ಬೆಂಗಳೂರು(ಸೆ.26): ಟರ್ಫ್‌ ಕ್ಲಬ್‌ಅನ್ನು ಬೆಂಗಳೂರು ಕೇಂದ್ರ ಭಾಗದಿಂದ ನಗರದ ಹೊರ ವಲಯಕ್ಕೆ ಸ್ಥಳಾಂತರಿಸುವಂತೆ ಎಚ್‌.ಕೆ.ಪಾಟೀಲ್‌ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಶಿಫಾರಸು ಮಾಡಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆಯಾದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 4ನೇ ವರದಿಯಲ್ಲಿ, ಬೆಂಗಳೂರು ಟರ್ಫ್‌  ಕ್ಲಬ್‌ಅನ್ನು ನಗರದಿಂದ ಹೊರ ಭಾಗಕ್ಕೆ ಸ್ಥಳಾಂತರಿಸಬೇಕು. ಪ್ರಸ್ತುತ ಟರ್ಫ್‌ ಕ್ಲಬ್‌ ಇರುವ ಸ್ಥಳವನ್ನು ಲಾಲ್‌ಬಾಗ್‌ ಅಥವಾ ಕಬ್ಬನ್‌ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕ್ಲಬ್‌ ಹಾಗೂ ಸರ್ಕಾರದ ನಡುವಿನ ಪ್ರಕರಣವನ್ನು ಬೇಗ ವಿಚಾರಣೆಗೆ ಬರುವಂತೆ ಮಾಡಿ ಇತ್ಯರ್ಥಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಡಿ.2ರಿಂದ ಟರ್ಫ್ ಕ್ಲಬ್‌ ಸ್ಥಗಿತಗೊಳಿಸಲು ನಿರ್ಣಯ!

ಬೆಂಗಳೂರು ಟರ್ಫ್‌ ಕ್ಲಬ್‌ ಮೈಸೂರು ರೇಸ್‌ಕೋರ್ಸ್‌ ಪರವಾನಗಿ ಕಾಯಿದೆ- 1952 ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ಹೀಗಾಗಿ ಪರವಾನಗಿ ರದ್ದು ಮಾಡುವ ಸಂಪೂರ್ಣ ಅಧಿಕಾರ ಆರ್ಥಿಕ ಇಲಾಖೆಗೆ ಇದೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸದಿರುವುದು ತೀರಾ ವಿಷಾದನೀಯ. ಪರವಾನಗಿಯ ನವೀಕರಣವನ್ನು ಮುಖ್ಯಮಂತ್ರಿ ಅನುಮೋದನೆ ಪಡೆದೇ ಮಾಡಲಾಗಿದೆ. ಈ ವೇಳೆ ಆರ್ಥಿಕ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಘನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಿತ್ತು ಎಂದು ಅಭಿಪ್ರಾಯಪಡಲಾಗಿದೆ.

ತಕ್ಷಣ ಬೆಂಗಳೂರು ಟರ್ಫ್‌ ಕ್ಲಬ್‌ ಮೇಲೆ ಕ್ರಮ ಕೈಗೊಳ್ಳಬೇಕು.ಟರ್ಫ್‌ ಕ್ಲಬ್‌ನಿಂದ 36.63 ಕೋಟಿ ಬಾಡಿಗೆ ವಸೂಲಿ ಬಾಕಿ ಇದೆ. ಬಾಕಿಯನ್ನು ಬಡ್ಡಿ ಸಹಿತ ವಸೂಲಿ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ವರದಿಯಲ್ಲಿ ತಿಳಿಸಲಾಗಿದೆ.