Asianet Suvarna News Asianet Suvarna News

ಬಿಬಿಎಂಪಿ ವಾರ್ಡ್‌ ಸಂಖ್ಯೆ 225ಕ್ಕೆ ಹೆಚ್ಚಿಸಲು ಶಿಫಾರಸು

ಬಿಬಿಎಂಪಿಗೆ ಹೊಸ ಪ್ರದೇಶ ಸೇರ್ಪಡೆ ಬೇಡ|ನವೆಂಬರ್‌ ಒಳಗಾಗಿ ಅಂತಿಮ ವರದಿ ಸಲ್ಲಿಕೆ| ಜಂಟಿ ಶಾಸಕಾಂಗ ಸಮಿತಿ ಸಭೆ ನಿರ್ಧಾರ| ಹೈಕೋರ್ಟ್‌ನಲ್ಲಿ ಯಾವುದೇ ಆದೇಶ ಬಂದರೂ ಡಿಸೆಂಬರ್‌ ಮೊದಲ ವಾರ ಅಥವಾ ಜನವರಿ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ| 

Recommended to Increase the Number of BBMP Wards to 225
Author
Bengaluru, First Published Sep 5, 2020, 7:09 AM IST
  • Facebook
  • Twitter
  • Whatsapp

ಬೆಂಗಳೂರು(ಸೆ.05): ಬಿಬಿಎಂಪಿಗೆ ಹೊಸದಾಗಿ ಯಾವುದೇ ಪ್ರದೇಶಗಳನ್ನು ಸೇರ್ಪಡೆ ಮಾಡಬಾರದು. ಹಾಲಿ ಇರುವ 198 ವಾರ್ಡ್‌ಗಳನ್ನೇ 225 ವಾರ್ಡ್‌ಗಳಿಗೆ ವಿಸ್ತರಣೆ ಮಾಡಬೇಕು. ಜತೆಗೆ 15 ವಲಯಗಳನ್ನಾಗಿ ವಿಭಜಿಸುವ ಬದಲು 10-12 ವಲಯಗಳಿಗೆ ಸೀಮಿತಗೊಳಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಐಎಎಸ್‌ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಿಸಬೇಕು ಎಂದು ಶಿಫಾರಸು ಮಾಡಲು ಶುಕ್ರವಾರ ನಡೆದ ಶಾಸಕ ಎಸ್‌. ರಘು ನೇತೃತ್ವದ ಜಂಟಿ ಶಾಸಕಾಂಗ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಅಲ್ಲದೆ, ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್‌ ಅಂತ್ಯದೊಳಗಾಗಿ ‘ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ-2020’ ವಿಧೇಯಕದ ಬಗ್ಗೆ ವರದಿ ಸಲ್ಲಿಸಲು ನಿರ್ಧರಿಸಲಾಯಿತು. ಇದಕ್ಕೆ ಅನುವಾಗುವಂತೆ ಜಂಟಿ ಶಾಸಕಾಂಗ ಸಮಿತಿಗೆ ಎಸ್‌.ರಘು ನೇತೃತ್ವದಲ್ಲಿ ಮತ್ತೊಂದು ಉಪ ಸಮಿತಿ ರಚನೆ ಮಾಡಲೂ ಸಹ ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.

ಬಿಬಿಎಂಪಿ 198 ವಾರ್ಡ್‌ಗಳ ಸಂಖ್ಯೆ 225ಕ್ಕೆ ಏರಿಕೆ?

ಶುಕ್ರವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ‘ಬಿಬಿಎಂಪಿಗೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಬೇಕು. ವಾರ್ಡ್‌ಗಳನ್ನು 198ರಿಂದ 225 ವಾರ್ಡ್‌ಗಳಿಗೆ ಹೆಚ್ಚಳ ಮಾಡಬೇಕು. ಜತೆಗೆ 15 ವಲಯಗಳನ್ನಾಗಿ ವಿಭಜಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿರುವುದಾಗಿ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಂಟಿ ಶಾಸಕಾಂಗ ಸಮಿತಿ ಸದಸ್ಯರು, ‘ಈಗಾಗಲೇ ಬಿಬಿಎಂಪಿ ವ್ಯಾಪ್ತಿ ಅವೈಜ್ಞಾನಿಕವಾಗಿ ವಿಸ್ತಾರಗೊಂಡಿದೆ. 2006ರಲ್ಲಿ ಸೇರ್ಪಡೆಯಾದ 110 ಹೊಸ ಹಳ್ಳಿಗಳಿಗೆ ಈವರೆಗೂ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಮತ್ತೆ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಬಾರದು. ಅದರ ಬದಲಿಗೆ ಇರುವ ವಾರ್ಡ್‌ಗಳನ್ನೇ 225ಕ್ಕೆ ಹೆಚ್ಚಳ ಮಾಡಬೇಕು’ ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ನವೆಂಬರ್‌ ಅಂತ್ಯಕ್ಕೆ ವರದಿ:

