Asianet Suvarna News Asianet Suvarna News

ಸಿದ್ದರಾಮಯ್ಯ ರೈತರ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸಿದ್ದರು: ಸಚಿವ ಸುನೀಲ್ ಕುಮಾರ್ ಆರೋಪ

ತಾವು ಅಧಿಕಾರದಲ್ಲಿದ್ದಾಗ  ಸಿದ್ದರಾಮಯ್ಯ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸಿದ್ದರು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

Siddaramaiah planned to install meters in farmers' pump sets allegation from minister Sunil Kumar   gow
Author
First Published Sep 6, 2022, 7:56 PM IST

ವರದಿ: ರವಿ ಶಿವರಾಮ್, ಏಷ್ಯಾ ನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಸೆ.6): ತಾವು ಅಧಿಕಾರದಲ್ಲಿದ್ದಾಗ ವಿದ್ಯುತ್ ಸರಬರಾಜು ಕಂಪನಿಗಳಿಗೆ ನ್ಯಾಯಯುತವಾಗಿ ನೀಡಬೇಕಿದ್ದ ಸಬ್ಸಿಡಿ ಹಣವನ್ನು ಸಕಾಲದಲ್ಲಿ ನೀಡದೇ ನಷ್ಟಕ್ಕೆ ದೂಡಿದ್ದ ಸಿದ್ದರಾಮಯ್ಯ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸಿದ್ದರು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದ ಸುನೀಲ್ ಕುಮಾರ್, ಸಿದ್ದರಾಮಯ್ಯ ಅವಧಿಯಲ್ಲಿ ಒಂದು ಲಕ್ಷ ಕೋಟಿ ರೂ. ರಾಜ್ಯದ ಜನತೆಯ ಮೇಲೆ  ಸಾಲದ ಹೊರೆ ಹೊರಿಸಿದ್ದರು.  ಇಂಧನ ಇಲಾಖೆಯ ಮೇಲೂ 5.5 ಸಾವಿರ ಕೋಟಿ ರೂ. ಸಾಲದ ಬರೆ ಹಾಕಿದ್ದರು. 2013 ರಿಂದ 2016 ರ ಅವಧಿಯಲ್ಲಿ  3479 ಕೋಟಿ ರೂ. ಸಬ್ಸಿಡಿ ಬಾಕಿ ಸಿದ್ದರಾಮಯ್ಯ ಕಾಲದಲ್ಲಿ ಸೃಷ್ಟಿಯಾಗಿತ್ತು ಎಂದು ಇಂಧನ ಸಚಿವರು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.  ಗ್ರಾಮೀಣಾಭಿವೃದ್ಧಿ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಂದ 6000 ಕೋಟಿ ರೂ.ಗೂ ಮೇಲ್ಪಟ್ಟು ಬಾಕಿ ಉಳಿಸಿಕೊಂಡು, ಎಸ್ಕಾಂಗಳು ನಷ್ಟದಲ್ಲಿವೆ ಎಂಬ ಕೃತಕ ಸನ್ನಿವೇಶವನ್ನು ಸೃಷ್ಟಿಸಿ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಸಿದ್ದರಾಮಯ್ಯ ಹುನ್ನಾರ ನಡೆಸಿದ್ದರು ಎಂದು ಆರೋಪಿಸಿದ್ದಾರೆ. 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದು ಶತಸಿದ್ಧ.  ಆದರೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು. ನಾನು ಅಧಿಕಾರ ವಹಿಸಿಕೊಂಡಾಗ ಎಲ್ಲಾ ಹೆಸ್ಕಾಂ ನಷ್ಟದಲ್ಲಿದ್ದವು. ಈಗಿನ ಸಿಎಂ ಬೊಮ್ಮಾಯಿ 8.5 ಸಾವಿರ ಕೋಟಿ ಅನುದಾನ ನೀಡಿದ್ದರ ಪರಿಣಾಮ ಕೊರತೆಯನ್ನು ಸರಿದೂಗಿಸಿದ್ದೇವೆ. ಆದರೆ ಸಿದ್ದರಾಮಯ್ಯ ಕಾಲದಲ್ಲಿ ಇಲಾಖೆಯನ್ನು ಬಡ ಕೂಸಾಗಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಮೃತ ಜ್ಯೋತಿ ಬಗ್ಗೆ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಯೋಜನೆ ವಾಪಸ್ ಪಡೆಯುವ ಯಾವ ಯೋಚನೆಯೂ ಇಲ್ಲ. ಇದು ನಮ್ಮ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಆದರೆ  ನಿಯಮಾವಳಿ ಕಠಿಣವಾಗಿದ್ದರಿಂದ ಹೊಸ ನಿಯಮಾವಳಿ ರೂಪಿಸಿ, ಹಳೆಯ ನಿಯಮಾವಳಿ ವಾಪಸ್ ಪಡೆಯಲು ತಿಳಿಸಿದ್ದೆ ಎಂದು ಸುನೀಲ್ ಕುಮಾರ್ ತಿಳಿಸಿದರು.  39 ಲಕ್ಷ ಫಲಾನುಭವಿಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. 4 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. 15 ಸಾವಿರ ಮಂದಿಗೆ ಡಿಬಿಟಿ ಮೂಲಕ ಹಣ ಪಾವತಿಸಿದ್ದೇವೆ. 

