Asianet Suvarna News Asianet Suvarna News

ಕಲಬುರಗಿ: 85ನೇ ಸಾಹಿತ್ಯ ಸಮ್ಮೇಳನಕ್ಕೆ ವಸತಿ ಸೌಲಭ್ಯದ್ದೇ ಚಿಂತೆ!

ಅತಿಥಿಗಳ ವಸತಿ ಸೌಲಭ್ಯವೇ ಸವಾಲು| ಕಲಬುರಗಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 18 ದಿನ ಬಾಕಿ| 2 ಸಾವಿರ ವಿಐಪಿ, 25 ಸಾವಿರ ಪ್ರತಿನಿಧಿಗಳಿಗೆ ಕೋಣೆ ಹೊಂದಿಸಲು ಜಿಲ್ಲಾಡಳಿತ ಕಸರತ್ತು|

Accommodation Problem in Kalaburagi 85th Akhila Bharath Kannada Sahitya Sammelana
Author
Bengaluru, First Published Jan 20, 2020, 10:37 AM IST

ಶೇಷಮೂರ್ತಿ ಅವಧಾನಿ 

ಕಲಬುರಗಿ(ಜ.20):  ಕಲಬುರಗಿಯಲ್ಲಿ ಫೆ.5, 6 ಹಾಗೂ 7ರ 3 ದಿನ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅಂದಾಜು 2 ಸಾವಿರ ವಿಐಪಿಗಳಿಗೆ ಹಾಗೂ 25 ಸಾವಿರದಷ್ಟು ನೋಂದಾಯಿತ ಪ್ರತಿನಿಧಿಗಳಿಗೆ ವಸತಿಗಾಗಿ ಕೋಣೆಗಳನ್ನು ಹೊಂದಿಸುವುದೇ ಬಹುದೊಡ್ಡ ಸವಾಲಾಗಿದೆ. 

2 ಸಾವಿರ ಗಣ್ಯರಿಗಾಗಿ 1,200 ಕೋಣೆಗಳು ಬೇಕು. ಇನ್ನು ನೋಂದಾಯಿತ 25 ಸಾವಿರ ಪ್ರತಿನಿಧಿಗಳಿಗೆ ಸಾಮೂಹಿಕವಾಗಿ ವಸತಿ ವ್ಯವಸ್ಥೆ ಕಲ್ಪಿಸಲು ಸಹ ಶಾಲಾ ಕೋಣೆಗಳು, ಛತ್ರಗಳು, ಕಲ್ಯಾಣ ಮಂಟಪಗಳು, ಹಾಸ್ಟೆಲ್ ಕಟ್ಟಡಗಳು ಬೇಕು ಎಂಬುದು ಸಮ್ಮೇಳನದ ವಸತಿ ಹಾಗೂ ಸಾರಿಗೆ ಸಮಿತಿ ಅಂದಾಜಿಸಿದೆ. ಆದರೆ, ಅಳೆದು ಸುರಿದು, ಕಡಿ ಕಳೆದು, ಗುಣಿಸಿ ಬಾಗಿಸಿ ಲೆಕ್ಕ ಹಾಕಿದರೂ ಇಷ್ಟೊಂದು ದೊಡ್ಡ ಸಂಖ್ಯೆ ಕೊಠಡಿಗಳು ನಗರದಲ್ಲಿ ಸಿಗುತ್ತಿಲ್ಲ. ಇದರಿಂದ ಸಂಘಟಕರಿಗೆ ತುಂಬ ತಲೆ ಬಿಸಿಯಾಗಿದೆ.

‘ಕನ್ನಡ ನುಡಿ ಜಾತ್ರೆ’ಗೆ ಜರ್ಮನ್‌ ಟೆಕ್ನಾಲಜಿಯ ವೇದಿಕೆ!

ಸಾರಿಗೆ ಹಾಗೂ ವಸತಿ ಸಮಿತಿಗೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅಧ್ಯಕ್ಷರು, ಜಿಪಂ ಸಿಇಒ ಡಾ. ಪಿ. ರಾಜಾ ಕಾರ್ಯಾಧ್ಯಕ್ಷರು. ಈಗಾಗಲೇ 3 ಸುತ್ತು ಸಭೆ ನಡೆದಿದ್ದು ಗಣ್ಯರ 1200 ಕೋಣೆಗಳ ಪೈಕಿ 850 ಕೋಣೆಗಳು, 25 ಸಾವಿರದಷ್ಟು ನೋಂದಾಯಿತ ಪ್ರತಿನಿಧಿಗಳ ಪೈಕಿ 15 ಸಾವಿರದಷ್ಟು ಪ್ರತಿನಿಧಿಗಳ ವಸತಿಗೆ ವ್ಯವಸ್ಥೆ ಗುರುತಿಸಲಾಗಿದೆ. ಆದರೆ ವಸತಿಗಾಗಿ ಇನ್ನೂ ಶೇ.50 ರಷ್ಟು ವ್ಯವಸ್ಥೆ ಕಲ್ಪಿಸಬೇಕಾಗಿದೆ. ನಗರದ ಲಾಡ್ಜ್, ಗೃಹಮಂಡಳಿ ಖಾಲಿ ಇರುವ ಮನೆಗಳು, ಸರ್ಕಾರಿ ವಸತಿ ನಿಲಯಗಳು, ಕಲ್ಯಾಣ ಮಂಟಪ, ಕೆಲವು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಕೊಠಡಿಗಳನ್ನು ಬಳಸಿಕೊಳ್ಳಲು ಸಿದ್ಧತೆ ನಡೆದಿದೆ. ಇಷ್ಟಾದರೂ ಕೋಣೆಗಳ ಕೊರತೆ ಕಾಡಿದರೆ ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ವಿವಿಗೆ ಮನವರಿಕೆ ಮಾಡುವ ಮೂಲಕ ಗುಲ್ಬರ್ಗ ವಿವಿ 12 ಹಾಸ್ಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಸಮಿತಿ ಮುಂದಾಗಿದೆ. 

