ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿರುವ ಕಾರಣ ಇಂದು ರಾಜ್ಯದ 3 ಜಿಲ್ಲೆಗಳ ಕೆಲ ತಾಲೂಕುಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರು (ಆ.28) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವು ನದಿಗಳು ಉಕ್ಕಿ ಹರಿದಿದೆ. ಜಲಾಶಯದ ಗೇಟ್ ತೆರೆಯಲಾಗಿದ್ದು, ನದಿ ಪಾತ್ರದ ಜನರ ಆತಂಕ ಹೆಚ್ಚಾಗಿದೆ. ರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿರುವ ಜಿಲ್ಲೆಯ ಶಾಲಾ ಕಾಲೇಜಿಗೆ ಇಂದು (ಆ.28) ರಜೆ ಘೋಷಿಸಲಾಗಿದೆ. ರಾತ್ರಿ ಹಾಗೂ ಇಂದು ಬೆಳಗ್ಗೆಯ ಭಾರಿ ಮಳೆಗೆ ಇದೀಗ ದಕ್ಷಿಣ ಕನ್ನಡದ ಕೆಲ ತಾಲೂಕು, ಶಿವಮೊಗ್ಗದ ಕೆಲ ತಾಲೂಕು ಹಾಗೂ ಉಡುಪಿ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಜನರು ಮುನ್ನಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ದಕ್ಷಿಣ ಕನ್ನಡದ 6 ತಾಲೂಕುಗಳಿಗೆ ಇಂದು ರಜೆ
ದಕ್ಷಿಣ ಕನ್ನಡ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪೈಕಿ ಆತಂಕ ಸೃಷ್ಟಿಸಿರುವ 6 ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಂಗಳೂರು, ಉಳ್ಳಾಲ, ಮುಲ್ಕಿ, ಮೂಡಬಿದಿರೆ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಶಾಲಾ ಕಾಲೇಜಿಗೆ ಇಂದು (ಗುರುವಾರ) ರಜೆ ಘೋಷಣೆ ಮಾಡಲಾಗಿದೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇಂದು ಬೆಳಗ್ಗೆ ರಜೆ ಘೋಷಣೆ ಮಾಡಿದ್ದಾರೆ
ಉಡುಪಿ ಸಂಪೂರ್ಣ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ
ಉಡುಪಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಉಡುಪಿ ಜಿಲ್ಲೆಗೆ ಆರೇಂಜ್ ಅಲರ್ಟ್ ನೀಡಲಾಗಿದೆ. ಹವಮಾನ ಇಲಾಖೆ ಸೂಚನೆ ಹಾಗೂ ಸತತವಾಗಿ ಮಳೆಯಾಗುತ್ತಿರುವ ಕಾರಣ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪು ಜಿಲ್ಲಾಧಿಕಾರಿ ಸ್ಪರೂಪ್ ಕೆಟಿ ರಜೆ ಘೋಷಿಸಿ ಆದೇಶ ನೀಡಿದ್ದಾರೆ.
ಸಾಗರ ತಾಲೂಕಿನ ಶಾಲಾ ಕಾಲೇಜಿಗೆ ರಜೆ
ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಕಾರಣ ಇಂದು (ಆಗಸ್ಟ್ 28) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಾಲಾ ಕಾಲೇಜಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಸಾಗರ್ ತಹಶೀಲ್ದಾರ್ ಈ ಘೋಷಣೆ ಮಾಡಿದ್ದಾರೆ. ಇತ್ತ ಹೊಸನಾಗರ ತಾಲೂಕಿನ ಶಾಲಾ ಕಾಲೇಜುಗಳಿಗೂ ಇಂದು ರಜೆ ನೀಡಲಾಗಿದೆ. ಹೊಸನಗರ ತಾಲೂಕು ತಹಸಿಲ್ದಾರ್ ರಶ್ಮಿ ಹಾಲೇಶ್ ರಜೆ ಘೋಷಿಸಿದ್ದಾರೆ.
