ಚಾಮರಾಜನಗರ ಆಕ್ಸಿಜನ್ ದುರಂತದ ಮರುತನಿಖೆ: ಸಚಿವ ದಿನೇಶ್ ಗುಂಡೂರಾವ್
ಚಾಮರಾಜನಗರದ ಆಕ್ಸಿಜನ್ ದುರಂತದ ಮರು ತನಿಖೆಗೆ ಸೂಚಿಸಿದ್ದೇನೆ. ಜತೆಗೆ ಕೊರೋನಾ ಅವಧಿಯಲ್ಲಿನ ಭ್ರಷ್ಟಾಚಾರ ಕುರಿತು ಕೇಳಿಬಂದಿರುವ ಆರೋಪಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ನಿರ್ದೇಶನ ನೀಡಿದ್ದೇನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು(ಮೇ.31): ಬಿಜೆಪಿ ಆಡಳಿತಾವಧಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ, ಕೊರೋನಾ ವೇಳೆ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ಜೀವ ಕೊಡಲು ಕಾಂಗ್ರೆಸ್ ಮುಂದಾಗಿದೆ. ಚಾಮರಾಜನಗರದ ಆಕ್ಸಿಜನ್ ದುರಂತದ ಮರು ತನಿಖೆಗೆ ಸೂಚಿಸಿದ್ದೇನೆ. ಜತೆಗೆ ಕೊರೋನಾ ಅವಧಿಯಲ್ಲಿನ ಭ್ರಷ್ಟಾಚಾರ ಕುರಿತು ಕೇಳಿಬಂದಿರುವ ಆರೋಪಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ಖುದ್ದು ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದಿನೇಶ್ ಗುಂಡೂರಾವ್ ಅವರು ಮೊದಲ ಬಾರಿಗೆ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಈ ಎರಡೂ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದರು.
ಸಿಎಂ, ಕೃಷಿ ಸಚಿವರ ಜಿಲ್ಲೆಯಲ್ಲೇ 112 ರೈತರ ಆತ್ಮಹತ್ಯೆ; ಗುಂಡೂರಾವ್ ಗರಂ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಸಮಯದಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಮರು ತನಿಖೆಗೆ ಸೂಚಿಸಿದ್ದೇನೆ. ದುರಂತಕ್ಕೆ ಯಾರು ಕಾರಣ ಎಂಬುದು ಬಹಿರಂಗವಾಗಿಲ್ಲ. ಆದ್ದರಿಂದ ಪುನಃ ತನಿಖೆ ನಡೆಸುವ ಅವಶ್ಯಕತೆಯಿದೆ’ ಎಂದು ಪ್ರತಿಪಾದಿಸಿದರು.
‘ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ಸಮಯದಲ್ಲಿ ಉಪಕರಣಗಳ ಖರೀದಿ ಸೇರಿದಂತೆ ಹಲವೆಡೆ ಭ್ರಷ್ಟಾಚಾರ ನಡೆದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.
‘ಕಳೆದ ಆರು ತಿಂಗಳಲ್ಲಿ ಇಲಾಖೆಯಲ್ಲಿ ಏನೆಲ್ಲಾ ನಡೆದಿದೆ ಎಂಬ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಮಾಹಿತಿ ನೀಡುವಂತೆಯೂ ಸೂಚಿಸಿದ್ದೇನೆ. ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಭರವಸೆ ನೀಡಿದ್ದು ಅದರಂತೆ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆಯೂ ಚರ್ಚೆ ನಡೆಸಲಾಗಿದೆ’ ಎಂದು ವಿವರಿಸಿದರು.