Owner raghavendra rao Reaction ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್, ತಮ್ಮ ಕುಂದಲಹಳ್ಳಿ ಕೆಫೆಯಲ್ಲಿ ಆಗಿರುವ ಬ್ಲಾಸ್ಟ್ ಬಗ್ಗೆ ಮಾತನಾಡಿದ್ದು, ಮುಂದಿನ ಶಿವರಾತ್ರಿಯಿಂದ ಕೆಫೆ ಮತ್ತೆ ಜನರಿಗೆ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು (ಮಾ.2): ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬ್ಲಾಸ್ಟ್ ಬಗ್ಗೆ ಪೊಲೀಸ್ ತನಿಖೆ ತೀವ್ರವಾಗುತ್ತಿದೆ. ವಿವಿಧ ಕೋನಗಳಲ್ಲಿ ತನಿಖೆ ನಡೆಯುತ್ತಿದೆ. ಇದು ಭಯೋತ್ಪಾದಕ ಕೃತ್ಯವೇ? ಅಥವಾ ವ್ಯಾಪಾರ ವೈಷಮ್ಯವೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಈ ನಡುವೆ ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿ ಕೆಫೆಗೆ ಬಂದು ತಿಂಡಿ ತಿಂದು ಬಾಂಬ್ ಇರಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದರ ನಡುವೆ ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್ ಮಾತನಾಡಿದ್ದಾರೆ. 2012ರಲ್ಲಿ ಫುಟ್‌ಪಾತ್‌ನಲ್ಲಿ ಸಣ್ಣದಾಗಿ ಆರಂಭವಾಗಿದ್ದ ಈ ಕೆಫೆ ಇಂದು ದೊಡ್ಡದಾಗಿ ಬೆಳೆದಿದೆ. ನನ್ನ ಬದುಕು ಕಟ್ಟಿಕೊಂಡಿದ್ದೇ ಇದರಿಂದ ಎಂದು ಹೇಳಿದ್ದಾರೆ. 'ರಾಮೇಶ್ವರಂ ಕೆಫೆ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. 2012 ರಲ್ಲಿ ಪುಟ್‌ಪಾತ್‌ನಲ್ಲಿ ಆರಂಭ ಮಾಡಿದ್ದೆ. ಕುಮಾರಪಾರ್ಕ್ ಬಳಿ ಫುಟ್‌ಪಾತ್‌ನಲ್ಲಿ ಸ್ಟಾರ್ಟ್ ಮಾಡಿದ್ದೆವು. ಆಗಿನಿಂದಲೂ ನಮಗೆ ಒಂದಿಲ್ಲ ಒಂದು ಕಷ್ಟ ಬರುತ್ತಿದೆ. ಎಲ್ಲವನ್ನೂ ನಿಭಾಯಿಸಿದ್ದೇವೆ. ನಾನು ನಂಬಿರೋದು ಎಪಿಜೆ ಅಬ್ದುಲ್ ಕಲಾಂ. ಅವರನ್ನೇ ಮಾದರಿಯಾಗಿ ತೆಗೆದುಕೊಂಡು ಈ ಹೋಟೆಲ್ ಪ್ರಾರಂಭ ಮಾಡಿದ್ದೀವಿ' ಎಂದು ಹೇಳಿದ್ದಾರೆ.