400 ಸ್ನಾನಗ್ರಹ, 300 ಶೌಚಾಲಯ ನಿರ್ಮಾಣ: 

ನೋಂದಾಯಿತ ಪ್ರತಿನಿಧಿಗಳಿಗೆ ತಂಗಲು ಸಾಮೂಹಿಕವಾಗಿ ಸವಲತ್ತು ಕಲ್ಪಿಸಲಾಗುತ್ತಿರುವ ಛತ್ರಗಳು, ಶಾಲೆಗಳು, ಹಾಸ್ಟೆಲ್ ಗಳ ಕಟ್ಟಡಗಳಲ್ಲಿ ಸ್ನಾನ, ಶೌಚಗೃಹಗಳ ಕೊರತೆ ಕಾಡುತ್ತಿದೆ. ಇದನ್ನು ಸರಿಪಡಿಸಲು ಸಮ್ಮೇಳನದ ಬಳಕೆಗೆಂದೇ ತಕ್ಷಣಕ್ಕೆ 400 ಸ್ನಾನ ಹಾಗೂ 300 ಶೌಚಗೃಹಗಳ ನಿರ್ಮಾಣ ಕೆಲಸಗಳು ಸಾಗಿವೆ. 

ಜ್ಞಾನಗಂಗೆ  ಹಾಸ್ಟೆಲ್‌ಗಳತ್ತ ಚಿತ್ತ:

ಜಿಲ್ಲೆಯ ಪ್ರತಿನಿಧಿಗಳು ಪ್ರತಿ ದಿನ ಬಂದು ಹೋಗುವ ವ್ಯವಸ್ಥೆ ಮಾಡುವ ಜತೆಗೆ, ಹೊರ ಜಿಲ್ಲೆಯವರಿಗೆ ಮಾತ್ರ ವಸತಿ ಕಲ್ಪಿಸಬೇಕು ಎಂಬ ಲೆಕ್ಕಾಚಾರವಿದ್ದರೂ ಸಹ ಸಮಿತಿ ಅವರು ಅದಾಗಲೇ ಹೆಚ್ಚುಕಮ್ಮಿ ಇರಲಿ ಎಂದು ವಿವಿ ಅಂಗಳದಲ್ಲಿರುವ ವಿದ್ಯಾರ್ಥಿಗಳ ಹಾಸ್ಟೆಲ್‌ನತ್ತ ಚಿತ್ತ ಹರಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಯಡಿ ವಸತಿ ನಿಲಯಗಳಿವೆ. ಗಣ್ಯರು ಮತ್ತು ಜನಪ್ರತಿನಿಧಿಗಳಿಗೆ ಇಲ್ಲಿ ತಂಗಲು ವ್ಯವಸ್ಥೆ ಮಾಡಲು ಸಮಿತಿ ಮುಂದಾಗಿದೆ. 

85ನೇ ಸಾಹಿತ್ಯ ಸಮ್ಮೇಳನ: ಬಹುಲಕ್ಷ ಕೊಟೇಶನ್‌ಗೆ ದಂಗಾದ ಸಚಿವ ಕಾರಜೋಳ!

12 ಹಾಸ್ಟೆಲ್‌, 3000 ವಿದ್ಯಾರ್ಥಿಗಳು: 

ಗುವಿವಿ ಆವರಣದಲ್ಲಿ 12 ವಸತಿ ನಿಲಯಗಳಿವೆ. ಇಲ್ಲಿ 3 ಸಾವಿರ ವಿದ್ಯಾರ್ಥಿಗಳು ಇರುತ್ತಾರೆ. ಕೃಷ್ಣಾ ವಸತಿ ನಿಲಯ, ಅಂಬೇಡ್ಕರ್, ವಸತಿ ನಿಲಯ, ಗಂಗಾ ವಸತಿ ನಿಲಯ, ಹಿಂದುಳಿದ ವರ್ಗಗಳ ಇಲಾಖೆ ಎರಡು ವಸತಿ ನಿಲಯಗಳಿವೆ. ಎರಡು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಸಂಶೋಧನಾ ವಿದ್ಯಾರ್ಥಿಗಳ ಎರಡು ವಸತಿ ನಿಲಯಗಳಿವೆ.

