ಪ್ರತಿಬಾರಿ ಮಳೆ ಬಂದ್ರು ಜಲಾವೃತವಾಗುವ ರೈನ್‌ಬೋ ಲೇಔಟ್(Rainbow Layout) ಜನರು ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು.

ವರದಿ : ಟಿ.ಮಂಜುನಾಥ ಹೆಬ್ಬಗೋಡಿ.

ಬೆಂಗಳೂರು (ಆ.30): ಹೈಟೆಕ್ ಸಿಟಿ, ಸಿಲಿಕಾನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ಮಳೆಯಾರ್ಭಟಕ್ಕೆ ನಲುಗಿಹೋಗಿದ್ದು, ಕೆಲ ಏರಿಯಾದ ಜನರ ಸ್ಥಿತಿ ಶೋಚನೀಯವಾಗಿದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆ ಬೆಂಗಳೂರಿಗರನ್ನು ಹೈರಾಣಾಗಿಸಿದೆ. ಬೆಂಗಳೂರು- ಸರ್ಜಾಪುರ ರಸ್ತೆಯಲ್ಲಿನ ರೈನ್ಬೋ ಡ್ರೈವ್ ಲೇಔಟ್ ನಿವಾಸಿಗಳ ಪಾಡು ಹೇಳತೀರದಂತಾಗಿದೆ. ಹೌದು ಸರ್ಜಾಪುರ ರಸ್ತೆ(Sarjapur Road)ಯಲ್ಲಿರುವ ರೈನ್ ಬೋ ಡ್ರೈವ್ ಬಡಾವಣೆ ನಿವಾಸಿಗಳು ಮಳೆಯಿಂದ ಸಾಕಷ್ಟು ಸಮಸ್ಯೆಯನ್ನ ಎದುರಿಸುವಂತಾಗಿದೆ. ಮಳೆ ಬಂತು ಅಂದ್ರೆ ಸಾಕು ಬಡಾವಣೆಗೆ ನುಗ್ಗುವ ಭಾರೀ ಪ್ರಮಾಣದ ನೀರು, ಲೇಔಟ್ ನಲ್ಲಿ ಐದಾರು ಅಡಿಗಳಷ್ಟು ಜಲಾವೃತಗೊಂಡು ಅಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲಾಗದಷ್ಟು ಸಮಸ್ಯೆ ಸಿಲುಕಿದ್ದಾರೆ. 

Bengaluru Rains; ಹೂಳು ತುಂಬಿ ರಾಜಕಾಲುವೆ ಬ್ಲಾಕ್‌, 30 ಮನೆಗೆ ನೀರು ನುಗ್ಗಿ ಅವಾಂತರ

ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ದೊಡ್ಡಕನ್ನಹಳ್ಳಿ(Doddakannahalli)ಯ ರೈನ್ ಬೋ ಡ್ರೈವ್ ಬಡಾವಣೆಗೆ ಮಳೆ ನೀರು ನುಗ್ಗಿ ಇಡೀ ಬಡಾವಣೆ ಜಲಾವೃತಗೊಂಡು ನಿವಾಸಿಗಳು ಮನೆಯಿಂದ ಹೊರಬರಲು ಹಾಗೂ ಒಳ ಹೋಗಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸಂಜೆ ಐದು ಗಂಟೆಯಾದ್ರು ಬಡಾವಣೆಯಲ್ಲಿ ತುಂಬಿದ್ದ ನೀರು ಕಡೆಮೆಯಾಗದೆ ಇದ್ದುದರಿಂದ ಅಗ್ನಿಶಾಮಕದಳದ ಸಿಬ್ಬಂದಿ ಬೋಟ್ ಮೂಲಕ ಜನರನ್ನ ರಕ್ಷಣೆ ಮಾಡಿ ಹೊರ ಕರೆದುಕೊಂಡು ಬರಬೇಕಾಯಿತು.

ಲೇಔಟ್ ಸಂಪೂರ್ಣ ಜಲಾವೃತಗೊಂಡಿದ್ದು ಮನೆಯೊಂದರಲ್ಲಿ ವಾಸವಿದ್ದ ವೃದ್ಧರೊಬ್ಬರು ಮನೆಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಅಕ್ಕಪಕ್ಕದ ಮನೆಯ ನಿವಾಸಿಗಳು ಹಾಗೂ ಕುಟುಂಬಸ್ಥರು ಹೊತ್ತು ತಂದರು. ಬಳಿಕ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಬೋಟ್ ಮೂಲಕ ವೃದ್ಧರನ್ನ ಹೊರಗೆ ಕರೆತಂದರು. ಕೆಲ ಹೊತ್ತು ಆಂಬ್ಯುಲೇನ್ಸ್ ಗಾಗಿ ಕಾಯುವಂತಾಯಿತು. ಆಂಬುಲೆನ್ಸ್ ಸಹ ಬಾರದ ಹಿನ್ನೆಲೆ ಅಗ್ನಿಶಾಮಕ ದಳದ ವಾಹನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರನ್ನ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. 

