Karnataka Cabinet Expansion: ಮಹೇಶ್ ಕುಮಟಳ್ಳಿಗೆ ಶೀಘ್ರದಲ್ಲೇ ಒಳಿತಾಗಲಿದೆ: ಜಾರಕಿಹೊಳಿ!
*ಆರೆಸ್ಸೆಸ್ ಮುಖಂಡರ ಭೇಟಿ ನಂತರ ಹೇಳಿಕೆ
*ಕುಮಟಳ್ಳಿಗೆ ಶೀಘ್ರದಲ್ಲೇಸಚಿವ ಸ್ಥಾನ?
*ಅರವಿಂದರಾವ್ ದೇಶಪಾಂಡೆ ಮನೆಗೆ ಜಾರಕಿಹೊಳಿ
ಅಥಣಿ (ಜ. 16): ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಶೀಘ್ರದಲ್ಲೇ ಒಳ್ಳೆಯದಾಗಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ. ಈ ಮೂಲಕ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಸಿಗುವ ಸುಳಿವು ನೀಡಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯ (Cabinet Expansion) ಸುದ್ದಿ ಹರಿದಾಡುತ್ತಿರುವ ನಡುವೆಯೇ ಅಥಣಿಯಲ್ಲಿರುವ (Athani) ಆರ್‌ಎಸ್‌ಎಸ್‌ನ ಉತ್ತರ ಪ್ರಾಂತದ ಪ್ರಮುಖ್ ಅರವಿಂದರಾವ್ ದೇಶಪಾಂಡೆ ಅವರ ಮನೆಗೆ ಶನಿವಾರ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು.
ಇತ್ತೀಚೆಗೆ ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಬೈಠಕ್ ನಡೆದಿತ್ತು. ಅಲ್ಲಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ (ಅರವಿಂದರಾವ್) ಮಾರ್ಗದರ್ಶನ ಪಡೆಯಲು ಬಂದಿದ್ದೆ ಎಂದು ಹೇಳಿದರು.ಇದೇ ವೇಳೆ, ನಾನು ಯಾವುದೇ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದ ಅವರು, ಕೆಲ ವಿಚಾರಗಳು ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಕುಮಟಳ್ಳಿ ಅವರಿಗೆ ಶೀಘ್ರದಲ್ಲೇ ಒಳ್ಳೆಯದಾಗಲಿದೆ ಎಂದಷ್ಟೇ ಹೇಳಿದರು.
ಇದನ್ನೂ ಓದಿ: ಬಂಡಾಯದ ಪ್ರಶ್ನೆಯೇ ಇಲ್ಲ, ರಾಜಕೀಯ ವೈರಾಗ್ಯದ ಮಾತನ್ನೂ ನಾನು ಆಡಿಲ್ಲ: Renukacharya
1 ಗಂಟೆಗೂ ಹೆಚ್ಚು ಕಾಲ ಚರ್ಚೆ: ಅಥಣಿಯಲ್ಲಿರುವ ಅರವಿಂದರಾವ್ ಮನೆಯಲ್ಲಿ ರಮೇಶ ಜಾರಕಿಹೊಳಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ಸಮಯದಲ್ಲಿ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಹೈಕಮಾಂಡ್‌ಗೆ ತಿಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಜನಸಂಪನ್ಮೂಲ ಖಾತೆಯನ್ನೇ ಮತ್ತೆ ನೀಡಬೇಕು ಎಂಬ ಬೇಡಿಕೆ ಹೊತ್ತ ಮನವಿಯನ್ನೂ ಅರವಿಂದರಾವ್ ಅವರ ಮುಂದಿಟ್ಟಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ನನಗೆ ಸಚಿವ ಸ್ಥಾನ ನೀಡುತ್ತಾರೆಂದು ಎಲ್ಲೆಡೆ ಚರ್ಚೆ ಆಗುತ್ತಿದೆ: ಮುಂದಿನ ಸಂಪುಟ ಪುನಾರಚನೆ ವೇಳೆ ನಾನು ಸಚಿವ ಸ್ಧಾನ ಕೇಳಿಲ್ಲ. ಆದರೆ, ಸಚಿವ ಸ್ಥಾನ ನೀಡುತ್ತಾರೆ ಎಂದು ಎಲ್ಲೆಡೆ ಚರ್ಚೆ ಆಗುತ್ತಿದೆ. ಒಂದು ವೇಳೆ ಮುಖ್ಯಮಂತ್ರಿಗಳು ಹಾಗೂ ಪಕ್ಷ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ. ನಾನು ಯಾರ ಬಳಿಯೂ ಹೋಗಿ ಸಚಿವ ಸ್ಥಾನ ಕೊಡಿ ಅಂತಾ ಕೇಳಿಲ್ಲ, ಆದರೆ ಈಗಾಗಲೇ ನನಗೆ ಸಚಿವ ಸ್ಥಾನ ಕೊಡುತ್ತಾರೆಂದು ಎಲ್ಲೆಡೆ ಚರ್ಚೆ ಆಗ್ತಿದೆ. ಸಚಿವ ಸ್ಥಾನ ಕೊಟ್ಟರೆ ನನಗೆ ಸಂತೋಷ ಆಗುತ್ತದೆ. ಈ ವಿಚಾರದಲ್ಲಿ ನಾನು ತೆರೆದ ಪುಸ್ತಕವಿದ್ದಂತೆ, ಯಾವುದನ್ನೂಮರೆಮಾಚುವ ವ್ಯಕ್ತಿಯಲ್ಲ. ಗಂಡಾಗುಂಡಿ ರಾಜಕಾರಣಿಯಲ್ಲ, ಕ್ಷೇತ್ರದ ಅಭಿವೃದ್ಧಿ ಜೊತೆಗೆ ರಾಜ್ಯದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ಹಬ್ಬದಂದು ರಾಜ್ಯದ ಜನತೆಗೆ ಸಂತಸದ ಸುದ್ದಿ ನೀಡಿದ ಪ್ರಧಾನಿ: ಮೋದಿಗೆ ಸಿಎಂ ಕೃತಜ್ಞತೆ
ಹೊಸಬರಿಗೆ ಮಂತ್ರಿಗಿರ ನೀಡಿ: ಯಾವುದೇ ಕಾರಣಕ್ಕೂ ಬಂಡಾಯದ ಪ್ರಶ್ನೆಯೇ ಇಲ್ಲ. ಸಚಿವ ಸ್ಥಾನದ ವಿಚಾರವಾಗಿ ನಾನು ರಾಜಕೀಯ ವೈರಾಗ್ಯದ ಮಾತುಗಳನ್ನೂ ಆಡುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (M.P.Renukacharya) ಹೇಳಿದರು.ನಗರದ ಡಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರೆಸಾರ್ಟ್ ರಾಜಕೀಯ ಮಾಡಿ, ತಪ್ಪು ಮಾಡಿದ್ದೇನೆ. ಅಂತಹ ತಪ್ಪನ್ನು ಮುಂದೆ ಮತ್ತೆ ಎಂದಿಗೂ ಮಾಡುವುದೂ ಇಲ್ಲ. ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡುವಂತೆ ಕೇಳಿದ್ದೇನೆ ಎಂದರು. ಮೂರು ಅವಧಿಯಲ್ಲಿ ಸಚಿವರಾದವರೇ ಮತ್ತೆ ಮತ್ತೆ ಸಚಿವರಾಗಿದ್ದಾರೆ. ಅಂತಹವರು ರಾಜೀನಾಮೆ ಕೊಟ್ಟು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ. ಸಂಪುಟದಲ್ಲಿ ಹೊಸ ಮುಖಗಳಿಗೆ, ಹೊಸಬರಿಗೆ ಅವಕಾಶ ಮಾಡಿಕೊಡಲಿ. ರಾಜ್ಯದ ಅಭಿವೃದ್ಧಿ, ಕ್ಷೇತ್ರಗಳ ಅಭಿವೃದ್ಧಿಗೆ ಈ ಮೂಲಕ ಸಹಕರಿಸಲಿ ಎಂದು ಅವರು ಹೇಳಿದರು.