ಸಂತೋಷ್ ಆತ್ಮಹತ್ಯೆ ಪ್ರಕರಣ: ಸಿಎಂ ಕಂಡಲ್ಲೆಲ್ಲಾ ಘೇರಾವ್ ಹಾಕ್ತೀವಿ, ಸುರ್ಜೇವಾಲಾ
* ಮರಣ ಪತ್ರಕ್ಕಿಂತ ಇನ್ನೇನು ಸಾಕ್ಷ್ಯ ಬೇಕು
* ಈ ಕೇಸಲ್ಲಿ ಸಿಎಂ ಯಾರನ್ನೂ ರಕ್ಷಿಸಬಾರದು
* ಈಶ್ವರಪ್ಪ ಜತೆ ಸಿಎಂ ರಾಜೀನಾಮೆ ನೀಡಲಿ
ಬೆಂಗಳೂರು(ಏ.12): ಬಿಜೆಪಿಯದ್ದು ‘40 ಪರ್ಸೆಂಟ್ ಸರ್ಕಾರ’(40 Percent Government) ಎಂಬುದು ಗುತ್ತಿಗೆದಾರ ಸಂತೋಷ್(Santosh Patil) ಆತ್ಮಹತ್ಯೆಯಿಂದ ಸಾಬೀತಾಗಿದ್ದು, ಈ ಬಗ್ಗೆ ಅರಿವಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಮಾತ್ರವಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ(Randeep Surjewala) ಆಗ್ರಹಿಸಿದ್ದಾರೆ. ಅಲ್ಲದೆ, ಈಶ್ವರಪ್ಪ(KS Eshwarappa) ಅವರನ್ನು ಸಂಪುಟದಿಂದ ವಜಾಗೊಳಿಸದಿದ್ದರೆ ಮುಖ್ಯಮಂತ್ರಿ ಕಂಡಲ್ಲೆಲ್ಲಾ ಘೇರಾವ್ ಹಾಕುವುದಾಗಿಯೂ ಎಚ್ಚರಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ(BJP Government) ಅಡಿಯಿಂದ ಮುಡಿವರೆಗೂ ಭ್ರಷ್ಟಾಚಾರದಲ್ಲಿ(Corruption) ಮುಳುಗಿದೆ. ಗುತ್ತಿಗೆದಾರರು ಈ ಸರ್ಕಾರದ ವಿರುದ್ಧ ಮಾಡಿರುವ 40 ಪರ್ಸೆಂಟ್ ಕಮಿಷನ್(40 Percent Commission) ಆರೋಪವೇ ಇದಕ್ಕೆ ಸಾಕ್ಷಿ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಈ ಸರ್ಕಾರದಲ್ಲಿರುವ ಎಲ್ಲ ಸಚಿವರೂ ಕಳಂಕಿತರೇ ಎಂದರು. ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿ ಬಂದಾಗ ಬೊಮ್ಮಾಯಿ(Basavaraj Bommai) ಅವರು ಮೌನಕ್ಕೆ ಶರಣಾದರು, ಅಮಿತ್ ಶಾ(Amit Shah) ಅವರು ಕ್ರಮ ಕೈಗೊಳ್ಳಲು ನಿರಾಕರಿಸಿದರು.
ಈಶ್ವರಪ್ಪ ತಲೆದಂಡ ಫಿಕ್ಸ್? ವಾಟ್ಸಪ್ ಮೆಸೇಜ್ ಬಗ್ಗೆ ಸಚಿವರಿಗೆ ಅನುಮಾನ!
ಪ್ರಧಾನ ಮಂತ್ರಿಗಳಂತೂ ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಬಿಜೆಪಿ ಕಾರ್ಯಕರ್ತರೇ ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ಬಂದಿದೆ. ಪ್ರಕರಣ ಸಂಬಂಧ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ, ಅವರ ವಿರುದ್ಧ ಕೊಲೆ ಮತ್ತು ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಡಿಜಿಪಿ ಬದುಕಿದ್ದರೆ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲಿ: ಡಿಕೆಶಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್‌ನೋಟ್‌ನಲ್ಲಿ(Deathnote) ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕಿತ್ತು. ಸರ್ಕಾರ ಹಿಂಜರಿಯುತ್ತಿದೆ. ಹೀಗಾಗಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬದುಕಿದ್ದರೆ ಕೂಡಲೇ ಈಶ್ವರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತನ್ನ ಸಾವಿಗೆ ಕಾರಣ ಯಾರು ಎಂಬುದನ್ನು ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಕೂಡಲೇ ಆರೋಪಿತ ಸಚಿವ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಅವರು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅವರ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ ಹಾಗೂ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು. ಮುಖ್ಯಮಂತ್ರಿ ಅವರು ಇಂತಹ ಪ್ರಕರಣದಲ್ಲಿ ಯಾರನ್ನೂ ರಕ್ಷಿಸಬಾರದು ಎಂದು ಆಗ್ರಹಿಸಿದರು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಅನೇಕ ಸಚಿವರುಗಳ ರಾಜೀನಾಮೆ ಪಡೆಯಲಾಗಿದೆ. ಇದು ಕೇವಲ ಆತ್ಮಹತ್ಯೆ ಪ್ರಕರಣವಲ್ಲ. ಇದೊಂದು ಕೊಲೆ ಪ್ರಕರಣ ಹಾಗೂ ಭ್ರಷ್ಟಾಚಾರ ಪ್ರಕರಣ ಎಂದರು.
