ಬೆಂಗಳೂರು (ಮಾ.13):  ರಾಸಲೀಲೆ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಎರಡು ದಿನದಲ್ಲಿ ಅಧಿಕೃತವಾಗಿ ದೂರು ಸಲ್ಲಿಕೆ ಮಾಡುವ ಸಾಧ್ಯತೆ ಇದ್ದು, ಎಸ್‌ಐಟಿ ವಿಚಾರಣೆಗೆ ಸಹಕಾರ ನೀಡಲು ಮುಂದಾಗಿದ್ದಾರೆ.

ತಮ್ಮ ವಿರುದ್ಧ ಷಡ್ಯಂತ್ರ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ರಮೇಶ್‌ ಜಾರಕಿಹೊಳಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಅಧಿಕೃತವಾಗಿ ದೂರು ನೀಡಿಲ್ಲ. ದೂರು ನೀಡಿದಲ್ಲಿ ವಿಚಾರಣೆಗೆ ಸಹಕಾರಿಯಾಗಲಿದೆ. ಹೀಗಾಗಿ, ಸೋಮವಾರದ ಹೊತ್ತಿಗೆ ಅಧಿಕೃತವಾಗಿ ದೂರು ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಸಲೀಲೆ ಸಿಡಿ ವಿವಾದ: ಕನಕಪುರದಲ್ಲಿ ಯುವತಿ ಸೇರಿದಂತೆ ಐವರು ಬಲೆಗೆ! ..

ಸೀಡಿ ಸಿದ್ಧಪಡಿಸಲು ಪ್ರಮುಖ ಪಾತ್ರ ವಹಿಸಿದವರ ಹೆಸರುಗಳನ್ನು ದೂರಿನಲ್ಲಿ ಪ್ರಸ್ತಾಪಿಸಲು ತೀರ್ಮಾನಿಸಿರುವ ಅವರು, ದೂರಿನಲ್ಲಿ ದಾಖಲಿಸಬೇಕಾದ ಹೆಸರುಗಳ ಬಗ್ಗೆ ದಾಖಲೆ ಸಂಗ್ರಹ ಮಾಡುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಕೆಲವರನ್ನು ವಶಕ್ಕೆ ಪಡೆದಿದ್ದು, ಅವರ ಬಗ್ಗೆಯೂ ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದಾರೆ.

ಸೋಮವಾರ ನಂತರ ದೂರು- ಬಾಲಚಂದ್ರ:  ಈ ನಡುವ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ ಅವರ ಸಹೋದರರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ, ಸೀಡಿ ಷಡ್ಯಂತ್ರದ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡ ಇದೆ. ಹೀಗಾಗಿ ದೂರು ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಆದರೆ, ಸೋಮವಾರದ ನಂತರ ದೂರು ನೀಡಲಾಗುವುದು. ಷಡ್ಯಂತ್ರದ ಹಿಂದಿರುವವರ ಹೆಸರುಗಳನ್ನು ಸಹ ದೂರಿನಲ್ಲಿ ನಮೂದಿಸಲಾಗುವುದು. ಆದರೆ, ಯಾವ ರೀತಿಯಲ್ಲಿ ಕಾನೂನು ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘2+4+3 ತಂಡದಲ್ಲಿ ಯಾರಿದ್ದಾರೆ ಎಂಬುದು ಗೊತ್ತಾದರೆ ತನಿಖೆಯ ಸರಿಯಾದ ಮಾರ್ಗದಲ್ಲಿ ನಡೆಯುತ್ತದೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ಪಾಠ ಕಲಿಸದಿದ್ದರೆ ಯಾರೂ ಸಹ ರಾಜಕಾರಣ ಮಾಡಲು ಸಾಧ್ಯವಿಲ್ಲ. ರಮೇಶ್‌ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾದ ಮೊದಲ ದಿನದಿಂದಲೂ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗಿತ್ತು. ಹನಿಟ್ರ್ಯಾಪ್‌ ಮಾಡಲು ಮೊದಲು ಪ್ರಯತ್ನ ನಡೆಸಲಾಯಿತು. ಆದರೆ, ಪ್ರಯತ್ನ ವಿಫಲವಾದ ನಂತರ ನಕಲಿ ವಿಡಿಯೋ ಮಾಡಲಾಗಿದೆ’ ಎಂದರು.