Asianet Suvarna News Asianet Suvarna News

ಮಂಗಳೂರು: ಕಸ್ಟಮ್ಸ್ ವಶಕ್ಕೆ ಪಡೆದ ರಕ್ತಚಂದನ 28 ಕೋಟಿಗೆ ಹರಾಜು!

ಮಂಗಳೂರಿನ ಪಣಂಬೂರು ಬಂದರಿನ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಆನ್‌ಲೈನ್‌ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರೂ.ಗೆ ಬಿಡ್ ನಲ್ಲಿ ಖರೀದಿಸಿದೆ.

Red Sandalwood seized by customs auctioned for 28 crores at mangaluru rav
Author
First Published Sep 7, 2023, 10:05 AM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ‌ಮಂಗಳೂರು

ಮಂಗಳೂರು (ಸೆ.7): ಮಂಗಳೂರಿನ ಪಣಂಬೂರು ಬಂದರಿನ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಆನ್‌ಲೈನ್‌ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರೂ.ಗೆ ಬಿಡ್ ನಲ್ಲಿ ಖರೀದಿಸಿದೆ.

2008ರಿಂದ 2023ರವರೆಗೆ 4 ಪ್ರಕರಣಗಳಲ್ಲಿ ಮಂಗಳೂರಿನ ಕಸ್ಟಮ್ಸ್ ವಶಪಡಿಸಿಕೊಂಡಿದ್ದರು. ಇದರಲ್ಲಿ ಸುಮಾರು 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿತ್ತು‌. ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದ  ರಕ್ತಚಂದನ ಇದಾಗಿದ್ದು, ಸುಪ್ರೀಂಕೋರ್ಟ್‌ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆ ಆನ್‌ಲೈನ್ ಮೂಲಕ ಹರಾಜು ಹಾಕಿದೆ‌.

ಬೆಂಗ್ಳೂರಲ್ಲಿ ಮಾರಾಟ ಮಾಡಲು ತಮಿಳುನಾಡಿನಲ್ಲಿ ಬಚ್ಚಿಟ್ಟಿದ್ದ ರಕ್ತಚಂದನ ಜಪ್ತಿ

 ಒಟ್ಟು 2,094 ದಿಮ್ಮಿಗಳನ್ನು ಒಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನ ಹರಾಜಿನಲ್ಲಿ ಖರೀದಿಯಾಗಿದೆ. ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್‌ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಒಟ್ಟು 18 ಲಾಟ್‌ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿ 10 ಲಾಟ್‌ಗೆ 14.5 ಕೋಟಿ ರೂ. ಬಿಡ್ ಹಾಗೂ ಯಮಾ ರಿಬನ್ಸ್ ಏಜೆನ್ಸಿ ಲಾಟ್‌ಗೆ 4.2ಕೋಟಿ ರೂ. ಬಿಡ್ ಜೊತೆಗೆ ಅಕ್ಷಾ 3 ಲಾಟ್‌ ಗೆ 1.6 ಕೋಟಿ ರೂ.ಗೆ ಬಿಡ್ ಗೆ ಖರೀದಿ ಮಾಡಿದೆ. 

ಮೂರು ಬಿಡ್‌ಗಳ ಒಟ್ಟು ಮೊತ್ತ ತೆರಿಗೆ ಸೇರಿ 28 ಕೋಟಿ ರೂ. ಆಗಿದೆ. ಚೀನಾ, ದುಬೈ, ಜಪಾನ್ ಸೇರಿದಂತೆ ಇತರ ದೇಶಗಳಲ್ಲಿ ರಕ್ತಚಂದನಕ್ಕೆ ಬೇಡಿಕೆಯಿದ್ದು, ಖರೀದಿ ಮಾಡಿದ ಕಂಪೆನಿ ಅಲ್ಲಿಗೆ ಸಾಗಾಟ ಮಾಡಲಿದೆ. 2012 ಆ.24ರಂದು ನವಮಂಗಳೂರು ಬಂದರು ಮೂಲಕ ದುಬೈಗೆ ಕಳ್ಳಸಾಗಾಟ ಮಾಡಲು ಕಂಟೈನರ್‌ನಲ್ಲಿ ತುಂಬಿಸಿಡಲಾಗಿದ್ದ 5,810 ಕೆ.ಜಿ. ತೂಕದ ರಕ್ತಚಂದನವನ್ನ ಮಂಗಳೂರು ಬಂದರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 

ರೂ. 11.70 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ: ಅಲ್ಲು ಅರ್ಜುನ್‌ ಪುಷ್ಪಾ ನೆನಪಿಸಿದ ದಾಳಿ

2014 ಆ.21ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 16.99 ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 2020ರ ಜ.10ರಂದು ಥಾಯ್ಲೆಂಡ್‌ಗೆ ಸಾಗಿಸಲು ಯತ್ನಿಸುತ್ತಿದ್ದ 2.20 ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು. 2022ರ ಜೂ.3ರಂದು ಆಂಧ್ರಪ್ರದೇಶದ ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ 4.14 ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು.

Follow Us:
Download App:
  • android
  • ios