ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ 1,635 ಪಂಪ್‌ಸೆಟ್‌ಗಳ ಮಾರ್ಗದಲ್ಲಿ 1,29,067 ರೈತರ ಮನೆಗಳು ಬರುತ್ತವೆ. ಈ ಭಾಗದಲ್ಲಿ ಎಲ್ಲಾ ತೋಟದ ಮನೆಗಳಿಗೂ ನಿಯಮಿತ ವಿದ್ಯುತ್‌ ಒದಗಿಸಲು ಸಿಂಗಲ್‌ ಫೇಸ್‌ ಟ್ರಾನ್ಸ್‌ಫಾರ್ಮರ್‌ ಅಳವಡಿಸಿ ವಿದ್ಯುತ್‌ ಸಂಪರ್ಕ ನೀಡಲು 712 ಕೋಟಿ ರು. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.- ಸಚಿವ ಸುನೀಲ್ ಕುಮಾರ್

ವಿಧಾನಸಭೆ (ಸೆ.16) : ರಾಜ್ಯದಲ್ಲಿನ ಹೆಸ್ಕಾಂ (ಹುಬ್ಬಳ್ಳಿ) ಹಾಗೂ ಜೆಸ್ಕಾಂ (ಕಲಬುರಗಿ) ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ 1,29,067 ರೈತರ ಮನೆಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ನಿಯಮಿತ ವಿದ್ಯುತ್‌ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನಿಲ್‌ಕುಮಾರ್‌ ಭರವಸೆ ನೀಡಿದ್ದಾರೆ.

ದಕ್ಷಿಣದಲ್ಲಿ ಭಾರತ್ ಜೋಡೋ ಉತ್ತರದಲ್ಲಿ ಕಾಂಗ್ರೆಸ್ ಚೋಡೋ: ಸಚಿವ ಸುನೀಲ್ ಕುಮಾರ್ ವ್ಯಂಗ್ಯ

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಕೌಜಲಗಿ ಮಹಾಂತೇಶ್‌ ಶಿವಾನಂದ್‌, ಕಳೆದು ಒಂದು ತಿಂಗಳಿಂದ ಜಮೀನುಗಳಲ್ಲಿ ವಾಸಿಸುತ್ತಿರುವ ರೈತರಿಗೆ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವಂತೆ 6-7 ಗಂಟೆ ಮಾತ್ರ ವಿದ್ಯುತ್‌ ಪೂರೈಸುತ್ತಿದ್ದು, ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಜತೆಗೆ ಅಗತ್ಯವಿಲ್ಲದೆ ವೇಳೆಯಲ್ಲಿ ವಿದ್ಯುತ್‌ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಓದಲು ಸಮಸ್ಯೆಯಾಗುತ್ತಿದ್ದರೆ, ಹೊಲದ ಬಳಿ ವಿಷಜಂತುಗಳ ಕಾಟದಿಂದ ರಕ್ಷಣೆ ಇಲ್ಲದಂತಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಲಕ್ಷ್ಮೇ ಹೆಬ್ಬಾಳ್ಕರ್‌, ಅಜಯ್‌ ಸಿಂಗ್‌ ಹಾಗೂ ಬಿಜೆಪಿಯ ಹಲವು ಸದಸ್ಯರೂ ದನಿಗೂಡಿಸಿ ಸಮಸ್ಯೆಯ ಗಂಭೀರತೆ ಬಗ್ಗೆ ಸಚಿವರ ಗಮನಕ್ಕೆ ತಂದರು.

ಪ್ರಶ್ನೆಗೆ ಉತ್ತರಿಸಿದ ಸುನಿಲ್‌ಕುಮಾರ್‌, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ 1,635 ಪಂಪ್‌ಸೆಟ್‌ಗಳ ಮಾರ್ಗದಲ್ಲಿ 1,29,067 ರೈತರ ಮನೆಗಳು ಬರುತ್ತವೆ. ಈ ಭಾಗದಲ್ಲಿ ಎಲ್ಲಾ ತೋಟದ ಮನೆಗಳಿಗೂ ನಿಯಮಿತ ವಿದ್ಯುತ್‌ ಒದಗಿಸಲು ಸಿಂಗಲ್‌ ಫೇಸ್‌ ಟ್ರಾನ್ಸ್‌ಫಾರ್ಮರ್‌ ಅಳವಡಿಸಿ ವಿದ್ಯುತ್‌ ಸಂಪರ್ಕ ನೀಡಲು 712 ಕೋಟಿ ರು. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ ಬೈಲಹೊಂಗಲ, ಬಾಗಲಕೋಟೆ, ಜಮಖಂಡಿ, ಮುಧೋಳ ಮತ್ತು ಬಿಜಾಪುರದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ಬಳಿಕ ಎಲ್ಲಾ ಕಡೆ ವಿಸ್ತರಿಸಲಾಗುವುದು ಎಂದರು.

ಸಿದ್ದರಾಮಯ್ಯ ರೈತರ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸಿದ್ದರು: ಸಚಿವ ಸುನೀಲ್ ಕುಮಾರ್ ಆರೋಪ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಸಿಂಗಲ್‌ ಫೇಸ್‌ ಟ್ರಾನ್ಸ್‌ಫಾರ್ಮರ್‌ ಅಳವಡಿಸುವವರೆಗೂ ಪಂಪ್‌ಸೆಟ್‌ಗಳಿಗೆ ಒದಗಿಸುವಂತೆ ಕೇವಲ 6-7 ಗಂಟೆ ವಿದ್ಯುತ್‌ ಒದಗಿಸುತ್ತಿದ್ದೀರಿ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದ್ದು, ಕೂಡಲೇ ಅವರಿಗೆ ಹಿಂದಿನ ರೀತಿಯಲ್ಲೇ ವಿದ್ಯುತ್‌ ಪೂರೈಸಿ ಎಂದು ಒತ್ತಾಯಿಸಿದರು. ಈ ವೇಳೆ ಜಮೀನುಗಳಲ್ಲಿ ವಾಸಿಸುವ ರೈತರಿಗೆ ಕೂಡಲೇ ನಿಯಮಿತ ವಿದ್ಯುತ್‌ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.