Asianet Suvarna News Asianet Suvarna News

Rameshwaram cafe Blast: ಬೆಂಗಳೂರು, ಹುಮ್ನಾಬಾದ್‌ ಬಸ್‌ ಸಿಸಿಟೀವೀಲಿ ಕೆಫೆ ಬಾಂಬರ್‌ ಸೆರೆ!

  ರಾಮೇಶ್ವರ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಅಧಿಕಾರಿಗಳಿಗೆ ಈಗ ಆತನ ಚಲನವಲನಗಳ ಸಂಬಂಧ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಲಭಿಸಿವೆ.

Rameshwaram cafe Blast accused foundkk in bengaluru humnabada Bus cctv rav
Author
First Published Mar 8, 2024, 4:24 AM IST

ಬೆಂಗಳೂರು/ಬಳ್ಳಾರಿ (ಮಾ.8) :  ರಾಮೇಶ್ವರ ಕೆಫೆ ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಅಧಿಕಾರಿಗಳಿಗೆ ಈಗ ಆತನ ಚಲನವಲನಗಳ ಸಂಬಂಧ ಮತ್ತಷ್ಟು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಲಭಿಸಿವೆ.

ಶಂಕಿತ ವ್ಯಕ್ತಿ ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಬೆಂಗಳೂರು ನಗರದಲ್ಲಷ್ಟೇ ಅಲ್ಲದೆ ರಾಜ್ಯ, ಹೊರರಾಜ್ಯಗಳ ವಿವಿಧ ಭಾಗಗಳಲ್ಲಿ ಸಂಚರಿಸಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಪೊಲೀಸರಿಗೆ ದಾರಿ ತಪ್ಪಿಸುವ ಸಲುವಾಗಿ ಕಸರತ್ತು ನಡೆಸಿರುವ ಸಾಧ್ಯತೆಯಿದೆ. ಇದೀಗ ತನಿಖಾಧಿಕಾರಿಗಳು ಆತ ಓಡಾಡಿರುವ ದಾರಿಯಲ್ಲಿ ಸಂಚರಿಸಿ ವಿವರ ಸಂಗ್ರಹಿಸುತ್ತಿದ್ದಾರೆ.

ಬೆಂಗಳೂರು: ಹಣಕ್ಕಾಗಿ ಪೋರ್ನ್ ವಿಡಿಯೋ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

ಬಾಂಬ್ ಇಡುವ ಸಲುವಾಗಿ ಮಾ.1ರಂದು ಕುಂದಲಹಳ್ಳಿಯ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಶಂಕಿತ ವ್ಯಕ್ತಿಯ ದೃಶ್ಯವು ಆ ಬಸ್ಸಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಆ ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದನ್ನು ನೋಡಿದ ಕೂಡಲೇ ಭೀತಿಗೊಳ್ಳುವ ಆತ, ತಕ್ಷಣವೇ ಬಸ್ಸಿನಿಂದಿಳಿದು ಬೇರೊಂದು ಬಸ್ ಹತ್ತಿದ್ದಾನೆ ಎನ್ನಲಾಗಿದೆ. ಇದೀಗ ಬಸ್ಸಿನಲ್ಲಿದ್ದ ಶಂಕಿತನ ದೃಶ್ಯಾವಳಿ ಬಹಿರಂಗವಾಗಿದೆ.

