಲ್ಲಿ ತುಂಬಾ ಚಳಿಯಿದೆ. ಜೈಲು ಅಧಿಕಾರಿಗಳು ನೀಡಿರುವ ಹೊದಿಕೆಗಳು ಚಳಿಯನ್ನು ತಡೆಯುತ್ತಿಲ್ಲ. ಇದರಿಂದ ರಾತ್ರಿ ಮಲಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಚಿಕ್ಕ ಹೊದಿಕೆಯನ್ನೇ ಸುತ್ತಿಕೊಂಡು ಜೈಲು ಕೋಣೆ ಮೂಲೆಯಲ್ಲಿ ಕೂರುತ್ತಿದ್ದೇನೆ. ದಯವಿಟ್ಟು ಚಳಿ ತಡೆಯುವಂತಹ ಉತ್ತಮ ಹೊದಿಕೆಗಳನ್ನು ಕೊಡಲು ಜೈಲಿನ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದರು.
ಏನ್ರಿ? ರತ್ನ ಕಂಬಳಿ ಕೇಳುತ್ತಿದ್ದಾರೆಯೇ?: ಜಡ್ಜ್
ಈ ಮನವಿ ಕೇಳಿದ ನ್ಯಾಯಾಧೀಶರು, ಆರೋಪಿಗಳು ಕೇಳುತ್ತಿರುವುದು ಏನ್ರಿ? ರತ್ನ ಕಂಬಳಿ ಕೇಳುತ್ತಿದ್ದಾರೆಯೇ? ಜೈಲಿನ ಕೈಪಿಡಿಯಲ್ಲಿ ಅವಕಾಶವಿರುವ ಸೌಲಭ್ಯಗಳನ್ನು ಆರೋಪಿಗಳಿಗೆ ಕೊಡಿ. ಈ ವಿಚಾರದಲ್ಲಿ ನ್ಯಾಯಾಲಯ ಪದೇ ಪದೇ ಸೂಚನೆ ನೀಡಬೇಕಾ? ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಜೈಲು ಅಧಿಕಾರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ನಂತರ ಪ್ರಕರಣದ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಿದ ನ್ಯಾಯಾಧೀಶರು, ಅಂದು ಪ್ರಕರಣದ ಎಲ್ಲ ಆರೋಪಿಗಳು ವಿಚಾರಣೆಗೆ ಹಾಜರಿರಬೇಕು ಎಂದು ಸೂಚಿಸಿದರು.
ಈ ವೇಳೆ ಆದಾಯ ತೆರಿಗೆ ಇಲಾಖೆಯ ಪರ ವಕೀಲರು, ಪ್ರಕರಣ ಸಂಬಂಧ ಆರೋಪಿಗಳಿಂದ ವಶಕ್ಕೆ ಪಡೆದಿರುವ ಹಣವನ್ನು ತಮ್ಮ ಸುಪರ್ದಿಗೆ ನೀಡಬೇಕು ಎಂದು ಕೋರಿದರು. ತನಿಖಾಧಿಕಾರಿಗಳ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು, ಆದಾಯ ಇಲಾಖೆ ಅರ್ಜಿಗೆ ತಮ್ಮದೇನು ತಕರಾರು ಇಲ್ಲ ಎಂದರು.
ಅದಕ್ಕೆ ಆಕ್ಷೇಪಿಸಿದ ದರ್ಶನ್ ಪರ ವಕೀಲ ಸುನೀಲ್, ಆದಾಯ ಇಲಾಖೆಗೂ ಈ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ಹಣಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಆರೋಪಿಗಳಿಂದ ವಶಕ್ಕೆ ಪಡೆದಿರುವ ಹಣವನ್ನು ಆದಾಯ ಇಲಾಖೆ ಸುಪರ್ದಿಗೆ ನೀಡಬಾರದು ಎಂದು ಕೋರಿದರು.


