ಮೋದಿ 1 ಲಕ್ಷ ಕೋಟಿ ಘೋಷಣೆ ದಾರಿ ತಪ್ಪಿಸುವ ಕೆಲಸ: ಮಲ್ಲಿಕಾರ್ಜುನ ಖರ್ಗೆ
20 ಲಕ್ಷ ಕೋಟಿ ಪ್ಯಾಕೇಜೇ ಇನ್ನೂ ಜನರಿಗೆ ಮುಟ್ಟಿಲ್ಲ| ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲ|ಕೇಂದ್ರ ಸರ್ಕಾರ ಹಿಂದೆಯೂ ಮಲತಾಯಿ ಧೋರಣೆ ತಾಳಿತ್ತು. ಈಗಲಾದರೂ ಮಲತಾಯಿ ಧೋರಣೆ ಬಿಟ್ಟು ರಾಜ್ಯದ ನೆರವಿಗೆ ಬರಬೇಕು: ಖರ್ಗೆ|
ಬೆಂಗಳೂರು(ಆ.10): ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ಲಾಕ್‌ಡೌನ್ ವೇಳೆ ಘೋಷಿಸಿದ್ದ 20 ಲಕ್ಷ ಕೋಟಿ ರು. ಪ್ಯಾಕೇಜ್ ಜನರನ್ನು ತಲುಪಿಲ್ಲ. ಇದೀಗ ಮತ್ತೆ ಒಂದು ಲಕ್ಷ ಕೋಟಿ ರು. ಪ್ಯಾಕೇಜ್ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯ 78ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಣ ಹಾಗೂ ಕೊರೋನಾ ಸಂಕಷ್ಟದಿಂದ ಬದುಕು ಕಳೆದುಕೊಂಡಿರುವವರ ನೆರವಿಗೆ ಬರಲು ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು
ನರೇಂದ್ರ ಮೋದಿ ಈಗಾಗಲೇ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಿಸಿದ್ದರು. ಇಲ್ಲಿಯವರೆಗೆ 75 ಸಾವಿರ ಮಂದಿಗೆ ಮಾತ್ರ ಅಲ್ಪ-ಸ್ವಲ್ಪ ಪರಿಹಾರ ತಲುಪಿದೆ. ಮೊದಲು ಘೋಷಿಸಿದ ಪ್ಯಾಕೇಜ್ ಬಹುಪಾಲು ಅನುಷ್ಠಾನವಾಗದಿರುವಾಗ ಮತ್ತೆ ಒಂದು ಲಕ್ಷ ಕೋಟಿ ರು. ಘೋಷಿಸಿರುವುದಾಗಿ ಹೇಳುತ್ತಿದ್ದಾರೆ. ಈ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
'ಪಿಎಂ ಕೇರ್ ಫಂಡ್‌ಗೆ ಚೀನಾ ಕಂಪನಿಯಿಂದ ಕೋಟಿ ಕೋಟಿ ಹಣ'
ನೆರೆ ನಿರ್ವಹಣೆಯಲ್ಲಿ ವಿಫಲ:
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಸರ್ಕಾರ ನಿರ್ವಹಣೆಯಲ್ಲಿ ವಿಫಲವಾಗಿದೆ. ಸಚಿವರಿಗೆ ಜವಾಬ್ದಾರಿ ಕೊಟ್ಟಿರಬಹುದು. ಯಾರಿಗೆ ಕೊಟ್ಟಿದ್ದಾರೆಯೋ ಅವರು ಸ್ಥಳಗಳಿಗೆ ಭೇಟಿ ನೀಡಬೇಕು. ಸಮಸ್ಯೆಯನ್ನು ಸರಿಪಡಿಸುವ ಕೆಲಸ ಮಾಡಬೇಕು. ಆದರೆ ಅಂತಹ ವಾತಾವರಣ ಇನ್ನೂ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಬೆನ್ನಲ್ಲೇ ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿತ್ತು. ಪ್ರಸ್ತುತ 12 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಹಲವರು ಕೊಚ್ಚಿ ಹೋಗಿದ್ದಾರೆ. ಸಾವಿರಾರು ಎಕರೆ ಬೆಳೆ ನಷ್ಟಉಂಟಾಗಿದೆ. ಕೇಂದ್ರ ಸರ್ಕಾರ ಹಿಂದೆಯೂ ಮಲತಾಯಿ ಧೋರಣೆ ತಾಳಿತ್ತು. ಈಗಲಾದರೂ ಮಲತಾಯಿ ಧೋರಣೆ ಬಿಟ್ಟು ರಾಜ್ಯದ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮುಖಂಡರಾದ ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ ಹಾಜರಿದ್ದರು.