Bengaluru Rains; ಹೂಳು ತುಂಬಿ ರಾಜಕಾಲುವೆ ಬ್ಲಾಕ್, 30 ಮನೆಗೆ ನೀರು ನುಗ್ಗಿ ಅವಾಂತರ
ಮಳೆಯಿಂದ ಹೂಳು ತುಂಬಿ ರಾಜಕಾಲುವೆ ಬ್ಲಾಕ್. ದೊಮ್ಮಲೂರು ವ್ಯಾಪ್ತಿಯಲ್ಲಿ ಘಟನೆ. ರಸ್ತೆಯಲ್ಲಿ 4 ಅಡಿ ನಿಂತ ನೀರು. ವಾಹನ ಸಂಚಾರ ಅಸ್ತವ್ಯಸ್ತ
ಬೆಂಗಳೂರು (ಆ.27): ರಾಜಧಾನಿಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಸುರಿಯುತ್ತಿರುವ ಮಳೆ ರಾತ್ರಿಯಿಡೀ ಸುರಿದು ನಗರದ ಹಲವೆಡೆ ಅವಾಂತರ ಸೃಷ್ಟಿಸಿದೆ. ಧಾರಾಕಾರ ಮಳೆಗೆ ದೊಮ್ಮಲೂರು, ಅನುಗ್ರಹ ಲೇಔಟ್, ಪುಟ್ಟೇನಹಳ್ಳಿ ಸೇರಿದಂತೆ ತಗ್ಗು ಪ್ರದೇಶದ ಸುಮಾರು 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಕಳೆದ ಮೂರ್ನಾಲ್ಕು ದಿನದಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಗುರುವಾರ ರಾತ್ರಿಯೂ ನಗರದ ವಿವಿಧ ಭಾಗದಲ್ಲಿ ಮಳೆಯಾಗಿತು. ಶುಕ್ರವಾರ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಕೆಲವಡೆ ತುಂತುರು ಮಳೆಯಾಗುತ್ತಿತ್ತು. ಮಧ್ಯಾಹ್ನ ಸುಮಾರು 15ರಿಂದ 20 ನಿಮಿಷ ಧಾರಾಕಾರ ಮಳೆ ಸುರಿಯಿತು. ಈ ವೇಳೆ ದೊಮ್ಮಲೂರಿನ 1ನೇ ಕ್ರಾಸ್‌ನ ಸಮೀಪದ ರಾಜಕಾಲುವೆಯಲ್ಲಿ ಭಾರೀ ಪ್ರಮಾಣ ಹೂಳು ತುಂಬಿಕೊಂಡು ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ಸುಮಾರು 3ರಿಂದ 4 ಅಡಿಯಷ್ಟುನೀರು ನಿಂತುಕೊಂಡಿತ್ತು. ಇನ್ನು ಅನುಗ್ರಹ ಲೇಔಟ್‌ನ ಸೆಕ್ಟರ್ 1 ಮತ್ತು 2ರಲ್ಲಿ ಐದು ಮನೆಗೆ, ಪುಟ್ಟೇನಹಳ್ಳಿಯ ನಾಲ್ಕು ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ. ಉಳಿದಂತೆ ಶಾಂತಿನಗರದ ಡಬ್ಬಲ್ ರಸ್ತೆ, ಎಚ್‌ಎಸ್‌ಆರ್ 6ನೇ ಹಂತದ ಮುಖ್ಯ ರಸ್ತೆ, ಕೋಣಕುಂಟೆ, ಮಂಗಮ್ಮನಪಾಳ್ಯದ ಮುಖ್ಯ ರಸ್ತೆಯಲ್ಲಿ ಬಾರಿ ಪ್ರಮಾಣ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಪುಟ್ಟೇನಹಳ್ಳಿಯ ಸರ್ಕಾರಿ ಶಾಲೆಯ ಆವರಣಕ್ಕೆ ಮಳೆ ನೀರು ನುಗ್ಗಿದ ವರದಿಯಾಗಿದೆ.