ಬಳಿಕ ಕಾಡುಗೋಡಿ ಕಡೆಯಿಂದ ಬಿಎಂಟಿಸಿ ಬಸ್ಸಿನಲ್ಲಿ ಕುಂದಲಹಳ್ಳಿ ಕಾಲೋನಿಗೆ ನಿಲ್ದಾಣಕ್ಕೆ ಶಂಕಿತ ಬಂದಿಳಿದಿದ್ದಾನೆ. ಬಸ್‌ ನಿಲ್ದಾಣದಿಂದ ಕೂಗಳತೆ ದೂರದಲ್ಲಿದ್ದ ಕೆಫೆಗೆ ತೆರಳಿ ಆತ ಬಾಂಬ್ ಇಟ್ಟು ಪರಾರಿಯಾಗಿದ್ದಾನೆ. ಈ ‍ವಿಧ್ವಂಸಕ ಕೃತ್ಯ ಪ್ರಕರಣದ ತನಿಖೆಗಿಳಿದ ಎನ್‌ಐಎ, ಸಿಸಿಬಿ ಹಾಗೂ ವೈಟ್‌ಫೀಲ್ಡ್‌ ವಿಭಾಗದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆತನ ಚಲನವಲನದ ದೃಶ್ಯಾವಳಿಗಳು ಪತ್ತೆಯಾಗಿದ್ದವು. ಇವುಗಳ ಪರಿಶೀಲನೆ ವೇಳೆ ಆತ ಬಿಎಂಟಿಸಿ ಬಸ್ಸಿನಲ್ಲಿ ಆಗಮಿಸಿರುವ ವಿಷಯ ತಿಳಿಯಿತು. ಕೂಡಲೇ ಜಾಗ್ರತರಾದ ಪೊಲೀಸರು, ಕಾಡುಗೋಡಿ-ಕುಂದಲಹಳ್ಳಿ ಮಾರ್ಗದ ಸುಮಾರು 14ಕ್ಕೂ ಹೆಚ್ಚಿನ ಬಿಎಂಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಆತನ ಓಡಾಟದ ದೃಶ್ಯ ಸಿಕ್ಕಿದೆ ಎಂದು ತಿಳಿದು ಬಂದಿದೆ.

ಹೂಡಿ ಮಸೀದಿಯಲ್ಲಿ ವಸ್ತ್ರ ಬದಲಾವಣೆ:

ಕೆಫೆಯಲ್ಲಿ ಬಾಂಬ್ ಇಟ್ಟು ಅಲ್ಲಿಂದ ತೆರಳಿದ ಬಳಿಕ ಶಂಕಿತ ವ್ಯಕ್ತಿ, ಕುಂದಲಹಳ್ಳಿ ಸಮೀಪದ ಹೂಡಿ ಮಸೀದಿಗೆ ತೆರಳಿ ಬಟ್ಟೆ ಬದಲಾಯಿಸಿದ್ದಾನೆ. ಆ ಮಸೀದಿಯಲ್ಲಿ ತಾನು ಧರಿಸಿದ್ದ ಟೋಪಿ ಹಾಗೂ ಶರ್ಟ್‌ ಬದಲಾಯಿಸಿ ತೆರಳಿದ್ದಾನೆ ಎನ್ನಲಾಗಿದೆ.

ಬಳ್ಳಾರಿಯಲ್ಲಿ ಮಾಹಿತಿ ಸಂಗ್ರಹ:

ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಗುರುವಾರ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ.

ಸ್ಫೋಟ ಬಳಿಕ ಶಂಕಿತ ಆರೋಪಿ ತುಮಕೂರು ಮೂಲಕ ಬಳ್ಳಾರಿಗೆ ಬಂದಿದ್ದು, ಅಲ್ಲಿಂದ ಮಂತ್ರಾಲಯ, ಗೋಕರ್ಣ ಮೂಲಕ ಭಟ್ಕಳಕ್ಕೆ ತೆರಳಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿದ್ದ ಎನ್‌ಐಎ ಅಧಿಕಾರಿಗಳ ತಂಡ ಬಸ್ ನಿಲ್ದಾಣದ ಬಳಿಯ 10ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದಿದೆ. ಬಾಂಬ್ ಸ್ಫೋಟ ನಡೆದ ಮೊದಲ ದಿನದಿಂದ ಈವರೆಗಿನ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಬಸ್ ಕಂಡಕ್ಟರ್‌ಗಳು ಹಾಗೂ ಸಾರ್ವಜನಿಕರನ್ನೂ ಮಾತನಾಡಿಸಿ ಮಾಹಿತಿ ಕಲೆಹಾಕಿದ್ದಾರೆ.

ತುಮಕೂರಿನ ಬಸ್ ನಿಲ್ದಾಣದಲ್ಲಿ ಮಾಹಿತಿ ಸಂಗ್ರಹಿಸಿ ಬುಧವಾರ ರಾತ್ರಿಯೇ ಬಳ್ಳಾರಿಗೆ ಆಗಮಿಸಿದ್ದ ಐಎನ್‌ಎ ಅಧಿಕಾರಿಗಳು ಗುರುವಾರ ಸಂಜೆಯವರೆಗೂ ಪರಿಶೀಲನಾ ಕಾರ್ಯ ನಡೆಸಿ, ಮಾಹಿತಿ ಕಲೆ ಹಾಕಿದರು. ಇದೇ ವೇಳೆ ಶಂಕಿತ ಆರೋಪಿ ನಗರದ ಯಾರನ್ನಾದರೂ ಸಂಪರ್ಕಿಸಿದ್ದನೇ ಅಥವಾ ನೇರವಾಗಿ ಬಳ್ಳಾರಿಯಿಂದ ಮಂತ್ರಾಲಯಕ್ಕೆ ತೆರಳಿದನೇ ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಿದರು.

