ಬೆಂಗಳೂರು[ಡಿ.01]: ನನ್ನ ನೇತೃ​ತ್ವ​ದಲ್ಲಿ ಕ್ಷಿಪ್ರ​ಕ್ರಾಂತಿ ನಡೆ​ಯ​ಲಿದೆ ಎಂಬ ಸುದ್ದಿ ಬೆನ್ನ ಹಿಂದೆ ಕಾಂಗ್ರೆಸ್‌ನ ಪ್ರಭಾವಿ ನಾಯ​ಕ​ರೊ​ಬ್ಬ​ರಿದ್ದು, ನನ್ನ ಘನ​ತೆಗೆ ಚ್ಯುತಿ ತರಲು ಈ ನಾಯ​ಕರು ಷಡ್ಯಂತ್ರ ನಡೆ​ಸಿ​ದ್ದಾರೆ ಎಂದು ಪೌರಾ​ಡ​ಳಿತ ಸಚಿವ ರಮೇಶ ಜಾರಕಿಹೊಳಿ ಪರೋ​ಕ್ಷ​ವಾಗಿ ಡಿ.ಕೆ.ಶಿವ​ಕು​ಮಾರ್‌ ವಿರುದ್ಧ ಆರೋಪ ಮಾಡಿ​ದ್ದಾರೆ.

ಶುಕ್ರವಾರ ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಆಗುತ್ತಿದೆ. ನನ್ನೊಂದಿಗೆ ಯಾವ ಕಾಂಗ್ರೆಸ್‌ ಶಾಸಕರೂ ಸಂಪರ್ಕದಲ್ಲಿ ಇಲ್ಲ. ನಾನು ಮುಂಬೈ, ಮಹಾರಾಷ್ಟ್ರಕ್ಕೆ ಹೋಗುತ್ತಿದ್ದೇನೆ ಎಂಬುದೆಲ್ಲಾ ಶುದ್ಧ ಸುಳ್ಳು, ನಾನು ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.

ಪಕ್ಷದಲ್ಲಿ ಅಸಮಾಧಾನ ಇದ್ದದ್ದು ಸತ್ಯ. ಆದರೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ನಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಎಲ್ಲವೂ ಬಗೆಹರಿದಿದೆ. ರಾಹುಲ್‌ ಗಾಂಧಿ ಅವರು ಎಲ್ಲ ಸಮಸ್ಯೆ ಬಗೆಹರಿಸಿದ ಬಳಿಕವೂ ಪಕ್ಷ ಬಿಡುವ ಅನಿವಾರ್ಯತೆ ನನಗೆ ಇಲ್ಲ. ಆದರೆ ನನ್ನ ಘನತೆಗೆ ಚ್ಯುತಿ ತರಲು ನಮ್ಮ ಕಾಂಗ್ರೆಸ್‌ ಪಕ್ಷದವರೇ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ಪ್ರಭಾವಿ ನಾಯಕರೊಬ್ಬರು ಈ ಷಡ್ಯಂತ್ರದ ಹಿಂದೆ ಇದ್ದಾರೆ ಎಂದು ಆರೋ​ಪಿ​ಸಿ​ದ​ರು.