ಇವತ್ತು ಇಂದು ದೊಡ್ಡ ಮಟ್ಟದಲ್ಲಿ ನಮ್ಮ ಕೆಫೆ ಬೆಳೆದು ನಿಂತಿದೆ. 2 ಸಾವಿರ ಮಂದಿ ಉದ್ಯೋಗಿಗಳು ನಮ್ಮಲ್ಲಿದ್ದಾರೆ. ಶುಕ್ರವಾರ ಆದ ಘಟನೆಯನ್ನ ಭಾರತಿಯರೆಲ್ಲರೂ ಖಂಡಿಸಬೇಕು. ಇದೆಲ್ಲ ಲೈಫ್‌ನಲ್ಲಿ ಎದುರಾಗೋ ಗುಂಡಿಗಳು ಇದ್ದ ಹಾಗೆ. ಮುಂದಿನ ಶುಕ್ರವಾರ ಶಿವರಾತ್ರಿಯಂದು ಕೆಫೆ ಮರಳಿ ಓಪನ್ ಆಗಲಿದೆ. ರಾಮೇಶ್ವರಂ ಕೆಫೆ ಮತ್ತೆ ಪುನರ್ಜನ್ಮ ತಾಳುತ್ತೆ. ಎಲ್ಲರನ್ನೂ ನಾನು ಆಹ್ವಾನಿಸುತ್ತಿದ್ದೇನೆ. ಇದಕ್ಕೆ ಎಲ್ಲರ ಸಹಾಯ ಬೇಕು ಎಂದು ಹೇಳಿದ ರಾಘವೇಂದ್ರ ರಾವ್, ನಾನು ಬಡ ಕುಟುಂಬದಿಂದ ಬಂದವನು. ಕೋಲಾರ ನನ್ನ ಮೂಲ ಎಂದು ಹೇಳಿದ್ದಾರೆ.
ಘಟನೆಗೆ ಕಾರಣ ಏನು ಅನ್ನೋದನ್ನು ಪೊಲೀಸರು ತನಿಖೆ ಮಾಡುತ್ತಾರೆ. ಇದು ವ್ಯಾಪಾರ ವೈಷಮ್ಯವೇ ಎಂದು ಅವರು ಕೇಳುತ್ತಿದ್ದಾರೆ. ಹೋಟೆಲ್ ನ ಪ್ರತಿಯೊಬ್ಬನು ಅಣ್ಣತಮ್ಮಂದಿರ ರೀತಿ. ಈ ಹಿಂದೆ ಬಸವೇಶ್ವರ ನಗರ ಠಾಣೆಗೆ ಮಾಹಿತಿ ನೀಡಿದ್ದೆವು. ಕ್ರೌಡ್ ಇದ್ದ ಕಾರಣಕ್ಕೆ ಆ ಬ್ಯಾಗ್ ಯಾರದ್ದು ಅಂತ ಗೊತ್ತಾಗಿಲ್ಲ. ಇಲ್ಲ ಎಂದಿದ್ದರೆ, ಮಿಸ್ ಆದ ವಸ್ತುವಿನ ಬಗ್ಗೆ ಆಪ್ ನಲ್ಲಿ ಅಪ್ಡೇಟ್ ಮಾಡ್ತಿವಿ. ನಮ್ಮ ಗಮನಕ್ಕೆ ಏನೇ ಬಂದರೂ ಪೊಲೀಸರ ಗಮನಕ್ಕೆ ತರುತ್ತಿದ್ದೆವು. ಪೊಲೀಸರು ಮೆಟಲ್ ಡಿಟೆಕ್ಟರ್ ಇಟ್ಕೊಳಿ ಅಂತ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನೂ ಅಳವಡಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಶಂಕಿತ ಬಸ್‌ನಲ್ಲಿ ಬಂದ ಸುಳಿವು ಸಿಕ್ಕಿದ್ದು, ಸ್ಫೋಟದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು: ಸಿಎಂ
ಬೆಂಗಳೂರಿನಲ್ಲಿ 4 ಬ್ರಾಂಚ್ ಹೊಂದಿದ್ದೀವೆ. ಹೈದರಾಬಾದ್ ನಲ್ಲಿ ಒಂದು ಬ್ರಾಂಚ್ ಇದೆ. ಭಾರತದ ಎಲ್ಲಾ ರಾಜ್ಯದಲ್ಲಿ ಬ್ರಾಂಚ್ ಮಾಡುವ ಪ್ಲ್ಯಾನ್ ಇದೆ. ಗಾಯಾಳುಗಳ ಜೊತೆ ನಾವಿದ್ದೇವೆ. ಸರ್ಕಾರವು ಚಿಕಿತ್ಸೆ ನೀಡೋದಾಗಿ ಹೇಳಿದೆ ಎಂದು ರಾಘವೇಂದ್ರ ರಾವ್ ತಿಳಿಸಿದ್ದಾರೆ.
