ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯನ್ನು ಶುಕ್ರವಾರ ಪುನರಾರಂಭ ಮಾಡಲಾಗಿದೆ. ಸಂಜೆಯ ವೇಳೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಫೆಯ ಮಾಲೀಕರಾದ ರಾಘವೇಂದ್ರ ರಾವ್ ಹಾಗೂ ದಿವ್ಯಾ ರಾವ್ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
ಬೆಂಗಳೂರು (ಮಾ.8): ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣವಾದ ಒಂದು ವಾರದ ಬಳಿಕ ಮರಳಿ ಕೆಫೆಯನ್ನು ಆರಂಭ ಮಾಡಲಾಗಿದೆ. ಶುಕ್ರವಾರ ಕೆಫೆಯ ಮಾಲೀಕರಾದ ರಾಘವೇಂದ್ರ ರಾವ್ ಹಾಗೂ ದಿವ್ಯಾ ರಾವ್ ದೊಡ್ಡ ಮಟ್ಟದ ಪೂಜೆ ನಡೆಸುವ ಮೂಲಕ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯನ್ನು ಜನತೆಗೆ ತೆರೆದಿದ್ದಾರೆ. ಈ ವೇಳೆ ಮಾತನಾಡಿದ ಕೆಫೆಯ ಮಾಲೀಕರು, 'ಇದು ವ್ಯಾವಹಾರಿಕ ದ್ವೇಷದ ಘಟನೆಯಲ್ಲ. ವ್ಯಾಪಾರದ ವಿಚಾರದಲ್ಲಿ ಇಂಥ ಘಟನೆಗಳು ಆಗೋದಿಲ್ಲ ಎನ್ನುವುದು ನಮ್ಮ ನಂಬಿಕೆ. ಎನ್ಐಎ ತನಿಖೆ ನಡೀತಾ ಇರುವ ಕಾರಣ ಅದಕ್ಕೆ ಉತ್ತರ ಅವರೇ ಹೇಳುತ್ತಾರೆ. ಇದರ ತನಿಖೆ ನಡೆಸಿ, ಈ ಪ್ರಕರಣದ ಹಿಂದೆ ಇರುವವರನ್ನು ಪತ್ತೆ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ರಾಘವೇಂದ್ರ ರಾವ್ ಮಾತನಾಡಿ, 1ನೇ ತಾರೀಖು ಕಹಿ ಘಟನೆ ಆಯಿತು. ಒಂದು ವಾರಕ್ಕೆ ಮತ್ತೆ ವಾಪಸ್ಸಾಗಿದ್ದೇವೆ. ಎಲ್ಲರೂ ಸಹಕಾರ ನೀಡಿದರು. ಒಬ್ಬರಿಗೆ ತೊಂದರೆ ಆದರೆ, ಎಲ್ಲರೂ ಜೊತೆ ನಿಲ್ಲುವುದು ನಿಜವಾದ ಭಾರತೀಯನ ನಿಜವಾದ ಗುಣ.. ತಳ್ಳುವ ಗಾಡಿಯಿಂದ ಆರಂಭವಾದ ಜರ್ನಿ ಇಲ್ಲಿಗೆ ಬಂದು ನಿಂತಿದೆ ಎಂದು ಹೇಳುವ ಮೂಲಕ ದಿವ್ಯ, ರಾಘವೇಂದ್ರ ದಂಪತಿ ಸಹಾಯಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿದರು.
ನಮ್ಮ ಭಾರತೀಯ ಸಂಸ್ಕೃತಿಯನ್ನ ಇಡೀ ಪ್ರಪಂಚಕ್ಕೆ ತೋರಿಸಲು ನಾವು ಬಿಸಿನೆಸ್ ಶುರು ಮಾಡಿದ್ದೇವೆ.. ನಾವು ಕಷ್ಟದಲ್ಲಿದ್ದಾಗ ಜೊತೆಗೆ ಇದ್ದವರಿಗೆ ಧನ್ಯವಾದ. ಈ ಘಟನೆಯಿಂದ ತೊಂದರೆ ಆಗಿದೆ, ಆದರೆ ಇಂತಹ ಘಟನೆ ನಡೀಬಾರದು. ಆದರೆ, ಒಂದು ಕ್ರಾಂತಿಕಾರಿ ಬೆಳವಣಿಗೆ ಇದು ಬುನಾದಿ. ನಿವೃತ್ತ ಸೇನಾ ಸಿಬ್ಬಂದಿಯನ್ನು ಸೇರಿಸಿ ಹೆಚ್ಚಿನ ಭದ್ರತೆಗೆ ಒತ್ತು ಕೊಡಲಾಗುತ್ತೆ. ಅಂದು ಹೋಟೆಲ್ ನಲ್ಲಿದ್ದ ಕೆಲಸಗಾರರು ನಮ್ಮೊಟ್ಟಿಗೆ ಇದ್ದಾರೆ. ಘಟನೆಯಿಂದ ಕಂಗೆಡದೇ ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಿದ್ದರು. ನಂತರ ನಿಮ್ಮೊಂದಿಗೆ ಇರ್ತೇವೆ ಅಂತ ಜೊತೆಗಿದ್ದಾರೆ. ಯಾರೋಬ್ಬರೂ ಕೆಲಸ ಬಿಟ್ಟಿಲ್ಲ, ಎಲ್ಲರೂ ನಮ್ಮ ಜೊತೆ ಇದ್ದಾರೆ ಎಂದು ವಿವರ ನೀಡಿದರು.
ಎನ್‌ಐಎ ತನಿಖೆ ಮಾಡುತ್ತಿದೆ. ಆರೋಪಿ ಯಾರೇ ಆಗಿದ್ದರೂ ಅವರನ್ನ ಹಿಡಿತಾರೆ ಅನ್ನೋ ನಂಬಿಕೆ ಇದೆ. ಎನ್ಐಎ ಒಂದು ಅತ್ಯುತಮ ತನಿಖಾ ಸಂಸ್ಥೆ. ಈ ಸಂಸ್ಥೆಯ ಮೇಲೆ ನಮಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಸದ್ಯದಲ್ಲೇ ದೇಶಾದ್ಯಂತ ನಮ್ಮ ಬ್ರಾಚ್ ಆರಂಭ ಮಾಡುತ್ತಿದ್ದೇವೆ, ಜೊತೆಗೆ ಸಿಂಗಾಪುರ್, ಯುಎಸ್ಎ ಮತ್ತು ದುಬೈ ನಲ್ಲಿಯೂ ಕೂಡ ನಮ್ಮ ಬ್ರಾಂಚನ್ನ ಸದ್ಯದಲ್ಲೆ ಆರಂಭಿಸುವ ಯೋಜನೆ ಇದೆ.. ನಮ್ಮ ದಕ್ಷಿಣ ಭಾರತ ಆಹಾರ ಸಂಸ್ಕೃತಿಯನ್ನ ಗ್ಲೋಬಲ್ ಲೆವೆಲ್ ನಲ್ಲಿ ವಿಸ್ತರಣೆ ಮಾಡುವ ಯೋಜನೆ ಇದೆ ಎಂದು ರಾಘವೇಂದ್ರ ರಾವ್ ಹೇಳಿದ್ದಾರೆ.
ಮಹಿಳೆ ದಿನಾಚರಣೆ ಹಿನ್ನಲೆ ಪತ್ನಿಗೆ ಶುಭಾಶಯ ಕೋರುವ ಮೂಲಕ ರಾಘವೇಂದ್ರ ರಾವ್ ಮಾತು ಆರಂಭಿಸಿದ್ದರು. ಪೊಲೀಸರು, ಸರ್ಕಾರ ಸೇರಿ ಎಲ್ಲರಿಗೂ ಈ ವೇಳೆ ಧನ್ಯವಾದ ಹೇಳಿದ್ದಾರೆ. ಘಟನೆ ನಿಜವಾದ ಭಾರತೀಯರ ಧೈರ್ಯ ವನ್ನ ಕುಗ್ಗಿಸಲು ಸಾಧ್ಯವಿಲ್ಲ. ನಾಳೆ ಬೆಳಿಗ್ಗೆಯಿಂದ ಗ್ರಾಹಕರಿಗೆ ಆಗಮನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
