ಸದನದಲ್ಲಿ ಸೀಡಿ ಕದನ| ನ್ಯಾಯಾಂಗ ತನಿಖೆ, ಜಾರಕಿಹೊಳಿ ವಿರುದ್ಧ ರೇಪ್‌ ಕೇಸ್‌ಗೆ ಕಾಂಗ್ರೆಸ್‌ ಪಟ್ಟು| ಕೋರ್ಟ್‌ನಿಂದ ತಡೆಯಾಜ್ಞೆ ತಂದ 6 ಸಚಿವರ ರಾಜೀನಾಮೆಗೆ ವಿಪಕ್ಷ ಆಗ್ರಹ| ಸದನದಲ್ಲಿ ಸಿದ್ದು ನಿಲುವಳಿ ಸೂಚನೆ| ಸರ್ಕಾರದಿಂದ ಮೂರು ಬೇಡಿಕೆ ತಿರಸ್ಕಾರ

ವಿಧಾನಸಭೆ(ಮಾ.23): ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣ ಕೊನೆಗೂ ಸದನದಲ್ಲಿ ಪ್ರಸ್ತಾಪವಾಗಿದ್ದು, ಈ ಕುರಿತು ಕಾಂಗ್ರೆಸ್‌ ಮಂಡಿಸಿದ ನಿಲುವಳಿ ಸೂಚನೆಯಿಂದ ಸೋಮವಾರ ಸದನದಲ್ಲಿ ಕೋಲಾಹಲ ಉಂಟಾಯಿತು.

ಸಿ.ಡಿ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಆರು ಮಂದಿ ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಕಾಂಗ್ರೆಸ್‌ ಬಲವಾಗಿ ಒತ್ತಾಯಿಸಿತು. ಕಾಂಗ್ರೆಸ್‌ನ ಈ ಮೂರೂ ಪ್ರಮುಖ ಆಗ್ರಹಗಳಿಗೆ ಸರ್ಕಾರ ಸೊಪ್ಪು ಹಾಕದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪರಿಣಾಮ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ನಿಲುವಳಿ ಸೂಚನೆ:

ಸಿ.ಡಿ. ಪ್ರಕರಣದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸದಸ್ಯರು, ಸಿ.ಡಿ. ಪ್ರಕರಣದ ತನಿಖೆಯಲ್ಲಿನ ವೈಫಲ್ಯಗಳನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು.

ಯುವತಿಗೆ ಜೀವಭಯ ಇದ್ದರೂ ಈವರೆಗೂ ಆಕೆಯನ್ನು ಪತ್ತೆಹಚ್ಚಿ ರಕ್ಷಣೆ ನೀಡಲೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಿ.ಡಿ. ಪ್ರಕರಣದ ಆರೋಪಿ ರಮೇಶ್‌ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸದೆ ಯುವತಿ ಹಾಗೂ ವಿಚಾರವನ್ನು ಬಯಲಿಗೆ ತಂದವರ ವಿರುದ್ಧವೇ ಅಧಿಕಾರ ದುರುಪಯೋಗಕ್ಕೆ ಸರ್ಕಾರ ಮುಂದಾಗಿದೆ ಎಂದು ದೂರಿದರು.

