ಬಾಲಿವುಡ್ ತಾರೆ ರವೀನಾ ಟಂಡನ್ ಮತ್ತು ಅವರ ಪುತ್ರಿ ರಾಶಾ ತಾದಾನಿ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಯಾಂತ್ರೀಕೃತ ಐರಾವತವನ್ನು ಕೊಡುಗೆಯಾಗಿ ನೀಡಿದ್ದಾರೆ. ಪೇಟಾ ಇಂಡಿಯಾದ ಪ್ರೇರಣೆಯಿಂದ ಈ ಕೊಡುಗೆ ನೀಡಲಾಗಿದೆ.
ಮೂಡುಬಿದಿರೆ: (ದಕ್ಷಿಣ ಕನ್ನಡ): ಯಾಂತ್ರೀಕೃತ ಐರಾವತವನ್ನು ಜೈನಕಾಶಿ ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಗೆ ಬಾಲಿವುಡ್ ತಾರೆ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ತಾದಾನಿ ಕೊಡುಗೆಯಾಗಿ ನೀಡಿದರು.
ಪಳಗಿಸಿದ ಆನೆಗಳನ್ನು ಬಳಸುವುದರಿಂದ ಕಾಡಿನ ಸಹಜ ಬದುಕನ್ನು ಕಸಿದುಕೊಂಡು ಹಿಂಸೆ ನೀಡಿದಂತಾಗುತ್ತದೆ ಎಂದು ಅದರ ವಿರುದ್ಧ ನೈಜ ಆನೆಗಳನ್ನೇ ಹೋಲುವ ಮೆಕ್ಯಾನಿಕಲ್ ಆನೆಗಳನ್ನು ಪ್ರೋತ್ಸಾಹಿಸಿ ಎನ್ನುತ್ತಿರುವ ಪೇಟಾ ಇಂಡಿಯಾದ ಮುಂಬೈ ಮೂಲದ ಪ್ರೇರಣೆಯಿಂದ ಬಾಲಿವುಡ್ ತಾರಾ ಕುಟುಂಬದ ಕೊಡುಗೆಯಾಗಿ ಈ ಐರಾವತ ಒದಗಿ ಬಂದಿದೆ.
ಇದನ್ನೂ ಓದಿ: ನಾಗರಹೊಳೆಯಲ್ಲಿ ಸಸಿ ನೆಟ್ಟು ಪರಿಸರ ಕಾಳಜಿ ಮೆರೆದ ರವೀನಾ ಟಂಡನ್
ಜೈನಕಾಶಿಯಲ್ಲಿ ಚಾತುರ್ಮಾಸನಿರತ 108 ಗುಲಾಬ್ ಭೂಷಣ ಮುನಿ ಮಹಾರಾಜರು ನೂತನ ಐರಾವತವನ್ನು ಅನಾವರಣಗೊಳಿಸಿದರು. ಮೆಕ್ಯಾನಿಕಲ್ ಐರಾವತ ದೇಶದಲ್ಲೇ ಮೊದಲ ಬಾರಿಗೆ ಜೈನ ಬಸದಿಗೆ ಬಂದಂತಾಗಿದೆ.
3 ಮೀ. ಎತ್ತರ, 800 ಕೆ.ಜಿ. ಭಾರವಾಗಿದ್ದು ರಬ್ಬರ್, ಫೈಬರ್, ಮೆಟಲ್, ಮೆಶ್, ಫೋಮ್, ಕಬ್ಬಿಣ ಹಾಗೂ ಐದು ಮೋಟಾರುಗಳ ನೆರವಿನಿಂದ ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿ ಅದನ್ನು ನೈಜ ಆನೆಯಂತೆ ಬಳಸಿಕೊಳ್ಳಲು ಸಾಧ್ಯವಿದೆ.