ಈ ಸಾವಿಗೆ ಕಾರಣ ಏನು ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. 40% ಕಮಿಷನ್ ಆರೋಪ ಮಾಡಿರುವುದು ನಾವ್ಯಾರೂ ಅಲ್ಲ. ಗುತ್ತಿಗೆದಾರರ ಸಂಘ, ಗುತ್ತಿಗೆದಾರರು ಹಾಗೂ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಈ ಆರೋಪ ಮಾಡಿದ್ದಾರೆ ಎಂದರು. ಹೀಗಾಗಿ ರಾಜ್ಯದಲ್ಲಿ ಕಾನೂನನ್ನು ಯಾವ ರೀತಿ ಜಾರಿಗೆ ತರಲಾಗುತ್ತದೆ ಎಂಬುದಷ್ಟೇ ಈಗ ಸರ್ಕಾರದ ಮುಂದೆ ಉಳಿದಿರುವ ವಿಚಾರ ಎಂದರು.
ಕೊಲೆ ಕೇಸು ಹಾಕಿ ಈಶ್ವರಪ್ಪ ಬಂಧಿಸಿ: ಸಿದ್ದು
ಗುತ್ತಿಗೆದಾರ ಸಂತೋಷ್ ಪಾಟೀಲ್ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ನೇರ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಕೂಡಲೇ ಸಂಪುಟದಿಂದ ವಜಾಗೊಳಿಸಿ, ಕೊಲೆ ಕೇಸು ದಾಖಲಿಸಿ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಆಗ್ರಹಿಸಿದ್ದಾರೆ.
ಸಂತೋಷ್ ಲೀಡರ್‌ಗಳ ಜೊತೆ ಇರುವ ಫೋಟೋಗಳಿವೆ, ತನಿಖೆಯಾಗಲಿ: ಲಕ್ಷ್ಮೀ ಹೆಬ್ಬಾಳ್ಕರ್
ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಚಿವ ಈಶ್ವರಪ್ಪ ಅವರಿಗೆ ಕಮಿಷನ್ ನೀಡಿ ರಸ್ತೆ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದರು. ಆದರೆ ಈಶ್ವರಪ್ಪ ಅವರು ಹೆಚ್ಚು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಹಣ ಹೊಂದಿಸಲು ಸಾಧ್ಯವಾಗದೆ ಮನನೊಂದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಈಶ್ವರಪ್ಪನೇ ಕಾರಣ ಎಂದು ಸಂತೋಷ್ ಡೆತ್ ನೋಡ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರಣ ಪತ್ರಕ್ಕಿಂತ ಇನ್ನೇನು ಸಾಕ್ಷ್ಯ ಬೇಕು. ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಬಹುದಾದ ಗಂಭೀರ ಪ್ರಕರಣವಿದು. ಹೀಗಾಗಿ ಕೂಡಲೇ ಈಶ್ವರಪ್ಪ ವಿರುದ್ಧ ಕೊಲೆ ಕೇಸು ದಾಖಲಿಸಿ ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಗೃಹ ಸಚಿವರಾಗಿದ್ದ ಕೆ.ಜೆ.ಜಾಜ್‌ರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಈಶ್ವರಪ್ಪ ಅವರ ವಿರುದ್ಧ ಕೊಲೆ ಹಾಗೂ ಭ್ರಷ್ಟಾಚಾರ ಎರಡು ರೀತಿಯ ಆರೋಪಗಳು ಬಂದಿವೆ. ಅಲ್ಲದೆ, ಈಶ್ವರಪ್ಪ ಎಷ್ಟುದೊಡ್ಡ ಭ್ರಷ್ಟಎಂದು ಇಡೀ ರಾಜ್ಯಕ್ಕೆ ಗೊತ್ತಿದೆ. ಈಗ ಅವರು ಕೊಲೆ ಹಾಗೂ ಭ್ರಷ್ಟಾಚಾರ ಆರೋಪ ಹೊತ್ತಿರುವ ವ್ಯಕ್ತಿ. ಅವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸದೇ ಹೋದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.