ಯೋಜನೆ ಮತ್ತು ಸುತ್ತೋಲೆ ವ್ಯತ್ಯಾಸ ತಿಳಿಯದೇ ಸಿದ್ದರಾಮಯ್ಯ ದಾರಿ ತಪ್ಪಿಸುದ್ದಾರೆ. ಸಿದ್ದರಾಮಯ್ಯ ಟ್ವೀಟ್ ಮಾಡುವ ಮುನ್ನ ಸುತ್ತೋಲೆ ಓದಬೇಕಿತ್ತು ಅಥವಾ ಓದಿಸಿಕೊಳ್ಳಬೇಕಿತ್ತು. ಅದರೆಡನ್ನು ಮಾಡದೇ ಸಿದ್ದರಾಮಯ್ಯ ಟ್ವೀಟ್ ಮಾಡಿ ತಪ್ಪು ಸಂದೇಶ ನೀಡಿದ್ದಾರೆ ಎಂದು ಹರಿಹಾಯ್ದರು. ಇದೇ ವೇಳೆ ಸ್ಪಷ್ಟನೆ ‌ನೀಡಿದ ಅವರು ಇನ್ನೆರಡು ದಿನದಲ್ಲಿ ಹೊಸ ಸುತ್ತೋಲೆ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

Udupi; ಮತ್ತಷ್ಟು ಪ್ರತಿಭಟನೆ ಎದುರಿಸಲು ರೆಡಿಯಾಗಿ, ಸಿದ್ದುಗೆ ಸಚಿವ ಸುನಿಲ್ ಕುಮಾರ್ ಚಾಟಿ

ಡಿಕೆ ಶಿವಕುಮಾರ್ ಸವಾಲು ಸ್ವೀಕರಿಸಿದ್ದೇನೆ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕೇಳಿ ಬಂದಿದ್ದ ಪ್ರಮುಖ ಭ್ರಷ್ಟಾಚಾರ ಆರೋಪವನ್ನು ತನಿಖೆಗೆ ಒಳಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. 2014-15 ರ ಅವಧಿಯಲ್ಲಿ ನಡೆದಿರುವ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಅದೇ ರೀತಿ ಡಿಕೆ ಶಿವಕುಮಾರ್ ಇಂಧನ ಸಚಿವನಾಗಿದ್ದಾಗ ಹೆಚ್ಚಿನ ದರಕ್ಕೆ ವಿದ್ಯುತ್ ಖರೀದಿ ಮಾಡಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಅಧಿವೇಶನದ ಬಳಿಕ ಅಧಿಕಾರಿಗಳ ಸಭೆ ಮಾಡಿ ಮುಂದೇನು ಮಾಡಬೇಕು ಎನ್ನುವ ಕುರಿತು ತಿಳಿಸೋದಾಗಿ ಸುನೀಲ್ ಕುಮಾರ್ ತಿಳಿಸಿದರು.

ಎಸ್ಸಿ,ಎಸ್ಟಿಗೆ ಫ್ರೀ ಕರೆಂಟ್ ಗೊಂದಲ: ಸಿದ್ದು ಆರೋಪಕ್ಕೆ ಸುನಿಲ್ ಕುಮಾರ್ ಗುದ್ದು

ಈ ಬಗ್ಗೆ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, ನಾನು ಯಾವುದಕ್ಕೂ ಹೆದರೊ ಮಗ ಅಲ್ಲ , ಸರ್ಕಾರ ಆದಷ್ಟು ಬೇಗ ತನಿಖೆ ಮಾಡಲಿ ಎಂದು ಸವಾಲು ಹಾಕಿದ್ರು. ಡಿಕೆಶಿ ಚಾಲೆಂಜ್ ನ್ನು ನಾನು ಸ್ವೀಕಾರ ಮಾಡಿರೋದಾಗಿ ಸುನೀಲ್ ಕುಮಾರ್ ಮರು ಸವಾಲು ಎಸೆದಿದ್ದಾರೆ. ಮುಂದಿನವಾರ ಆರಂಭ ಆಗಲಿರುವ ಅಧಿವೇಶನ ವೇಳೆಯಲ್ಲಿ ಈ ಎಲ್ಲಾ ಪ್ರಕರಣಗಳು ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ವೇದಿಕೆ ಆಗೋದು ನಿಶ್ಚಿತವಾಗಿದೆ.

Follow Us:
Download App:
  • android
  • ios