ನವದೆಹಲಿ(ನ.01): ಕನ್ನಡ ರಾಜ್ಯೋತ್ಸವಕ್ಕೆ ವಿವಿಧ ಗಣ್ಯರು ಶುಭ ಕೋರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಅತ್ತ ಪ್ರಧಾನ ಮಂತ್ರಿ ಮೋದಿ ಹಾಗೂ ಅಮಿತ್ ಶಾ ಕೂಡಾ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಕೋರಿದ್ದು, ವಿಶೇಷವಾಗಿದೆ. 

ಟ್ವೀಟ್ ಮಾಡಿರುವ ಪಿಎಂ ಮೋದಿ 'ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ. ಅಲ್ಲದೇ ಕರ್ನಾಟಕದ ಪ್ರಗತಿಗೆ ತಮ್ಮ ಸರ್ಕಾರ ಸದಾ ಬದ್ಧವಾಗಿದ್ದು, ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಕರ್ನಾಟಕದ ಜನತೆಗೆ ‘ಕರ್ನಾಟಕ ರಾಜ್ಯೋತ್ಸವ’ದ ಶುಭಾಶಯಗಳು. ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಕರ್ನಾಟಕ ಸದಾ ಮಹತ್ವದ ಪಾತ್ರವನ್ನು ನಿಭಾಯಿಸುತ್ತಾ ಬಂದಿದೆ. ಮುಂಬರುವ ವರ್ಷಗಳಲ್ಲೂ ರಾಜ್ಯ ಮತ್ತಷ್ಟು ಸಮೃದ್ಧಿ ಹೊಂದಿ ಪ್ರಗತಿ ಸಾಧಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಇತ್ತ ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡಾ ಟ್ವೀಟ್ ಮಾಡಿ ನಾಡಿನ ಸಮಸ್ತ ಜನತೆಗೆ 65ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ಭಾಷೆ, ಸಂಸ್ಕೃತಿಗಳ ರಕ್ಷಣೆಯ ಜೊತೆಗೆ ಸಮೃದ್ಧ, ಆರೋಗ್ಯಪೂರ್ಣ, ಸಹಬಾಳ್ವೆಯ, ಅಭಿವೃದ್ಧಿಶೀಲ ಕರ್ನಾಟಕದ ನಿರ್ಮಾಣದ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರೂ ಒಂದಾಗಿ ಮುನ್ನಡೆಯೋಣ. ಹಸಿರಾಗಲಿ ಕರ್ನಾಟಕ, ಉಸಿರಾಗಲಿ ಕನ್ನಡ! ಎಂದು ಬರೆದಿದ್ದಾರೆ. ಇದರೊಂದಿಗೆ ಕರ್ನಾಟಕದ ನಕ್ಷೆ ಇರುವ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಟ್ವಿಟ್ ಮಾಡಿ ಕನ್ನಡ ರಾಜ್ಯೋತ್ಸವ ಎಂದರೆ.. ನಮ್ಮ ಜನ, ಭಾಷೆ, ಸಂಸ್ಕೃತಿ, ನೆಲ, ಜಲ ಎಲ್ಲವನ್ನೂ ಒಳಗೊಂಡ ಕನ್ನಡತನವನ್ನು ಉಳಿಸಿ-ಬೆಳೆಸಲು ದುಡಿದ-ಮಡಿದ ಹಿರಿಯ ಮಹಾಪುರುಷರಿಗೆ ತಲೆಬಾಗುವ ದಿನ. ಆ ಪುಣ್ಯಪುರುಷರನ್ನು ಒಡಲಾಳದ ಕೃತಜ್ಞತೆಯಿಂದ ಸ್ಮರಿಸೋಣ. ಕನ್ನಡ ಮೊದಲು, ನಾನು ಮೊದಲು ಕನ್ನಡಿಗ ಎಂದಿದ್ದಾರೆ.