ನಗರದಲ್ಲಿ ಮೂರು ಗಂಡೆಯಲ್ಲಿ ಸರಾಸರಿ 41 ಮಿ.ಮೀ ಮಳೆಯಾಗಿದ್ದು, ಅತಿ ಹೆಚ್ಚು ಬೊಮ್ಮನಹಳ್ಳಿ ವಲಯದ ಪುಟ್ಟೇನಹಳ್ಳಿಯಲ್ಲಿ 41 ಮಿ.ಮೀ ಮಳೆಯಾಗಿದೆ. ಉಳಿದಂತೆ ಸಿಂಗಸಂದ್ರ 36, ಬಿಟಿಎಂ ಲೇಔಟ್ 35, ಈಜೀಪು 34.5, ದೊಮ್ಮಲೂರು 31, ಕೋರಮಂಗಲ ಹಾಗೂ ಬೇಗೂರಿನಲ್ಲಿ ತಲಾ 30.5, ಬಿಳ್ಳೇಕಹಳ್ಳಿ 30, ಅರಕೆರೆ, 23.5, ಸುಧಾಮಿನಿ ಲೇಔಟ್ 22.5, ಆರ್‌ಆರ್ ನಗರ 20.5, ವಿದ್ಯಾಪೀಠ 19, ನಾಗರಬಾವಿ ಹಾಗೂ ಎಚ್‌ಎಸ್‌ಆರ್ ತಲಾ 17 ಮಿ.ಮೀ ಮಳೆಯಾಗಿದೆ.
ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆಗಳು; ಸೇತುವೆ ಇಲ್ಲದೆ ಹತ್ತಾರು ಹಳ್ಳಿಗಳ ಪರದಾಟ!
ಶುಕ್ರವಾರ ಬೊಮ್ಮನಹಳ್ಳಿ, ಆರ್‌ಆರ್ ನಗರ, ಮಹದೇವಪುರ ಹಾಗೂ ದಕ್ಷಿಣ ವಲಯದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಉಳಿದ ಕಡೆ ಸಾಧಾರಣ ಮಳೆಯಾದ ವರದಿಯಾಗಿದೆ.
ಮಂಗಳೂರು: ಮೋದಿ ಸಮಾವೇಶಕ್ಕೆ ಮಳೆ ಭೀತಿ, ಕಾರ್ಯಕ್ರಮಕ್ಕೆ ವಿಶಾಲ ಜರ್ಮನ್ ಪೆಂಡಾಲ್ ಅಳವಡಿಕೆ
ಬಿಳೇಕಹಳ್ಳಿ ವಾರ್ಡ್ ನ ಅನುಗ್ರಹ ಬಡವಾಣೆಯ ಮೊದಲನೇ ಹಂತದ ಎರಡು ರಸ್ತೆಗಳಲ್ಲಿ ತುಂಬಿದ ನೀರು. ಬಿಟಿಎಂ ಲೇಔಟ್ ನ ಬಿಳೇಕಹಳ್ಳಿ ವಾರ್ಡ್ . ಒಂದು ಗಂಟೆ ಸತತವಾಗಿ ಮಳೆ ಸುರಿದ ಪರಿಣಾಮ ರಸ್ತೆಯ ಮೇಲೆ ನಿಂತಿರುವ ನೀರು. ಚರಂಡಿಯಲ್ಲಿ ನೀರು ಸಮರ್ಪಕವಾಗಿ ಹರಿದು ಹೋಗದೆ ಇರುವುದರಿಂದ ರಸ್ತೆ ಮೇಲೆ ನಿಂತ ನೀರು . ಮಳೆ ಬಿರುಸಾದ ಕೂಡಲೇ ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿ . ರಸ್ತೆಯ ಮೇಲೆ ನಿಂತಿರುವ ನೀರನ್ನ ಪಂಪ್ ಮೂಲಕ ಚರಂಡಿಗೆ ಬಿಡುತ್ತಿರುವ ಸಿಬ್ಬಂದಿ . ಮಳೆ ಜೋರಾದ ಕೂಡಲೆ ಬಿಬಿಎಂಪಿ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದ ಸ್ಥಳೀಯರು.