* ನಾನು ಹಾಗೂ ಪ್ರಿಯಾಂಕ ಖರ್ಗೆ ಮೊದಲು ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಿದ್ದೆವು. * ಆಗ ಅಕ್ರಮವೇ ನಡೆದಿಲ್ಲ ಎನ್ನುತ್ತಿದ್ದವರು ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ* ಎಸಿಬಿಯನ್ನೂ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ
ಬೆಂಗಳೂರು(ಜು.08): ರಾಜ್ಯ ಸರ್ಕಾರವು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ನಮಗೊಂದು ನ್ಯಾಯ ಬಿಜೆಪಿಯವರಿಗೆ ಒಂದು ನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.
ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ನಿವಾಸದ ಮೇಲಿನ ಎಸಿಬಿ ದಾಳಿ ಬಗ್ಗೆ ಮಾತನಾಡಿದ ಅವರು, ವಿಧಾನಸಭೆ ಸಭಾಧ್ಯಕ್ಷರ ಅನುಮತಿ ಇಲ್ಲದೆ ದಾಳಿ ಆಗಿದೆ. ಬಿಜೆಪಿಗರ ಮೇಲೆ ದಾಳಿ ಮಾಡಲು ಮಾತ್ರ ವಿಧಾನಸಭೆ ಸಭಾಧ್ಯಕ್ಷರ ಅನುಮತಿ ಕೇಳಿದ್ದಾರೆ. ನಮಗೊಂದು ನ್ಯಾಯ ಹಾಗೂ ಬಿಜೆಪಿಗೊಂದು ನ್ಯಾಯ ಅನುಸರಿಸಲಾಗುತ್ತಿದೆ. ಎಸಿಬಿಯನ್ನೂ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದರು.
ಸ್ಟಾರ್ಟ್ ಅಪ್ ಸಿಟಿ ಆಗಿದ್ದ ಬೆಂಗಳೂರು ಈಗ ಶಟ್‌ಡೌನ್ ಸಿಟಿ: ರಾಮಲಿಂಗಾರೆಡ್ಡಿ
ಪಿಎಸ್‌ಐ ಹಗರಣದ ಬಗ್ಗೆ ಮಾತನಾಡಿದ ಅವರು, ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ಬಯಲಿಗೆ ಬಂದ ಬಳಿಕ ಹಿಂದಿನ ಸರ್ಕಾರದಲ್ಲೂ ಅಕ್ರಮ ನಡೆದಿತ್ತು ಎನ್ನುತ್ತಿದ್ದಾರೆ. ಆಗ ಅಕ್ರಮ ನಡೆದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಬೇಕಿತ್ತು. ನಾನು ಹಾಗೂ ಪ್ರಿಯಾಂಕ ಖರ್ಗೆ ಮೊದಲು ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಿದ್ದೆವು. ಆಗ ಅಕ್ರಮವೇ ನಡೆದಿಲ್ಲ ಎನ್ನುತ್ತಿದ್ದವರು ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