ಈ ಹಿಂದೆ ಬಳ್ಳಾರಿಯಲ್ಲಿ ನಾಲ್ವರು ಶಂಕಿತ ಉಗ್ರರನ್ನು ಎನ್‌ಐಎ ತಂಡ ಬಂಧಿಸಿತ್ತು. ಹೀಗಾಗಿ ಶಂಕಿತ ಆರೋಪಿ ಬಳ್ಳಾರಿಯ ಜತೆ ನಂಟು ಹೊಂದಿರಬಹುದೇ ಎಂಬ ಗುಮಾನಿಯಿದ್ದು, ಗುರುವಾರ ಸಂಜೆ 6 ಗಂಟೆವರೆಗೂ ಬಳ್ಳಾರಿಯಲ್ಲಿಯೇ ಉಳಿದ ಅಧಿಕಾರಿಗಳು, ಶಂಕಿತ ಆರೋಪಿಯ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು. ಬಳ್ಳಾರಿ ಹಾಗೂ ತುಮಕೂರು ಪೊಲೀಸರು ಇವರಿಗೆ ಸಾಥ್ ನೀಡಿದರು.

ಹುಮಾನಬಾದ್ ಬಸ್ಸಿನಲ್ಲಿ ಶಂಕಿತ:

ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಬೆಂಗಳೂರು ತೊರೆದು ತುಮಕೂರು ಹಾಗೂ ಬೀದರ್ ಜಿಲ್ಲೆಗಳ ಮೂಲಕ ಮಹಾರಾಷ್ಟ್ರದ ಪುಣೆಗೆ ಶಂಕಿತ ವ್ಯಕ್ತಿ ತೆರಳಿದ್ದಾನೆ ಎನ್ನಲಾಗಿದೆ. ಈಗ ಬೆಂಗಳೂರು-ಹುಮನಾಬಾದ್‌ ಬಸ್ಸಿನಲ್ಲಿ ಆತ ಪ್ರಯಾಣಿಸುವಾಗ ಟೋಲ್‌ವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

ರಾಜ್ಯದಲ್ಲಿ ಈ ಬೇಸಗೆಗೆ ಭಾರೀ ತಾಪಮಾನ ಹೆಚ್ಚಳ! ಐಎಂಡಿ ವಿಜ್ಞಾನಿ ಹೇಳಿದ್ದೇನು?

ರೇಖಾಚಿತ್ರ ರಚಿಸಿದ ಕಲಾವಿದ 

ಬಾಂಬ್‌ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಸಿಸಿಟಿವಿ ಕ್ಯಾಮೆರಾ ಆಧರಿಸಿದ ಭಾವಚಿತ್ರವನ್ನು ಎನ್‌ಐಎ ಬಿಡುಗಡೆಗೊಳಿಸಿದ ಬೆನ್ನಲ್ಲೇ ಆ ಭಾವಚಿತ್ರ ಆಧರಿಸಿ ಕಲಾವಿದರೊಬ್ಬರು ಶಂಕಿತನ ವಿವಿಧ ಬಗೆಯ ರೇಖಾಚಿತ್ರ ರಚಿಸಿದ್ದಾರೆ. ಕಲಾವಿದ ಹರ್ಷ ರೇಖಾ ಚಿತ್ರ ರಚಿಸಿದ್ದು, ತನಿಖೆಗೆ ಅನುಕೂಲವಾಗುವ ದೃಷ್ಟಿಯಿಂದ ರೇಖಾಚಿತ್ರ ರಚಿಸಿದ್ದಾಗಿ ಎಕ್ಸ್‌ ತಾಣದಲ್ಲಿ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಈ ರೇಖಾಚಿತ್ರವನ್ನು ಎಕ್ಸ್‌ ತಾಣದಲ್ಲಿ ಎನ್‌ಐಎ ಹಾಗೂ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಅಗತ್ಯವಿದ್ದರೆ ತನಿಖೆಗೆ ಬಳಸಿಕೊಳ್ಳಿ ಎಂದು ಹರ್ಷ ಕೋರಿದ್ದಾರೆ.

Follow Us:
Download App:
  • android
  • ios