ಇನ್ನೊಂದೆಡೆ ವಯಸ್ಸಾದ ವೃದ್ಧೆಯೊಬ್ಬರು ಆಸ್ಪತ್ರೆಗೆ ಹೋಗಬೇಕಾಗಿದ್ದು ಅವರನ್ನು ವೀಲ್ ಚೇರ್ ಮೂಲಕ ಅಗ್ನಿಶಾಮಕ ದಳ ಸಿಬ್ಬಂದಿ ಬೋಟ್ ಮೂಲಕ ಏರಿಯಾದಿಂದ ಹೊರಗೆ ಕರೆದೊಯ್ಯಲಾಯಿತು. ಇಡೀ ಬಡಾವಣೆಯ ನಿವಾಸಿಗಳು ಇಷ್ಟೆಲ್ಲಾ ಸಮಸ್ಯೆಯನ್ನ ಎದುರಿಸುತ್ತಿದ್ರು ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಾದ ಅರವಿಂದ್ ಲಿಂಬಾವಳಿ ತಲೆಕೇಡಿಸಿಕೊಳ್ಳದೆ ಇರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

Karnataka Rain Updates: ಮಹಾ ಮಳೆಗೆ ತತ್ತರಿಸಿದ ಕರುನಾಡು: ಯಾವ ಜಿಲ್ಲೆಯಲ್ಲಿ ಹೇಗಿದೆ ವರುಣನ ಅಬ್ಬರ?
ಬಡಾವಣೆಯ ಗೇಟ್ ಬಳಿ ಇದ್ದ ಕೆನರಾ ಬ್ಯಾಂಕ್ ಹಾಗೂ ಸೂಪರ್ ಮಾರ್ಕೆಟ್ ಒಳಗೆ ನೀರು ನುಗ್ಗಿ ಅಲ್ಲಿದ್ದ ಯುಪಿಎಸ್ ಬ್ಯಾಟರಿಗಳು ಹಾಗೂ ಫ್ರಿಡ್ಜ್ ಗಳು ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಹೋದವು. ಅಗ್ನಿಶಾಮಕ ದಳದ ಸಿಬ್ಬಂದಿ ಹೊಗೆ ಬರುತ್ತಿದ್ದಂತೆ ಬೆಂಕಿಯನ್ನು ನಂದಿಸಿದರು. ಐದರಿಂದ ಆರು ಅಡಿಯಷ್ಟು ನೀರು ತುಂಬಿ ವಿಲ್ಲಾಗಳ ಒಳಗೆ ನಿಲ್ಲಿಸಿದ್ದ ಕಾರುಗಳು ಅರ್ಧದಷ್ಟು ಮುಳುಗಿ ಹೋಗಿದ್ದವು. ಹತ್ತಾರು ವರ್ಷಗಳ ಹಿಂದೆ ರೈನ್ ಬೋ ಲೇಔಟ್ ನಿರ್ಮಾಣ ಮಾಡಿದ್ದ ಮಾಲೀಕ ಸರಿಯಾದ ರೀತಿಯಲ್ಲಿ ಕಾಲುವೆಗಳನ್ನ ಮಾಡದೆ ಅವೈಜ್ಞಾನಿಕವಾಗಿ ಮಾಡಿದ್ದಾರೆ. ಇದರಿಂದ ಲೇಔಟ್ ಪಕ್ಕದಲ್ಲಿಯೇ ಇರುವ ಕೆರೆಯು ತುಂಬಿ ಕೋಡಿ ಬಿದ್ದು, ಲೇಔಟ್ ಸೇರಿ ಮಳೆ ನೀರು ಹೊರಹೋಗಲಾಗದೆ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. 

 ಒಟ್ಟಿನಲ್ಲಿ ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡು ಕಳೆದೆರಡು ದಿನಗಳಿಂದ ಅಲ್ಲಿನ ನಿವಾಸಿಗಳು ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿ ಸಾವು ನೋವುಗಳು ಕೂಡ ಸಂಭವಿಸುತ್ತಿವೆ. ಇನ್ನಾದ್ರು ಸಂಬಂಧ ಪಟ್ಟ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಾರ ಕಾದು ನೋಡಬೇಕಿದೆ.