2000 ಗಣ್ಯರು

ಸಮ್ಮೇಳನದ 3 ದಿನ ಬಂದು ಹೋಗುವ ಗಣ್ಯರ ಸಂಖ್ಯೆ

25000 ವಾಹನಗಳು

25000 ಸಮ್ಮೇಳನಕ್ಕೆ ಬರುವ ನೋಂದಾಯಿತ ಪ್ರತಿನಿಧಿಗಳು

1200 ಕೋಣೆ

ವಿಐಪಿಗಳಿಗಾಗಿ ಬೇಕಾಗುವ ತಂಗುವ ಕೋಣೆಗಳು

50 ಹೆಲ್ಪ್‌ಡೆಸ್

ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ತಲೆ ಎತ್ತುವ ಹೆಲ್ಪ್‌ಡೆಸ್ಕ್‌ಗಳು

200 ಕಾರ್

200  ವಿಐಪಿ ಬಳಕೆಗಾಗಿರುವ ಕಾರ್‌ಗಳು

160 ವಾಹನ

160 ಪ್ರತಿನಿಧಿಗಳ ಬಳಕೆಗಾಗಿ ಇನ್ನೋವಾ, ಕ್ರೂಸರ್, ಶಾಲಾ ಬಸ್ಸುಗಳು

20 ಬಸ್

20 ಜಿಲ್ಲೆಯ 10 ತಾಲೂಕುಗಳಿಂದ ನಿತ್ಯ ಸಮ್ಮೇಳನಕ್ಕೆ ಬಂದು ಹೋಗುವ ಬಸ್‌ಗಳು

ಗುವಿವಿಯಲ್ಲಿರುವ ಕೆಲ ವಿಭಾಗಗಳ ಪರೀಕ್ಷೆ ಫೆ.5ಕ್ಕೆ ಮುಗಿಯಲಿವೆ, ಪ್ರಾಯೋಗಿಕ ಪರೀಕ್ಷೆಗಳು ಇನ್ನೂ ಬಾಕಿ ಇರುತ್ತವೆ. ಹೀಗಾಗಿ, ಎಷ್ಟು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇರುತ್ತಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಗೊತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಕೊಠಡಿಗಳ ಸಂಖ್ಯೆ ಅನುಗುಣವಾಗಿ ವಿವಿ ಆವರಣದಲ್ಲಿರುವ ಕಟ್ಟಡ ಬಳಸಲು ನಾವು ಅನುಮತಿ ನೀಡುತ್ತೇವೆ ಎಂದು ಗುಲ್ಬರ್ಗ ವಿವಿ ಪ್ರಭಾರಿ ಕುಲಪತಿ ದೇವಿದಾಸ ಮಾಲೆ ಅವರು ತಿಳಿಸಿದ್ದಾರೆ. 

ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿ ಮನವಿ

ಈ ಬಗ್ಗೆ ಮಾತನಾಡಿದ ವಸತಿ ಸಾರಿಗೆ ಸಮಿತಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕಲಬುರಗಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು,ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಸೂಕ್ತ ವಸತಿ, ಸಾರಿಗೆ ಸವಲತ್ತು ನೀಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ಈಗಾಗಲೇ ಸಿದ್ಧತೆ ಸಾಗಿದೆ. ಕೊಠಡಿಗಳ ಕೊರತೆ ಇದೆಯಾದರೂ ಹೇಗಾದರೂ ಮಾಡಿ ಲಭ್ಯ ವ್ಯವಸ್ಥೆಯಲ್ಲೇ ಹೊಂದಾಣಿಕೆ ಮಾಡುತ್ತಿದ್ದೇವೆ. ಹಾಸ್ಟೆಲ್‌ಗಳು, ಕಲ್ಯಾಣ ಮಂಟಪ ಪಡೆಯಲಿದ್ದೇವೆ. ಸಾರಿಗೆ ಸವಲತ್ತು, ಹೆಲ್ಪ್ ಡೆಸ್ಕ್ ಇರುತ್ತದೆ. ಈಶಾನ್ಯ ಸಾರಿಗೆ ಅವರು ತಾವು ನೀಡುವ ಸೇವೆಗೆ 6 ಲಕ್ಷ ರು. ತಗುಲಲಿದೆ ಎನ್ನುತ್ತಾರೆ, ಆ ವೆಚ್ಚ ಸಂಸ್ಥೆಯೇ ಭರಿಸಲಿ ಎಂದು ಅದಾಗಲೇ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ್ದೇವೆ. ಅವರು ತಮ್ಮ ಮನವಿ ಪರಿಗಣಿಸುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 
 

Follow Us:
Download App:
  • android
  • ios