ವಿಧಾನಸೌಧದಿಂದ ಅಧಿಕಾರಿಗಳ ಕಚೇರಿ ಸ್ಥಳಾಂತರಿಸಿ: ಹೊರಟ್ಟಿ
*ವಿಧಾನಸೌಧ ಕೇವಲ ಶಾಸಕಾಂಗ ಕಚೇರಿಗಳಿಗೆ ಮೀಸಲು
*ಕಾರ್ಯಾಂಗ ಬಹುಮಹಡಿ ಕಟ್ಟಡಕ್ಕೆ ಸ್ಥಳಾಂತರಿಸಿ
* ಸ್ಥಳಾವಕಾಶದ ಕೊರತೆ: ಸಮಿತಿಗಳ ಚಟುವಟಿಕೆ ಕಷ್ಟ
ಬೆಂಗಳೂರು (ಜ. 16): ವಿಧಾನಸೌಧದಲ್ಲಿರುವ ಕಾರ್ಯಾಂಗ (Executive) ಕಚೇರಿಗಳನ್ನು ಪಕ್ಕದಲ್ಲಿರುವ ಬಹುಮಹಡಿ ಕಟ್ಟಡಕ್ಕೆ (ಎಂ.ಎಸ್. ಬಿಲ್ಡಿಂಗ್) ಸ್ಥಳಾಂತರ ಮಾಡಿ, ವಿಧಾನಸೌಧವನ್ನು ಶಾಸಕಾಂಗಕ್ಕೆ (Legislative) ಸಂಪೂರ್ಣವಾಗಿ ಮೀಸಲಿಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸೌಧ ಕಟ್ಟಿರುವುದೇ ಶಾಸಕಾಂಗಕ್ಕೆ, ಹೀಗಾಗಿ ಶಾಸಕಾಂಗ ಮತ್ತು ಕಾರ್ಯಾಂಗವನ್ನು ಪ್ರತ್ಯೇಕಿಸಬೇಕು. ಕಾರ್ಯಾಂಗವನ್ನು ಎಂ.ಎಸ್.ಬಿಲ್ಡಿಂಗ್‌ಗೆ ಸ್ಥಳಾಂತರ ಮಾಡಬೇಕು ಎಂದು ಹೇಳಿದರು.
ಹಿಮಾಚಲ ಪ್ರದೇಶ ರಾಜ್ಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಪ್ರತ್ಯೇಕವಾಗಿವೆ, ಆದರೆ ವಿಧಾನಸೌಧದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಒಟ್ಟಿಗೆ ಇವೆ. ಇವೆರಡನ್ನೂ ವಿಕೇಂದ್ರೀಕರಣ ಮಾಡಬೇಕು. ಸ್ಥಳಾವಕಾಶದ ಕೊರತೆಯಿಂದ ಸಮಿತಿಗಳ ಚಟುವಟಿಕೆ ನಡೆಸಲು ಕಷ್ಟವಾಗುತ್ತಿದೆ. ವಿಧಾನ ಪರಿಷತ್ (Council) ಸಚಿವಾಲಯಕ್ಕೆ ಕನಿಷ್ಠ ಐದು ಕೊಠಡಿಗಳು ಬೇಕಾಗಿವೆ. ಈ ಸಂಬಂಧ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಪತ್ರ ಬರೆಯಲಾಗಿದೆ. ಕೊಠಡಿ ಕೊಡಿ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನಾವು ಕೇಳಬೇಕಾಗಿದೆ ಎಂದರು.
ಇದನ್ನೂ ಓದಿ: Private Aided Schools: ಅನುದಾನಿತ ಖಾಸಗಿ ಶಾಲೆ ಹುದ್ದೆ ಭರ್ತಿಗೆ ಹೊರಟ್ಟಿ ಸೂಚನೆ!
