ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಿನ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದಾನಿ, ಅಂಬಾನಿ ಸೇರಿದಂತೆ ಸಿರಿವಂತರಿಗೆ ಅನುಕೂಲ ಮಾಡಿಕೊಟ್ಟು ಬಡವರ ಮೇಲೆ ಗಧಾಪ್ರಹಾರ ನಡೆಸಲಾಗುತ್ತಿದೆ.
ಬೆಂಗಳೂರು(ಜು.21): ಕೇಂದ್ರ ಸರ್ಕಾರ ಅದಾನಿ, ಅಂಬಾನಿ ಸೇರಿದಂತೆ ಶ್ರೀಮಂತರಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ಆದರೆ ಬಡವರು ಉಪಯೋಗಿಸುವ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿ ಗಧಾಪ್ರಹಾರ ನಡೆಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ಖಂಡಿಸಿ ಕೋರಮಂಗಲದ ಜಿಎಸ್‌ಟಿ ಕಚೇರಿ ಮುಂದೆ ಬುಧವಾರ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಿನ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದಾನಿ, ಅಂಬಾನಿ ಸೇರಿದಂತೆ ಸಿರಿವಂತರಿಗೆ ಅನುಕೂಲ ಮಾಡಿಕೊಟ್ಟು ಬಡವರ ಮೇಲೆ ಗಧಾಪ್ರಹಾರ ನಡೆಸಲಾಗುತ್ತಿದೆ. ಶ್ರೀಮಂತರಿಗೆ ತೆರಿಗೆ ವಿಧಿಸುತ್ತಿಲ್ಲ. ಆದರೆ ಬಡವರು ದಿನನಿತ್ಯ ಬಳಸುವ ಪದಾರ್ಥಗಳ ಮೇಲೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದು ಜನ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದಿಂದ ರಾಜಕೀಯಕ್ಕಾಗಿ ಎಸಿಬಿ ದುರ್ಬಳಕೆ: ರಾಮಲಿಂಗಾರೆಡ್ಡಿ
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿತ್ತು. ಆದರೆ 2014 ರಲ್ಲಿ ಬಿಜೆಪಿಯವರು ಬಣ್ಣದ ಮಾತುಗಳಿಂದ ಅಧಿಕಾರಕ್ಕೆ ಬಂದರು. ದೊಡ್ಡ ತಿಮಿಂಗಲಗಳ ಬೃಹತ್ ಮಟ್ಟದ ಸಾಲವನ್ನು ಮನ್ನಾ ಮಾಡುತ್ತಾ ಜನರನ್ನು ಪಾತಾಳಕ್ಕೆ ತುಳಿದಿದ್ದಾರೆ. ಚಿತಾಗಾರಕ್ಕೂ ಜಿಎಸ್‌ಟಿ ವಿಧಿಸಿದ್ದಾರೆ. ಬಡವರು, ರೈತರು, ಕಾರ್ಮಿಕರು ಸೇರಿದಂತೆ ಯಾವ ವರ್ಗವೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಬಡವರು ಬಳಸುವ ಆಹಾರ ಪದಾರ್ಥಗಳು, ರೈತರು ಉಪಯೋಗಿಸುವ ಪಂಪ್‌ಸೆಟ್, ಮಕ್ಕಳು ಬಳಸುವ ಪೆನ್ಸಿಲ್ ಮೇಲೆಯೂ ತೆರಿಗೆ ಹಾಕಿದ್ದಾರೆ. ಪ್ಯಾಕಿಂಗ್ ಆದ 25 ಕೆಜಿ ಮೇಲ್ಪಟ್ಟಪದಾರ್ಥಗಳಿಗೆ ತೆರಿಗೆ ವಿಧಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಬಡವರು ಇವೆಲ್ಲವನ್ನೂ 25 ಕೆಜಿಗಿಂತ ಅಧಿಕವಾಗಿ ಖರೀದಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸ್ಟಾರ್ಟ್ ಅಪ್ ಸಿಟಿ ಆಗಿದ್ದ ಬೆಂಗಳೂರು ಈಗ ಶಟ್‌ಡೌನ್ ಸಿಟಿ: ರಾಮಲಿಂಗಾರೆಡ್ಡಿ
ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಎನ್.ಎ.ಹ್ಯಾರೀಸ್, ಸೌಮ್ಯಾರೆಡ್ಡಿ, ಮುಖಂಡರಾದ ನಾರಾಯಣಸ್ವಾಮಿ, ಮನೋಹರ್ ಮತ್ತಿತರರು ಪಾಲ್ಗೊಂಡಿದ್ದರು.
ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿರುವುದನ್ನು ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಕೋರಮಂಗಲದ ಜಿಎಸ್‌ಟಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪಾಲ್ಗೊಂಡಿದ್ದರು.
