ನಿನ್ನೆ 3652 ಹೊಸ ಕೇಸು, 24 ಸಾವು| ಸತತ 18ನೇ ದಿನ ಸೋಂಕಿತರಿಂತ ಹೆಚ್ಚು ಜನ ಗುಣಮುಖ

ಬೆಂಗಳೂರು(ನ.02): ಕೊರೋನಾ ಸೋಂಕಿನ ಹೊಸ ಪ್ರಕರಣಗಳಿಗಿಂತ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯೇ ಹೆಚ್ಚಿರುವ ಪ್ರವೃತ್ತಿ ನಿರಂತರವಾಗಿ ಹದಿನೆಂಟನೇ ದಿನವೂ ಮುಂದುವರೆದಿದೆ. ಭಾನುವಾರ 3,652 ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. 8,053 ಮಂದಿ ಸೋಂಕನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಮರಣ ಪ್ರಮಾಣದಲ್ಲಿಯೂ ಕುಸಿತ ದಾಖಲಾಗಿದ್ದು 24 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಕ್ರಿಯ ಪ್ರಕರಣಗಳ ಸಂಖ್ಯೆ 50,592ಕ್ಕೆ ಇಳಿದಿದೆ. ಈ ಪೈಕಿ 935 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ ಒಟ್ಟು 8.27 ಲಕ್ಷ ಮಂದಿ ಸೋಂಕಿನಿಂದ ಬಾಧಿತರಾಗಿದ್ದಾರೆ. ಇವರಲ್ಲಿ 7.62 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ರಾಜ್ಯದ ಗುಣಮುಖರಾದವರ ದರ ಶೇ.91.96ಕ್ಕೆ ಏರಿದೆ. ರಾಜ್ಯದಲ್ಲಿ ಕೋವಿಡ್‌ ಪ್ರಮಾಣದಲ್ಲಿ ಏರಿಕೆ ಪ್ರಾರಂಭಗೊಂಡ ಮೇ ತಿಂಗಳಿನಿಂದಲೂ ರಾಜ್ಯವು ಗುಣಮುಖರ ದರದಲ್ಲಿ ರಾಷ್ಟ್ರೀಯ ದರ (ಶೇ.91.54)ಕ್ಕಿಂತ ಹಿಂದಿತ್ತು.

ರಾಜ್ಯದಲ್ಲಿ ಈವರೆಗೆ ಕೊರೋನಾ ಸೋಂಕಿನಿಂದ 11,192 ಮರಣವನ್ನಪ್ಪಿದ್ದಾರೆ. ರಾಜ್ಯದ ಮರಣ ದರ ಶೇ. 1.36ರಷ್ಟಿದ್ದು, ರಾಷ್ಟ್ರೀಯ ಮರಣ ದರ (ಶೇ.1.49)ಕ್ಕಿಂತ ಕಡಿಮೆ ಇದೆ. ಬೆಂಗಳೂರಿನಲ್ಲಿ 10 ಮಂದಿ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಭಾನುವಾರ 1.06 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ರಾಜ್ಯದ ಒಟ್ಟು ಪರೀಕ್ಷೆಯ ಪ್ರಮಾಣ 80 ಲಕ್ಷದ ಗಡಿ ದಾಟಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 10 ಮಂದಿ ಮೃತರಾಗಿದ್ದು ಉಳಿದಂತೆ ಬಳ್ಳಾರಿ, ಹಾಸನ, ಕೊಪ್ಪಳ ತಲಾ 2, ವಿಜಯಪುರ, ತುಮಕೂರು, ಮೈಸೂರು, ಧಾರವಾಡ, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮರಣವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 2,167 ಹೊಸ ಪ್ರಕರಣಗಳು ಪತ್ತೆಯಾಗಿದೆ. ಉಳಿದಂತೆ ಬಾಗಲಕೋಟೆ 20, ಬಳ್ಳಾರಿ 63, ಬೆಳಗಾವಿ 41, ಬೆಂಗಳೂರು ಗ್ರಾಮಾಂತರ 80, ಬೀದರ್‌ 5, ಚಾಮರಾಜ ನಗರ 25, ಚಿಕ್ಕಬಳ್ಳಾಪುರ 20, ಚಿಕ್ಕಮಗಳೂರು 43, ಚಿತ್ರದುರ್ಗ 65, ದಕ್ಷಿಣ ಕನ್ನಡ 99, ದಾವಣಗೆರೆ 47, ಧಾರವಾಡ 40, ಗದಗ 18, ಹಾಸನ 144, ಹಾವೇರಿ 20, ಕಲಬುರಗಿ 44, ಕೊಡಗು 33, ಕೋಲಾರ 60, ಕೊಪ್ಪಳ 27, ಮಂಡ್ಯ 46, ಮೈಸೂರು 147, ರಾಯಚೂರು ಮತ್ತು ರಾಮನಗರ ತಲಾ 12, ಶಿವಮೊಗ್ಗ 73, ತುಮಕೂರು 104, ಉಡುಪಿ 47, ಉತ್ತರ ಕನ್ನಡ 52, ವಿಜಯಪುರ 87 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 11 ಹೊಸ ಪ್ರಕರಣಗಳು ವರದಿ ಯಾಗಿವೆ.