ಅಸಮಾಧಾನ: ಸಣ್ಣ ಕೊಠಡಿಯಲ್ಲಿ 30 ಸಿಬ್ಬಂದಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇಂತಹ ಕೋವಿಡ್ ಸಂದರ್ಭದಲ್ಲಿ ಈ ರೀತಿ ಕೆಲಸ ಮಾಡುವುದು ಸರಿಯಾಗುವುದಿಲ್ಲ, ವಿಧಾನಸಭೆಯ ಸಭಾಧ್ಯಕ್ಷರು ಸಹ ಕೊಠಡಿಗಳನ್ನು ಕೇಳಿದ್ದಾರೆ. ವಿಧಾನಸೌಧ ಸಭಾಧ್ಯಕ್ಷರು ಮತ್ತು ಸಭಾಪತಿಗಳ ಅಧೀನದಲ್ಲಿರುತ್ತದೆ. ನಾವು ಆದೇಶ ಮಾಡಬೇಕು. ಆದರೆ, ನಾವೇ ಮನವಿ ಮಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
6ನೇ ತರಗತಿಯಿಂದ ಶಾಲೆ ತೆರೆಯಿರಿ: ಮೂರನೇ ಅಲೆಯಲ್ಲಿ ಕೋವಿಡ್ ಸೋಂಕು (Covid Third Wave) ಹರಡುವುದು ಜಾಸ್ತಿಯಾದರೂ ಗಂಭೀರತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ ಮಾತ್ರ ಶಾಲೆಗಳನ್ನು ಬಂದ್ ಮಾಡಿ, 6ನೇ ತರಗತಿಯಿಂದ ಶಾಲೆಗಳನ್ನು ಮಾರ್ಗಸೂಚಿಗಳ ಪಾಲನೆಯೊಂದಿಗೆ ನಡೆಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಆಗ್ರಹಿಸಿದ್ದಾರೆ.
ಇದನ್ನೂ ಓದಿ: Karnataka Cabinet Expansion: ಮಹೇಶ್ ಕುಮಟಳ್ಳಿಗೆ ಶೀಘ್ರದಲ್ಲೇ ಒಳಿತಾಗಲಿದೆ: ಜಾರಕಿಹೊಳಿ!
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳನ್ನು ಬಂದ್ ಮಾಡಿದರೆ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರಲಿದೆ. ಕೋವಿಡ್ ಮೂರನೇ ಅಲೆ ಗಂಭೀರವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಬಿಡುವು ನೀಡುವುದು ಬೇಡ, ಸಾಮಾಜಿಕ ಅಂತರ, ನಿಯಮಗಳನ್ನು ಪಾಲಿಸಿ ಶಾಲೆ ನಡೆಸುವುದು ಉತ್ತಮ. ಪೋಷಕರ ಆತಂಕವನ್ನು ದೂರ ಮಾಡಿ ಶಾಲೆಗಳನ್ನು ನಡೆಸಬೇಕು.
ಶಾಲೆಗಳ ವಿಚಾರದಲ್ಲಿ ಸರ್ಕಾರ ಸ್ಪಷ್ಟನಿರ್ಧಾರ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡುವುದು ಸರಿಯಲ್ಲ. ಒಂದೊಂದು ಜಿಲ್ಲೆಗೆ ಒಂದೊಂದು ರೀತಿ ಬೇಡ. ತೆಗೆದುಕೊಂಡರೆ ಒಂದೇ ತೀರ್ಮಾನ ಇರಬೇಕು. ‘ವಿದ್ಯಾಗಮನ’ ಕಾರ್ಯಕ್ರಮದಿಂದ ಮಕ್ಕಳಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಗುಡಿಯಲ್ಲಿ, ಮರದ ಕೆಳಗೆ ಪಾಠ ಮಾಡುವುದು ಸರಿಯಲ್ಲ ಎಂದು ಹೇಳಿದರು̤
ಪ್ರತ್ಯೇಕ ರಾಜ್ಯ ಬೇಡ, ಸಮಗ್ರ ಕರ್ನಾಟಕವೇ ಇರಲಿ: ಇತ್ತೀಚಿನ ವರ್ಷಗಳಲ್ಲಿ ಆಗಾಗ ಉತ್ತರ ಕರ್ನಾಟಕ (North Karnataka) ಪ್ರತ್ಯೇಕ ರಾಜ್ಯದ ಧ್ವನಿ ಅಲ್ಲಲ್ಲಿ ಕೇಳಿ ಬರುತ್ತಿವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ (Separate State) ಧ್ವನಿ ಎತ್ತುವುದು ಸರಿಯಲ್ಲ. ನಮಗೆ ಅದು ಬೇಡ. ಸಮಗ್ರ ಕರ್ನಾಟಕ ಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.