ಸರ್ಕಾರದ ವಸತಿ ಶಾಲೆಗಳಲ್ಲಿ ಇದ್ದ ಕುವೆಂಪು ಸಾಲುಗಳನ್ನು ಐಎಎಸ್‌ ಅಧಿಕಾರಿಯೊಬ್ಬರು ತಮ್ಮ ಮನಸ್ಸಿಗೆ ಬಂದಂತೆ ಬದಲಾಯಿಸಲು ಮುಂದಾಗಿದ್ದನ್ನು 'ಧೈರ್ಯವಾಗಿ ಪ್ರಶ್ನೆ' ಮಾಡಿದ್ದಕ್ಕೆ ಮೂಲ ಸಾಲುಗಳು ಮತ್ತೆ ವಾಪಾಸ್‌ ಬಂದಿದೆ. 

ಬೆಂಗಳೂರು (ಫೆ.20): ರಾಷ್ಟ್ರಕವಿ ಕುವೆಂಪು ಅವರ ಕವಿತೆಯ ಪ್ರೇರಣೆಯಿಂದ ರಾಜ್ಯದ ಶಾಲೆಗಳಲ್ಲಿ ಹಾಕಲಾಗಿರುವ 'ಜ್ಞಾನದೇಗುಲವಿದು ಕೈಮುಗಿದ ಒಳಗೆ ಬನ್ನಿ..' ಎನ್ನುವ ಸಾಲುಗಳಿಗೆ ಕತ್ತರಿ ಹಾಕುವ ಮೂಲಕ ತಮ್ಮ ಅಧಿಕಾರ ಚಲಾಯಿಸಿದ್ದ ಐಎಎಸ್‌ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌ಗೆ ಹಿನ್ನಡೆಯಾಗಿದೆ. ವಿಪಕ್ಷಗಳು ಹಾಗೂ ಸಾಹಿತ್ಯ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಹಿಂದಿನ ಸಾಲುಗಳನ್ನೇ ಮುಂದುವರಿಸಲು ಸೂಚನೆ ನೀಡಲಾಗಿದೆ. ಸರ್ಕಾರದ ಯಾವುದೇ ಅದೇಶವಿಲ್ಲದೇ ಇದ್ದರೂ, ಸ್ವಯಂ ತಾವಾಗಿಯೇ ನಿರ್ಧಾರ ತೆಗೆದುಕೊಂಡಿದ್ದ ಐಎಎಸ್‌ ಅಧಿಕಾರಿ ಮಣಿವಣ್ಣವನ್‌ ಅವರನ್ನು ಎತ್ತಗಂಡಿ ಮಾಡುವಂತೆ ವಿಧಾನಸಭೆಯಲ್ಲೇ ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿತ್ತು. ಸರ್ಕಾರದ ಹಿರಿಯ ಸಚಿವರುಗಳು ಕೂಡ 'ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸು' ಅನ್ನೋದರಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ಐಎಎಸ್‌ ಅಧಿಕಾರಿ ಪರವಾಗಿ ನಿಲ್ಲುವ ಪ್ರಯತ್ನ ಮಾಡಿತ್ತು. ಆದರೆ, ವಿವಾದ ತಣ್ಣಗಾಗುವ ಸೂಚನೆ ಸಿಗದ ಹಿನ್ನಲೆಯಲ್ಲಿ ಸ್ವತಃ ಸಮಾಜ ಕಲ್ಯಾಣ ಇಲಾಖೆಯೇ ಮೆತ್ತಗಾಗಿದೆ. ಇದರಿಂದಾಗಿ "ಧೈರ್ಯವಾಗಿ ಪ್ರಶ್ನಿಸಿ" ಎನ್ನುವ ಸಾಲಿಗೆ ಕತ್ತರಿ ಬಿದ್ದಿದ್ದು, ಹಿಂದಿದ್ದ ಕೈ ಮುಗಿದು ಒಳಗೆ ಬಾ ಸಾಲನ್ನು ಯಥಾವತ್ ಸೇರ್ಪಡೆ ಮಾಡಲಾಗಿದೆ. ಮತ್ತೆ ಕುವೆಂಪುರವರ ಸಾಲನ್ನೇ ಮುಂದುವರೆಸಲು ಆದೇಶ ನೀಡಲಾಗಿದೆ.

ವಸತಿ ಶಾಲೆಗಳಲ್ಲಿ ಮತ್ತೆ ಎಂದಿನಂತೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಘೋಷ ವಾಕ್ಯ ಬರೆಸುವಂತೆ ಇಲಾಖೆ ಆದೇಶ ನೀಡಿದೆ. ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂಬ ಘೋಷ ವಾಕ್ಯ ಮರು ತಿದ್ದುಪಡಿ ಮಾಡಲಾಗಿದೆ. ಮತ್ತೆ ಎಂದಿನಂತೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂದು ಬರೆಯಲು ಆದೇಶವನ್ನು ಸ್ವತಃ ಐಎಎಸ್‌ ಅಧಿಕಾರಿಯೇ ನೀಡಿದ್ದಾರೆ.

ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ ಸರ್ಕಾರ! ಜ್ಞಾನದೇಗುಲದಲ್ಲೇ ಹೊತ್ತಿಕೊಳ್ತು ಮತ್ತೊಂದು ಕಿಡಿ!

ಈ ಹಿಂದೆ ವಾಟ್ಸ್‌ಆಪ್‌ನಲ್ಲಿ ಆದೇಶ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್, ಈ ಬಾರಿ ಟೆಲಿಗ್ರಾಮ್‌ನಲ್ಲಿನ ಗ್ರೂಪ್‌ನಲ್ಲಿ ಸಂದೇಶ ನೀಡಿದ್ದು, ಹಿಂದಿದ್ದ ಸಾಲುಗಳನ್ನೇ ಮರಳಿ ಬರೆಯಲು ಸೂಚನೆ ನೀಡಿದ್ದಾರೆ. ಮಣಿವಣ್ಣನ್ ಆದೇಶದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಹಾವೇರಿ ತಾಲೂಕು ನೆಗಳೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಘೋಷ ವಾಕ್ಯ ತಿದ್ದುಪಡಿ ಮಾಡಲಾಗಿದೆ. "ಧೈರ್ಯವಾಗಿ ಪ್ರಶ್ನಿಸಿಗೆ ಬಿಳಿ ಬಣ್ಣ ಬಳಿಸಿ ಮೊರಾರ್ಜಿ ಶಾಲೆ ಪ್ರಿನ್ಸಿಪಾಲ್ ಬಣಕಾರ್ ತಿದ್ದುಪಡಿ ಮಾಡಿಸಿದ್ದಾರೆ.

ಶಾಲೆಗಳಲ್ಲಿ ‘ಕೈಮುಗಿದು ಬನ್ನಿ’ ಬದಲು ‘ಪ್ರಶ್ನಿಸಿ’ ವಿವಾದಕ್ಕೆ ಪ್ರೇರಣೆ ಯಾರು?