ಕೆಲಸ ಕೊಡಿಸುವುದಾಗಿ ಹೇಳಿದ್ದ ರಮೇಶ್‌ ಜಾರಕಿಹೊಳಿ ತಮ್ಮನ್ನು ಬಳಸಿಕೊಂಡಿರುವುದಾಗಿ ಸಿ.ಡಿ. ಪ್ರಕರಣದ ಸಂತ್ರಸ್ತೆ ಆರೋಪಿಸಿದ್ದಾಳೆ. ನಿರ್ಭಯಾ ಕಾನೂನು ಪ್ರಕಾರ ಈಗಾಗಲೇ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕಿತ್ತು. ಸರ್ಕಾರ ಮಾಜಿ ಸಚಿವರನ್ನು ರಕ್ಷಿಸಲು ಮುಂದಾಗಿದ್ದು, ಕೂಡಲೇ ರಮೇಶ್‌ ಜಾರಕಿಹೊಳಿ ವಿರುದ್ಧ ಐಪಿಸಿ ಸೆಕ್ಷನ್‌ 376 ಅಡಿ ಅತ್ಯಾಚಾರದ ಪ್ರಕರಣ ದಾಖಲಿಸಬೇಕು. ಇಡೀ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗಾಗಿ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಅಲ್ಲದೆ, ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿರುವ ಆರು ಜನ ಸಚಿವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಹೀಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಸರ್ಕಾರದ ಪರ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ ನಾಯಕರ ಈ ಬೇಡಿಕೆಗಳನ್ನು ಸಾರಾಸಗಟಾಗಿ ನಿರಾಕರಿಸಿದರು. ಅಲ್ಲದೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಡೆದಿದ್ದ ಮೇಟಿ ಪ್ರಕರಣವನ್ನು ಪ್ರಸ್ತಾಪಿಸಿ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ಕೋರುವ ಹಕ್ಕು ಕಾಂಗ್ರೆಸ್ಸಿಗರಿಗೆ ಎಂದು ಟೀಕಿಸಿದರು. ಈ ಉತ್ತರದಿಂದ ಕ್ರುದ್ಧರಾದ ಕಾಂಗ್ರೆಸ್‌ ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಈ ಸಂದರ್ಭದಲ್ಲಿ ಉಭಯ ಪಕ್ಷಗಳ ಸದಸ್ಯರು ವಾಗ್ವಾದದಲ್ಲಿ ತೊಡಗಿದ್ದರಿಂದ ಭಾರಿ ಗದ್ದಲ ಉಂಟಾಯಿತು. ಹೀಗಾಗಿ ಸ್ಪೀಕರ್‌ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

ಕಾಂಗ್ರೆಸ್‌ ಆರೋಪವೇನು?:

ಮೊದಲಿಗೆ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ರಮೇಶ್‌ ಜಾರಕಿಹೊಳಿ ಪ್ರಕರಣದಿಂದ ರಾಜ್ಯದ ಮಾನ-ಮರ್ಯಾದೆ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ರಮೇಶ್‌ ಜಾರಕಿಹೊಳಿ ಆರೋಪಿಸಿದ್ದಾರೆ. ಆದರೆ, ಸಿ.ಡಿ. ಪ್ರಕರಣದ ಸಂತ್ರಸ್ತೆ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆ ಆಧಾರದ ಮೇಲೆ ರಮೇಶ್‌ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಡಾ.ಕೆ.ಸುಧಾಕರ್‌, ಬಿ.ಸಿ.ಪಾಟೀಲ್‌, ನಾರಾಯಣಗೌಡ, ಎಸ್‌.ಟಿ. ಸೋಮಶೇಖರ್‌, ಅರೆಬೈಲು ಶಿವರಾಮ್‌ ಹೆಬ್ಬಾರ್‌ ಮತ್ತು ಬೈರತಿ ಬಸವರಾಜು ತಮ್ಮ ವಿರುದ್ಧ ಯಾವುದೇ ಆರೋಪ ಇಲ್ಲದಿದ್ದರೂ ತಮ್ಮ ವಿರುದ್ಧ ಯಾವುದೇ ಮಾನಹಾನಿ ಸುದ್ದಿಗಳ ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ. ತಪ್ಪು ಮಾಡಿರುವ ಭಯದಿಂದಲೇ ನ್ಯಾಯಾಲಯದ ಮೊರೆ ಹೋಗಿದ್ದು ಈ ಬಗ್ಗೆ ತನಿಖೆಯಾಗಬೇಕು. ಇವರು ನಿರ್ದೋಷಿಗಳು ಎಂದು ಸಾಬೀತಾಗುವವರೆಗೂ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ. ಹೀಗಾಗಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.