ಬೆಂಗಳೂರು(ಜು.13): ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದ ಯಲಹಂಕ ಜನರಲ್‌ ಆಸ್ಪತ್ರೆಯಲ್ಲಿ ‘ರ‍್ಯಾಪಿಡ್  ಆ್ಯಂಟಿಜೆನ್‌ ಟೆಸ್ಟ್‌ ’ ಹಾಗೂ ಬೂತ್‌ ಮಟ್ಟದ ಟಾಸ್ಕ್‌ ಫೋರ್ಸ್‌ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭಾನುವಾರ ಚಾಲನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಸಚಿವರು, ‘ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಸದಸ್ಯರನ್ನು ರ‍್ಯಾಪಿಡ್ ಟೆಸ್ಟ್‌ಗೆ ಒಳಪಡಿಸಲು ಟಾಸ್ಕ್‌ ಫೋರ್ಸ್‌ ರಚಿಸಲಾಗಿದೆ. ಈ ಪರೀಕ್ಷೆಯಿಂದ ಕೇವಲ 20 ನಿಮಿಷದಲ್ಲಿ ಫಲಿತಾಂಶ ಕೈಸೇರಲಿದೆ. ಇದರಿಂದ ಸೋಂಕಿತರನ್ನು ಸುಲಭವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಾಯವಾಗಲಿದೆ. ಈ ಪರೀಕ್ಷೆಗೆ ಯಾವುದೇ ಆಧುನಿಕ ಪ್ರಯೋಗಾಲಯದ ಅಗತ್ಯವಿಲ್ಲ. ಟಾಸ್ಕ್‌ ಪೋರ್ಸ್‌ ತಂಡ ಮನೆಗಳಿಗೆ ಭೇಟಿ ನೀಡಿದಾಗ ಮೊದಲಿಗೆ 60 ವರ್ಷ ಮೇಲ್ಪಟ್ಟವರು ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರ ಮಾಹಿತಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದರು.

ಕೊರೋನಾ ಚಿಕಿತ್ಸೆ: ಉಲ್ಟಾ ಹೊಡೆದ ಖಾಸಗಿ ಆಸ್ಪತ್ರೆಗಳು

‘ಬೇರೆ ವೈರಾಣುಗಳಿಗೆ ಹೋಲಿಕೆ ಮಾಡಿದರೆ ಕೊರೋನಾ ವೈರಾಣು ತೀವ್ರತೆ ಕಡಿಮೆಯಿದೆ. ಆದರೆ, ಹರಡುವಿಕೆ ಪ್ರಮಾಣ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಲಸಿಕೆ ಸಿಗುವವರೆಗೂ ಇದರಿಂದ ದೂರ ಇರಬೇಕು ಎಂದು ತಿಳಿಸಿದರು.ದೇಶದಲ್ಲಿ ಪ್ರತಿ ಒಂದೂವರೆ ನಿಮಿಷಕ್ಕೆ ಒಬ್ಬ ಕ್ಷಯ ರೋಗಿ ಸಾಯುತ್ತಿದ್ದಾನೆ. ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವಿಲ್ಲ. ಆದರೆ, ಈ ಕೊರೋನಾ ಬಗ್ಗೆ ಜನರಿಗೆ ಭೀತಿ ಹಾಗೂ ಭಯ ಇದೆ. ಈ ಸೋಂಕಿಗೆ ಅಷ್ಟೊಂದು ಆತಂಕ ಪಡುವ ಅಗತ್ಯವಿಲ್ಲ. ಆದರೂ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಿದೆ’ ಎಂದರು.

ಶಾಸಕ ಎಸ್‌.ಆರ್‌.ವಿಶ್ವನಾಥ ಮಾತನಾಡಿ, ‘ಕೆಲ ದಿನಗಳಿಂದ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಲಹಂಕ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂತ್‌ ಮಟ್ಟದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲಾಗಿದೆ. ಇದರಲ್ಲಿ ಮೂರರಿಂದ ಐದು ಮಂದಿಯ ತಂಡಗಳು ಮನೆ ಮನೆಗೆ ತೆರಳಿ ಸದಸ್ಯರ ಸ್ವಾಬ್‌ ಟೆಸ್ಟ್‌ ಮಾಡಲಿದ್ದಾರೆ. ಈ ಕಾರ್ಯಕ್ಕೆ ನಾಗರಿಕರು ಸಹಕರಿಸಬೇಕು. ಈ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಈ ಪರೀಕ್ಷೆ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.