ಈ ಬಗ್ಗೆ ‘ಕನ್ನಡಪ್ರಭ’ದ ಜೊತೆ ಮಾತನಾಡಿದ ಎಸ್‌.ರಘು, ‘ಸುಮಾರು 3 ಗಂಟೆಗಳ ಕಾಲ ಕಾಯಿದೆಯ 40 ಅಂಶಗಳ ಬಗ್ಗೆ ಕೂಲಂಕಶವಾಗಿ ಚರ್ಚೆ ನಡೆಸಿದ್ದೇವೆ. ಹೊಸ ಪ್ರದೇಶ ಸೇರ್ಪಡೆಗೆ ನಾವು ಒಪ್ಪಿಲ್ಲ. ಎಂಟು ವಲಯಗಳನ್ನು 15 ವಲಯಗಳನ್ನಾಗಿ ಮಾಡಬೇಕು ಎಂದು ಸಲಹೆ ಬಂದಿದ್ದು ಅದನ್ನು 10-12ಕ್ಕೆ ಸೀಮಿತಗೊಳಿಸಬೇಕು ಎಂದು ಚರ್ಚಿಸಲಾಯಿತು. ಜತೆಗೆ ಮೇಯರ್‌ ಅವಧಿಯನ್ನು 1 ವರ್ಷದಿಂದ 5 ವರ್ಷಕ್ಕೆ ಹೆಚ್ಚಿಸಬೇಕೆ ಅಥವಾ 2.5 ವರ್ಷಕ್ಕೆ ಒಬ್ಬರು ಮೇಯರ್‌ನಂತೆ ಒಂದು ಅವಧಿಗೆ ಇಬ್ಬರಿಗೆ ಅಧಿಕಾರ ಹಂಚಿಕೆ ಮಾಡಬೇಕೆ?’ ಎಂಬ ಕುರಿತು ಚರ್ಚಿಸಲಾಯಿತು.

ಅಂತಿಮವಾಗಿ ಬಿ.ಎಸ್‌. ಪಾಟೀಲ್‌ ವರದಿ, ಕಸ್ತೂರಿ ರಂಗನ್‌ ವರದಿ ಸೇರಿದಂತೆ ಹಲವು ವರದಿಗಳನ್ನು ಅಧ್ಯಯನ ಮಾಡಿ ನವೆಂಬರ್‌ ಒಳಗಾಗಿ ವರದಿ ನೀಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಉಪ ಸಮಿತಿ ರಚಿಸಿದ್ದು ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿಯಿಂದ ಶಾಸಕರಾದ ರವಿ ಸುಬ್ರಮಣ್ಯ, ಸತೀಶ್‌ರೆಡ್ಡಿ, ಕಾಂಗ್ರೆಸ್‌ನಿಂದ ಪರಿಷತ್‌ ಸದಸ್ಯ ಪಿ. ಆರ್. ರಮೇಶ್‌, ಜೆಡಿಎಸ್‌ನಿಂದ ತಿಪ್ಪೇಸ್ವಾಮಿ ಅವರು ಸದಸ್ಯರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವರಾದ ಎಸ್‌. ಸುರೇಶ್‌ ಕುಮಾರ್‌, ಶಾಸಕರಾದ ಅರವಿಂದ ಲಿಂಬಾವಳಿ, ದಿನೇಶ್‌ ಗುಂಡೂರಾವ್‌, ಎಸ್‌.ಆರ್‌. ವಿಶ್ವನಾಥ್‌, ಸತೀಶ್‌ರೆಡ್ಡಿ, ಕೃಷ್ಣ ಬೈರೇಗೌಡ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಚುನಾವಣೆ ವೇಳೆಗೆ ವರದಿ ಸಿದ್ಧ:

ಹೈಕೋರ್ಟ್‌ನಲ್ಲಿ ಯಾವುದೇ ಆದೇಶ ಬಂದರೂ ಡಿಸೆಂಬರ್‌ ಮೊದಲ ವಾರ ಅಥವಾ ಜನವರಿ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ನವೆಂಬರ್‌ 30ರೊಳಗಾಗಿ ಹೊಸದಾಗಿ ಮತದಾರರ ಪಟ್ಟಿಪರಿಷ್ಕರಣೆ ಮಾಡುತ್ತೇವೆ. ನವೆಂಬರ್‌ ಅಂತ್ಯದೊಳಗೆ ವರದಿ ನೀಡಲು ವಾರಕ್ಕೆ ಎರಡು ಉಪ ಸಮಿತಿ ಸಭೆ ಹಾಗೂ ಒಂದು ಸಮಿತಿ ಸಭೆ ನಡೆಸಿ ಆದಷ್ಟುಬೇಗ ವರದಿ ಸಲ್ಲಿಸುತ್ತೇವೆ ಎಂದು ಶಾಸಕ ಎಸ್‌. ರಘು ಹೇಳಿದರು.
 

Follow Us:
Download App:
  • android
  • ios